- ಜಗತ್ತಿಗೆ ಬೆರಗುಗೊಳಿಸಿದ್ದ ಕರ್ನಲ್ ಎಂ.ಬಿ.ರವೀಂದ್ರನಾಥ ನೇತೃತ್ವದ ಪಡೆ: ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾರ್ಗಿಲ್ ಯುದ್ಧದ ವೇಳೆ 2 ರಜಪೂತನಾ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಆಗಿದ್ದ ಕರ್ನಲ್ ಎಂ.ಬಿ.ರವೀಂದ್ರ ನೇತೃತ್ವದ ವೀರಯೋಧರು ಪ್ರತಿಕೂಲ ಪರಿಸ್ಥಿತಿ, ಹವಾಮಾನ, ಹಿಮಗಾಳಿ, ಆಮ್ಲಜನಕದ ತೀವ್ರ ಕೊರತೆಯ ಕಠಿಣ ಪರಿಸ್ಥಿತಿಯಲ್ಲೂ ವೀರಾವೇಶದಿಂದ ಪಾಕಿಸ್ತಾನಿ ಸೈನಿಕರನ್ನು ಅಲ್ಲಿಂದ ಓಡಿಸುವ ಮೂಲಕ ವಿಜಯ ಪತಾಕೆ ಹಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಭಾರತೀಯ ಭೂ ಸೇನೆಯ ಮಾಜಿ ಉಪ ಮುಖ್ಯಸ್ಥ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಸ್ಮರಿಸಿದರು.

ನಗರದ ಶ್ರೀ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾರ್ಗಿಲ್ ಯುದ್ಧದ ವೀರ ಸೇನಾನಿ, ವೀರಚಕ್ರ ಪುರಸ್ಕೃತ ಕರ್ನಲ್ ಮಾಗೋಡು ಬಸಪ್ಪ ರವೀಂದ್ರನಾಥ್ ರಚಿಸಿರುವ ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದ ವೇಳೆ ಮೂರು ಬೆಟಾಲಿಯನ್‌ಗಳ ದಾಳಿ, ಪ್ರಯತ್ನ ವಿಫಲವಾದಾಗ 2 ರಜಪೂತಾನಾ ರೈಫಲ್ಸ್‌ ಪಡೆ ಕರೆಸಲಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಜನರಲ್ ಮಲಿಕ್‌ ನಮ್ಮ ಕಮಾಂಡಿಂಗ್ ಆಫೀಸರ್ ಕರ್ನಲ್ ಎಂ.ಬಿ.ರವೀಂದ್ರನಾಥ ಅವರಿಗೆ ಹಿಂದೂಸ್ಥಾನದ ತುಂಡಾಗಿದ್ದು, ಅದನ್ನು ಉಳಿಸುವುದು ನಿಮ್ಮ ಕೈಯಲ್ಲಿದೆ ಎನ್ನುತ್ತಾರೆ ಎಂದರು. 2 ರಜಪೂತಾನಾ ರೈಫಲ್ಸ್‌ ದಾಳಿಯೂ ವಿಫಲವಾದರೆ ಟೋಲೋಲಿಂಗ್ ಬೆಟ್ಟವೇ ಪಾಕ್‌ ಪಾಲಾಗುತ್ತದೆಂಬ ಎಚ್ಚರಿಕೆ ನೀಡುತ್ತಾರೆ. ಆಗ ತಕ್ಷಣವೇ ಪ್ರತಿಕ್ರಿಯಿಸಿದ ಕರ್ನಲ್ ರವೀಂದ್ರನಾಥ, ಸರ್‌ ಇದು ರಜಪುತಾನಾ ರೈಫಲ್ಸ್‌. ನಮ್ಮ ಬೆಟಾಲಿಯನ್‌ನ ಇತಿಹಾಸದಲ್ಲೇ, ಡಿಕ್ಷನರಿಯಲ್ಲೇ ಸೋಲೆಂಬ ಪದವಿಲ್ಲ. ಕಾರ್ಗಿಲ್ ಯುದ್ಧದಲ್ಲಿ ಗೆದ್ದೇ ಗೆಲ್ಲುತ್ತೇವೆ. ಟೋಲೋಲಿಂಗ್ ಬೆಟ್ಟ ಹಿಂದೂಸ್ಥಾನದ ಅವಿಭಾಜ್ಯ ಅಂಗ. ಅದಕ್ಕೆ ಚ್ಯುತಿ ಆಗದಂತೆ ಕಾಪಾಡುತ್ತೇವೆಂಬ ಘೋಷಣೆ ಮಾಡುತ್ತಾರೆ. ಅದರಂತೆ ಕರ್ನಲ್ ರವೀಂದ್ರನಾಥ ನೇತೃತ್ವದ ಪಡೆ ಸವಾಲು, ಪ್ರತಿಕೂಲ ಪರಿಸ್ಥಿತಿ ಮೆಟ್ಟಿ ನಿಂತು, ಅಲ್ಲಿ ವಿಜಯ ಪತಾಕೆ ಹಾರಿಸಿ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವಂತಹ ಸಾಧನೆ ಮೆರೆಯುತ್ತಾರೆ ಎಂದು ಅವರು ವಿವರಿಸಿದರು.


-50 ಡಿಗ್ರಿ ತಾಪಮಾನ, ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುವ ಹಿಮಗಾಳಿ, ಆಮ್ಲಜನಕದ ತೀವ್ರ ಕೊರತೆ ಮಧ್ಯೆಯೂ ಪಾಕಿಸ್ತಾನಿ ಸೇನೆ ಬೆನ್ನು ತೋರಿಸಿ, ಓಡಿ ಹೋಗುವಂತೆ ಶೌರ್ಯ, ಸಾಹಸ, ಅಪ್ರತಿಮ ದೇಶಭಕ್ತಿಯನ್ನು ಕರ್ನಲ್ ರವೀಂದ್ರನಾಥ ನೇತೃತ್ವದ ರಜಪೂತ್ ರೈಫಲ್ಸ್ ಮೆರೆಯುತ್ತದೆ. ಕರ್ನಲ್ ರವೀಂದ್ರನಾಥ ನನಗಿಂತಲೂ 5 ವರ್ಷ ಹಿರಿಯರು. 1999ರಲ್ಲಿ ಕಾರ್ಗಿಲ್ ಯುದ್ಧದ ವೇಳೆ ನಾನು ಉತ್ತರ ಪ್ರದೇಶದ ಮೀರತ್‌ನಲ್ಲಿದ್ದೆ. ಆಗ ನಾವು ಸ್ಟ್ರೈಕ್ ಕಾಪ್ಸ್‌ನ ಭಾಗವಾಗಿದ್ದೆವು. ಪಾಕ್ ದಾಳಿ ಬೇರೆಡೆ ಹರಡಿದರೆ, ತಕ್ಷಣವೇ ತಿರುಗೇಟು ನೀಡುವುದಕ್ಕೆ ನಾವು ಸಜ್ಜಾಗಿದ್ದ ದಿನಗಳವು ಎಂದು ಅವರು ಮೆಲಕು ಹಾಕಿದರು.

ಯುದ್ಧದ ಪ್ರತಿ ಕ್ಷಣದ ಮಾಹಿತಿ ನಮಗೆ ಸಿಗುತ್ತಿತ್ತು. ನಮ್ಮ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಗಗನ್ ವರ್ಮಾ ನಿತ್ಯವೂ ಸಂಜೆ ಯುದ್ಧದ ಪರಿಸ್ಥಿತಿ, ಟೋಲೋಲಿಂಗ್ ವಶಪಡಿಸಿಕೊಂಡಿದ್ದು, ಶತೃಗಳನ್ನು ಸೆರೆಹಿಡಿದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಯುದ್ಧದಲ್ಲಿ ನಮ್ಮ ಅಧಿಕಾರಿಗಳು, ಜವಾನರು ಹುತಾತ್ಮರಾದ ಸುದ್ದಿ ಕೇಳಿ ನಮಗೆ ದುಃಖ‍ವಾಗಿ, ರಕ್ತ ಕುದಿಯುತ್ತಿತ್ತು. ಮತ್ತೊಂದು ಕಡೆ ನಮ್ಮ ದೇಶವು ನಮ್ಮ ಅಧಿಕಾರಿ, ಯೋಧರ ತ್ಯಾಗ, ಬಲಿದಾನ, ಪರಾಕ್ರಮದಿಂದ ಗೆಲ್ಲುತ್ತಿರುವುದು ನಮ್ಮಲ್ಲಿ ಹೆಮ್ಮೆ ಮೂಡಿಸುತ್ತಿತ್ತು. ಕಡೆಗೂ ನಾವು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ಥಾನವನ್ನು ಬಗ್ಗು ಬಡಿಯುವ ಮೂಲಕ ಇಡೀ ಜಗತ್ತಿಗೆ ಭಾರತದ ಶಕ್ತಿ, ನಮ್ಮ ಸೇನಾಧಿಕಾರಿಗಳು, ವೀರ ಯೋಧರ ಆತ್ಮಸ್ಥೈರ್ಯ, ಹೋರಾಟದ ಕಿಚ್ಚು ಎಂತಹದ್ದು ಎಂಬದನ್ನು ಸಾರಿದ ವಿಜಯವೂ ಆದಾಗಿತ್ತು ಎಂದು ಅವರು ಸ್ಮರಿಸಿದರು.

ಆಪರೇಷನ್ ಮೇಘದೂರ್ 1985ರ ಅಂತ್ಯದಲ್ಲಿ ಆರಂಭವಾಗಿತ್ತು. ಸಿಯಾಚಿನ್‌ 18-21 ಸಾವಿರ ಅಡಿ ಎತ್ತರದಲ್ಲಿದೆ. ಅಲ್ಲಿ ಮೈನಸ್ 50 ಡಿಗ್ರಿ ತಾಪಮಾನ ಇರುತ್ತದೆ. ಅಂತಹ ಜಾಗದಲ್ಲಿ ನಮ್ಮ ಬೆಟಾಲಿಯನ್ ಕೆಲಸ ಮಾಡಿತ್ತು. ಅಂದು ಅಲ್ಲಿ ಯಾವುದೇ ಕದನ ಇರಲಿಲ್ಲ. ಪಾಕಿಸ್ತಾನದಿಂದ ನಿರಂತರ ಗುಂಡಿನ ದಾಳಿ ನಡೆಯುತ್ತಿತ್ತು. ಕಳೆದ 6 ತಿಂಗಳಲ್ಲಿ ನಾವು 25 ಸೈನಿಕರನ್ನು ಕಳೆದುಕೊಂಡಿದ್ದು, 89 ಯೋಧರು ಗಾಯಗೊಂಡಿದ್ದರು. ಸಿಯಾಚಿನ್‌ನಲ್ಲಿ ನಾವು ಬರೀ ಹವಾಮಾನದ ವಿರುದ್ಧ ಹೋರಾಡಬೇಕಿತ್ತು. ಆದರೆ, ಕಾರ್ಗಿಲ್‌ನಲ್ಲಿ ಅಷ್ಚೇ ಎತ್ತರ ಮತ್ತು ಕಡಿಮೆ ಆಮ್ಲಜನಕವಿರುವ ಜಾಗದಲ್ಲಿ ನಮ್ಮ ಸೈನಿಕರು ಶತ್ರುಗಳಾದ ಪಾಕ್‌ ಸೈನಿಕರನ್ನು ಓಡಿಸಿದ್ದು ಸಾಮಾನ್ಯ ಸಂಗತಿಯಲ್ಲ. ಅಂತಹ ಅಸಾಧ್ಯ ಶೌರ್ಯ, ಸಾಹಸ ಮೆರೆದವರು ವೀರಚಕ್ರ ಪುರಸ್ಕೃತ ಎಂ.ಬಿ. ರವೀಂದ್ರನಾಥ ಮತ್ತು ರಜಪೂತ ರೈಫಲ್ಸ್ ಯೋಧರು. ಈ ಯೋಧರಿಂದಾಗಿ ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯ ಸಾಧಿಸಿತು ಎಂದು ಅವರು ಶ್ಲಾಘಿಸಿದರು.

ಯುದ್ಧದಲ್ಲಿ ಕಮಾಂಡಿಂಗ್ ಆಫೀಸರ್ ಜವಾಬ್ದಾರಿ ಹಿರಿದಾಗಿರುತ್ತದೆ. ಯುದ್ಧದಲ್ಲಿ ಸೈನಿಕರು, ಜೆಸಿಒ, ಯುವ ಅಧಿಕಾರಿಗಳನ್ನು ಮುನ್ನಡೆಸುವುದು, ಆ ಯೋಧರಲ್ಲಿ ಸ್ಪೂರ್ತಿ ತುಂಬುವುದು ಹೇಗೆಂಬುದನ್ನು ಕರ್ನಲ್ ರವೀಂದ್ರನಾಥ ಪುಸ್ತಕ ಅತ್ಯುತ್ತಮವಾಗಿ ಚಿತ್ರಿಸಿದೆ. ಯುದ್ಧವೆಂದರೆ ಕೇವಲ ಹೋರಾಟವಷ್ಟೇ ಅಲ್ಲ. ಅದರ ಹಿಂದೆ ಸೇನಾ ಸರಬರಾಜು (ಲಾಜಿಸ್ಟಿಕ್ಸ್) ದೊಡ್ಡ ಸವಾಲು ಸಹ ಇರುತ್ತದೆ. 10ರಿಂದ 17 ಸಾವಿರ ಅಡಿ ಎತ್ತರಕ್ಕೆ ಆಹಾರ, ನೀರು, ಯುದ್ಧೋಪಕರಣ ತಲುಪುದು ತ್ರಾಸದ ಕೆಲಸ. ಅಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ದಿನಗಳಲ್ಲಿ ಕಷ್ಟದ ಕೆಲಸ ಮಾಡದ ಸ್ವೀಪರ್ಸ್‌, ಕ್ಲರ್ಸ್, ಅಡುಗೆಯವರನ್ನೂ ಪ್ರೇರೇಪಿಸಿ, ಕೆಲಸಕ್ಕೆ ಬಳಸಲಾಗಿತ್ತು. ಬೆಟಾಲಿಯನ್‌ಗೆ ಕಮಾಂಡಿಂಗ್ ಅಧಿಕಾರಿ ದೇವರಿಗೆ ಸಮಾನ. ಜೀವದ ಹಂಗು ತೊರೆದು ಹೋರಾಡುವಂತೆ ಸೈನಿಕರಲ್ಲಿ ಸ್ಪೂರ್ತಿ ತುಂಬಿ, ಹುರಿದುಂಬಿಸುತ್ತಾರೆ ಎಂದು ತಿಳಿಸಿದರು.

ಕಾರ್ಗಿಲ್‌ನ ನಿವೃತ್ತ ವೀರಯೋಧ, ಮಹಾವೀರ ಚಕ್ರ ಪುರಸ್ಕೃತ ನಾಯಕ್ ದಿಗೇಂದ್ರ ಕುಮಾರ ಮಾತನಾಡಿ, 2 ರಜಪೂತ್ ಬೆಟಾಲಿಯನ್ ಸೇನೆಯಲ್ಲೇ ಅತ್ಯಂತ ಧೈರ್ಯಶಾಲಿ ಮತ್ತು ಅತೀ ಹೆಚ್ಚು ಪದಕಕ್ಕೆ ಪಾತ್ರವಾದ ಶೌರ್ಯ, ಇತಿಹಾಸ ಹೊಂದಿದೆ. ಇದು ಕೇವಲ ಪಡೆಯಲ್ಲ, ಒಂದು ಕುಟುಂಬದಂತೆ. ಕಾರ್ಗಿಲ್ ಯುದ್ಧದಲ್ಲಿ ಒಂದೇ ಕುಟುಂಬದ ಮೂರು ತಲೆಮಾರುಗಳು ಒಟ್ಟಾಗಿ ಹೋರಾಡಿದ ಉದಾಹರಣೆಯೂ ನಮ್ಮಲ್ಲಿದೆ. ಯುದ್ಧ ಗೆದ್ದ ನಂತರ ವಿಜಯದ ಸುದ್ದಿಯನ್ನು ಕರ್ನಲ್ ರವೀಂದ್ರನಾಥ ಅವರಿಗೆ ತಲುಪಿಸಿ, ಇದು ಕಾರ್ಗಿಲ್ ಯುದ್ಧದ ಮಹತ್ವದ ತಿರುವು ಎಂದು ಘೋಷಿಸಲಾಯಿತು. ಕಾರ್ಗಿಲ್ ಯುದ್ಧಕ್ಕೆ ಮೊದಲ ಜಯ ತಂದು ಕೊಟ್ಟ ಇಂತಹ ವೀರರನ್ನು ಕರ್ನಾಟಕದ ಭೂಮಿ ಹಾಗೂ ಇಡೀ ದೇಶ ಸದಾ ಗೌರವಿಸುತ್ತದೆ ಎಂದು ಭಾವುಕರಾದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಿವಂಗತ ಕರ್ನಲ್ ಮಾಗೋಡು ಬಸಪ್ಪ ರವೀಂದ್ರನಾಥರ ಧರ್ಮಪತ್ನಿ ಅನಿತಾ ರವೀಂದ್ರನಾಥ್, ಕಕ್ಕರಗೊಳ್ಳ ಕೆ.ಜಿ.ಬಸವನಗೌಡ್ರು, ಎಂ.ಬಿ. ಹಾಲಸ್ವಾಮಿ, ಶಿವಕುಮಾರ ಇತರರು ಇದ್ದರು. ಕರ್ನಲ್ ರವೀಂದ್ರನಾಥರ ಕುಟುಂಬ ಸದಸ್ಯರಾದ ಸರೋಜಮ್ಮ, ಶರ್ಮಿಳಾ ಪುಸ್ತಕದ ಆಯ್ದ ಭಾಗಗಳನ್ನು ಓದಿದರು.

- - -

(ಬಾಕ್ಸ್‌-1)

* ಕಾರ್ಗಿಲ್ ಯುದ್ಧ ಕುರಿತ ಪುಸ್ತಕ ಎಲ್ಲರೂ ಓದಬೇಕು: ಡಾ.ಪ್ರಭಾ

ದಾವಣಗೆರೆ: ಕಾರ್ಗಿಲ್‌ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ದಿವಂಗತ ಕರ್ನಲ್ ಎಂ.ಬಿ.ರವೀಂದ್ರನಾಥ ಬರೆದ ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು ಪುಸ್ತಕವು ಭಾರತೀಯ ಸೈನಿಕರ ಸಾಹಸ, ಪ್ರತಿಕೂಲ ಪರಸ್ಥಿತಿ, ಸನ್ನಿವೇಶದಲ್ಲೂ ಅಪ್ರತಿಮ ದೇಶ ಪ್ರೇಮ ಮೆರೆಯುವ ಮೂಲಕ ಕಾರ್ಗಿಲ್ ವಿಜಯ ತಂದಿದ್ದ ಕ್ಷಣಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು. ನಗರದ ಶ್ರೀ ಗುರು ಬಕ್ಕೇಶ್ವರ ಕಲ್ಯಾಣ ಮಂದಿರದಲ್ಲಿ ಭಾನುವಾರ ನಮ್ಮ ವೀರಯೋಧರು, ವೀರಚಕ್ರ ಪುರಸ್ಕೃತ ದಿವಂಗತ ಕರ್ನಲ್ ಎಂ.ಬಿ. ರವೀಂದ್ರನಾಥ ಅವರು ಬರೆದಿರುವ ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾರ್ಗಿಲ್ ವಾರ್‌: ದಿ ಟರ್ನಿಂಗ್ ಪಾಯಿಂಟ್ ಕೃತಿಯನ್ನು ಎಂ.ಬಿ. ರವೀಂದ್ರನಾಥ ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಈ ಪುಸ್ತಕ ಬೆಂಗಳೂರಿನಲ್ಲಿ ಅಭಿಮಾನಿಗಳು, ಸ್ನೇಹಿತರ ಬಳಗ ಹಾಗೂ ಕುಟುಂಬ ಸದಸ್ಯರಿಂದ ಬಿಡುಗಡೆಯಾಗಿತ್ತು ಎಂದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಹಿನ್ನೆಲೆ, ಯುದ್ಧದ ಪ್ರಮುಖ ಘಟನೆಗಳು, ಭಾರತೀಯ ಸೈನಿಕರ ಶೌರ್ಯ, ಸಾಹಸ, ಭಾರತದ ವಿಜಯ ಪತಾಕೆ ಹಾರಿಸಿದ ಕ್ಷಣಗಳು, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕಾರ್ಗಿಲ್‌ ಸಂಘರ್ಷ ಹೇಗೆ ಆರಂಭವಾಯಿತು, ಅದು ದೇಶದ ಇತಿಹಾಸದಲ್ಲಿ ಹೇಗೆ ಮಹತ್ವದ ತಿರುವಾಗಿ ಪರಿಣಿಮಿಸಿತು ಎಂಬುದನ್ನು ವಿವರಿಸುವ ಕರ್ನಲ್ ಎಂ.ಬಿ.ರವೀಂದ್ರನಾಥ ಇಂಗ್ಲೀಷ್‌ನಲ್ಲಿ ಬರೆದಿದ್ದ ಕಾರ್ಗಿಲ್‌ ವಾರ್‌: ದಿ ಟರ್ನಿಂಗ್ ಪಾಯಿಂಟ್ ಪುಸ್ತಕ ಎಲ್ಲರ ಆಸೆಯಂತೆ, ಸಮಸ್ತ ಕನ್ನಡಿಗರಿಗೂ ಓದಲು ಅನುವಾಗುವಂತೆ ಕನ್ನಡ ಭಾಷೆಗೆ ಅನುವಾದಗೊಂಡಿದೆ. ಅದನ್ನು ಬಿಡುಗಡೆ ಮಾಡಿರುವುದು ನನಗೆ ಹಮ್ಮೆ ತಂದಿದೆ ಎಂದು ಹೇಳಿದರು. ಕರ್ನಲ್ ಎಂ.ಬಿ.ರವೀಂದ್ರನಾಥ ತಮ್ಮ ಯುದ್ಧದ ಅನುಭವಗಳು, ಯುದ್ಧದ ಸಮಯದಲ್ಲಿ ತೆಗೆದುಕೊಂಡ ದಿಟ್ಟ ಕ್ರಮಗಳ ಬಗ್ಗೆಯೂ ಬರೆದಿದ್ದಾರೆ. ಈ ಪುಸ್ತಕವನ್ನು ನಾನೂ ಓದಿದ್ದೇನೆ. ಪುಸ್ತಕದಲ್ಲಿ ನಾಲ್ಕನೇ ಅಧ್ಯಾಯ ಹಾಗೂ 42ನೇ ಪುಟದ ಸಾಲುಗಳು ನನ್ನ ಮನಸ್ಸಿಗೆ ಹತ್ತಿರವಾದ ಸಂಗತಿಯಾಗಿವೆ. ಪ್ರತಿಯೊಬ್ಬರೂ ಈ ಪುಸ್ತಕವವನ್ನು ಓದಬೇಕು. ವಿಶೇಷವಾಗಿ ವಿದ್ಯಾರ್ಥಿ, ಯುವಜನರು ನಮ್ಮ ಸೇನೆ, ನಮ್ಮ ವೀರಯೋಧರ ಬಗ್ಗೆ ಅಭಿಮಾನ, ಹೆಮ್ಮೆಪಡುವಂತಹ ಘಟನೆಗಳನ್ನು ಕರ್ನಲ್ ಎಂ.ಬಿ. ರವೀಂದ್ರನಾಥ ಉಲ್ಲೇಖಿಸಿದ್ದು, ಎಲ್ಲರಿಗೂ ಸ್ಪೂರ್ತಿ ತುಂಬುವ ಪುಸ್ತಕ ಇದಾಗಿದೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

- - -

(ಬಾಕ್ಸ್‌-2)

* ಕಹಿ ಸತ್ಯವನ್ನೂ ದಾಖಲಿಸಿದ ಕರ್ನಲ್ ರವೀಂದ್ರನಾಥ!

ಸಾಮಾನ್ಯವಾಗಿ ಯುದ್ಧದಲ್ಲಿ ಅಧಿಕಾರಿಗಳು ಮತ್ತು ಸೈನಿಕರ ಮಧ್ಯೆ ಯಾರನ್ನು ಮೊದಲು ಕಳಿಸಬೇಕೆಂಬ ಗೊಂದಲ ಸಹಜ. ಅಧಿಕಾರಿಗಳು ಮುಂದೆ ಹೋಗಿ ಯುದ್ಧ ಮಾಡಿದರೆ ಇಡೀ ತಂಡ ನಾಯಕನೇ ಇಲ್ಲದಂತಾಗುತ್ತದೆ. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಕರ್ನಲ್ ರವೀಂದ್ರನಾಥ ಹಿರಿಯ ಅಧಿಕಾರಿಗಳು ಹುತಾತ್ಮರಾದಾಗ ಮತ್ತೊಬ್ಬ ಯುವ ಜೆಸಿಒಗೆ ಜವಾಬ್ದಾರಿ ನೀಡಿ, ಮುನ್ನಡೆಸಿದ್ದರು. ಅದನ್ನೆಲ್ಲಾ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಯುದ್ಧ ಪುಸ್ತಕಗಳಲ್ಲಿ ಸಾಮಾನ್ಯವಾಗಿ ಎಲ್ಲವೂ ಚೆನ್ನಾಗಿ ನಡೆದಿರುತ್ತದೆಂದು ಬರೆಯಲಾಗುತ್ತದೆ. ಆದರೆ, ಯುದ್ಧಕ್ಕೆ ಹೋಗಲು ನಿರಾಕರಿಸುವ ಶೇ.1ರಷ್ಟು ಜನರ ನಕಾರಾತ್ಮಕತೆಯೂ ಇಡೀ ವಾತಾವರಣ ಕೆಡಿಸಬಲ್ಲದು. ಕರ್ನಲ್ ರವೀಂದ್ರನಾಥ್ ಅಂತಹ ಕಹಿ ಸತ್ಯವನ್ನು, ಆದೇಶ ಪಾಲಿಸದ ಅಧಿಕಾರಿ ಹೆಸರನ್ನು ಉಲ್ಲೇಖಿಸಿ ಧೈರ್ಯದಿಂದ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪುಸ್ತಕ ಪ್ರತಿಯೊಬ್ಬರಿಗೂ ಕಲಿಯಲು ಹಲವು ಪಾಠಗಳನ್ನೂ ಒಳಗೊಂಡಿದೆ ಎಂದು ಭಾರತೀಯ ಭೂ ಸೇನೆಯ ಮಾಜಿ ಉಪ ಮುಖ್ಯಸ್ಥ, ನಿವೃತ್ತ ಲೆಫ್ಟಿನಂಟ್ ಜನರಲ್ ಬಿ.ಎಸ್. ರಾಜು ಹೇಳಿದರು.

- - -

-17ಕೆಡಿವಿಜಿ11, 12: ದಾವಣಗೆರೆಯಲ್ಲಿ ಭಾನುವಾರ ಕಾರ್ಗಿಲ್ ಯುದ್ಧದ ವೀರ ಸೇನಾನಿ, ವೀರಚಕ್ರ ಪುರಸ್ಕೃತ ಕರ್ನಲ್ ಮಾಗೋಡು ಬಸಪ್ಪ ರವೀಂದ್ರನಾಥ್ ರಚಿಸಿರುವ ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು ಪುಸ್ತಕ ಬಿಡುಗಡೆ ಮಾಡಲಾಯಿತು.