ಕನ್ನಡಪ್ರಭ ವಾರ್ತೆ ಸಿರಿಗೆರೆ
ಎಲ್ಲಾ ಜಾತಿ ಜನಾಂಗದವರ ಹಿತ ಕಾಯುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿದುಕೊಂಡು ಕ್ಷೇತ್ರದ 493 ಹಳ್ಳಿಗಳ ಜನ ಗೌರವದಿಂದ ಬದುಕಬೇಕೆಂಬ ಆಲೋಚನೆಯಿಟ್ಟುಕೊಂಡು ಕೆಲಸ ಮಾಡುವ ರಾಜಕಾರಣಿ ನಾನು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಚೌಲಿಹಳ್ಳಿ ಗ್ರಾಮದಲ್ಲಿ 1.25 ಕೋಟಿ ರು. ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ಎಲ್ಲಾ ಕಡೆ ಸಿಸಿ ರಸ್ತೆಯಾಗಿದೆ. ಅಧಿಕಾರ ಶಾಶ್ವತವಲ್ಲ. ಹುಟ್ಟು-ಸಾವಿನ ನಡುವೆ ಸಿಕ್ಕಿರುವ ಅಧಿಕಾರವಧಿಯಲ್ಲಿ ಹತ್ತಾರು ಜನ ಮೆಚ್ಚುವಂತ ಕೆಲಸ ಮಾಡಬೇಕು. ಮತದಾರರಿಂದ ಋಣಪಾತಕ ಅನ್ನಿಸಿಕೊಳ್ಳಬಾರದು. ತಾಲೂಕಿನಾದ್ಯಂತ ಎಲ್ಲಾ ಕಡೆ ಸಿಸಿ ರಸ್ತೆ, ಕರೆಂಟ್, ಕುಡಿಯುವ ನೀರು, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು, ಶಾಲಾ-ಕಾಲೇಜು, ಆಸ್ಪತ್ರೆಗಳ ನಿರ್ಮಾಣವಾಗಿದೆ. ಎರಡ್ಮೂರು ತಿಂಗಳಲ್ಲಿ ವಾಣಿವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದೆಂದು ತಿಳಿಸಿದರು.ಬಡವರ ಮಕ್ಕಳಿಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಿಗಲಿ ಎನ್ನುವ ಉದ್ದೇಶವಿಟ್ಟುಕೊಂಡು ತಾಲೂಕಿನಾದ್ಯಂತ 13 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ.
ಬೆಳಗ್ಗೆ ಮನೆ ಬಾಗಿಲಿಗೆ ಹೋಗಿ ಮಕ್ಕಳನ್ನು ಕರೆತಂದು ಸಂಜೆ ಸುರಕ್ಷಿತವಾಗಿ ಮನೆಗೆ ತಲುಪಿಸಲು ನನ್ನ ಅನುದಾನದಲ್ಲಿ ಬಸ್‍ಗಳನ್ನು ಬಿಟ್ಟಿದ್ದೇನೆ. ಭಾರತದಲ್ಲಿ ಯಾವ ಶಾಸಕರು ಸರ್ಕಾರಿ ಶಾಲೆಗಳಿಗೆ ಬಸ್‍ಗಳ ವ್ಯವಸ್ಥೆ ಕಲ್ಪಿಸಿಲ್ಲ. ಮಕ್ಕಳಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಊಟ, ಮೊಟ್ಟೆ, ಬಾಳೆಹಣ್ಣು, ಪೌಷ್ಠಿಕಾಂಶವುಳ್ಳ ಕಾಳುಗಳನ್ನು ನೀಡಲಾಗುವುದಲ್ಲದೆ. ಪಠ್ಯಪುಸ್ತಕ, ನೋಟ್‍ಬುಕ್‍ಗಳನ್ನು ಪೂರೈಸಲಾಗುವುದು. ಪಿಯುಸಿ ಮುಗಿದ ಮೇಲೆ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ನಾಗೇಂದ್ರ ಮಾತನಾಡಿ, ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ಶಾಸಕ ಚಂದ್ರಪ್ಪನವರಲ್ಲಿ ಹುಡುಕಿ ಹುಡುಕಿ ಕೆಲಸ ಮಾಡುವ ಜಾಣ್ಮೆಯಿದೆ. ಹಿಂದಿನ ಶಾಸಕರು ಕೆಲಸ ಮಾಡಿದ್ದಾರೆ. ಆದರೆ ಚಂದ್ರಣ್ಣನವರು ಮಾಡಿರುವ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಮತದಾರರ ಮನದಲ್ಲಿ ಅಚ್ಚಳಿಯದೆ ಉಳಿದಿರುವುದರಿಂದ ಚುನಾವಣೆಯಲ್ಲಿ ಯೋಚಿಸಿ ಮತ ನೀಡಿದ ಪರಿಣಾಮ ಡಾಂ.ಚಂದ್ರಪ್ಪನವರು ಗೆಲುವು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಬಿಜೆಪಿ ಉಪಾಧ್ಯಕ್ಷ ಶೈಲೇಶ್‍ಕುಮಾರ್, ಮಂಜುನಾಥ, ಡಿ.ಎಸ್.ಪ್ರವೀಣ್‍ಕುಮಾರ್, ಕಲ್ಲೇಶ್, ಶಿವಣ್ಣ, ನಾಗೇಂದ್ರಣ್ಣ, ಶೇಖರಣ್ಣ, ಕಲ್ಲಣ್ಣ, ಬಸವರಾಜ್, ರಾಜಣ್ಣ, ಕೊಟ್ರೇಶ್, ತಿಪ್ಪೇಶ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.