ಜಿಲ್ಲೆಯಲ್ಲಿ 2-3 ದಿನಗಳಿಂದ ಸುರಿದ ಭಾರೀ ಮಳೆ, ಗಾಳಿಗೆ ಸಿಲುಕಿ ಸುಮಾರು 622 ಎಕರೆ ಪ್ರದೇಶದಲ್ಲಿದ್ದ ಬತ್ತ, ಮೆಕ್ಕೆ ಇತರೆ ಬೆಳೆಗಳು, ನೂರಾರು ಅಡಕೆ ಮರಗಳು ಧರೆಗುರುಳಿದ್ದು, ಬತ್ತದ ಬೆಳೆಗಳು ನಾಶವಾಗಿ, ಕೋಟ್ಯಂತರ ರು. ನಷ್ಟ ಸಂಭವಿಸಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
- ಹತ್ತಾರು ಮನೆಗಳಿಗೆ ತೀವ್ರ ಹಾನಿ । ಬತ್ತ, ಮೆಕ್ಕೆ, ಅಡಕೆ, ಬಾಳೆ ಬೆಳೆಗಳ ಹಾನಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯಲ್ಲಿ 2-3 ದಿನಗಳಿಂದ ಸುರಿದ ಭಾರೀ ಮಳೆ, ಗಾಳಿಗೆ ಸಿಲುಕಿ ಸುಮಾರು 622 ಎಕರೆ ಪ್ರದೇಶದಲ್ಲಿದ್ದ ಬತ್ತ, ಮೆಕ್ಕೆ ಇತರೆ ಬೆಳೆಗಳು, ನೂರಾರು ಅಡಕೆ ಮರಗಳು ಧರೆಗುರುಳಿದ್ದು, ಬತ್ತದ ಬೆಳೆಗಳು ನಾಶವಾಗಿ, ಕೋಟ್ಯಂತರ ರು. ನಷ್ಟ ಸಂಭವಿಸಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯಲ್ಲಿ ಮಳೆ, ಗಾಳಿಯಿಂದಾಗಿ ಚನ್ನಗಿರಿ ತಾಲೂಕು ಒಂದರಲ್ಲೇ ಸುಮಾರು 540 ಎಕರೆ ಬತ್ತದ ಬೆಳೆ ನಾಶವಾಗಿದ್ದು, ಹತ್ತಾರು ಮನೆಗಳು ಹಾನಿಗೀಡಾಗಿವೆ. ಮಾಯಕೊಂಡ ಕ್ಷೇತ್ರದ ಬಸವಾಪಟ್ಟಣ ವ್ಯಾಪ್ತಿಯಲ್ಲಿ ನೂರಾರು ಅಡಕೆ ಮರಗಳು ಸಂಪೂರ್ಣ ತುಂಡಾಗಿ ಬಿದ್ದಿದ್ದು, ಬೆಳೆಗಾರರು ತೀವ್ರ ಆತಂಕಕ್ಕೆ ತುತ್ತಾಗಿದ್ದಾರೆ.ಮಳೆ, ಗಾಳಿಯಿಂದಾಗಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 12 ಮನೆಗಳು ಹಾನಿಗೀಡಾಗಿದ್ದು, ಸುಮಾರು ₹4 ಲಕ್ಷ ರು. ನಷ್ಟ ಸಂಭವಿಸಿದೆ. ದಾವಣಗೆರೆ ತಾಲೂಕಿನಲ್ಲಿ 37 ಎಕರೆ ಬೆಳೆ, ಹರಿಹರದಲ್ಲಿ 30 ಎಕರೆ ಬತ್ತದ ಬೆಳೆ, ಅಡಕೆ ತೋಟ, 20 ತೇಗದ ಮರಗಳು, ಜಗಳೂರಿನಲ್ಲಿ 15 ಎಕರೆ, ಚನ್ನಗಿರಿಯಲ್ಲಿ 540 ಎಕರೆ ಸೇರಿದಂತೆ ಒಟ್ಟು 622 ಎಕರೆ ಬೆಳೆ, ತೋಟದ ಬೆಳೆ ಹಾಳಾಗಿದ್ದು, ಸುಮಾರು ಒಟ್ಟು 1.41 ಕೋಟಿಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ. ಭಾನುವಾರವೂ ಮಳೆ ವಾತಾವರಣ ಮುಂದುವರಿದಿದೆ.
ಬಿರುಗಾಳಿ, ಮಳೆಯಿಂದಾಗಿ ಬೆಳೆ, ತೋಟದ ಬೆಳೆಗಳು ಧರೆಗುರುಳಿವೆ. ಮನೆಗಳಿಗೂ ಹಾನಿಯಾಗುತ್ತಿದೆ. ಹರಿಹರ ತಾ. ಕುಣಿಬೆಳಕೆರೆ ಗ್ರಾಮದ ಬಳಿ ನೂರಾರು ಎಕರೆ ಬತ್ತದ ಬೆಳೆ ನಾಶವಾಗಿದೆ. ಕಟಾವಿಗೆ ಬಂದಿದ್ದ ಬತ್ತದ ಬೆಳೆ ಮಳೆ, ಗಾಳಿ ಹೊಡೆತಕ್ಕೆ ನಾಶವಾಗಿದೆ. ದಾವಣಗೆರೆ, ಹರಿಹರ, ಚನ್ನಗಿರಿ ಭಾಗದಲ್ಲಿ ಫಸಲಿಗೆ ಬಂದಿದ್ದ ಬತ್ತ, ಅಡಕೆ ಬೆಳೆಗಳು, ಅಡಕೆ ಮರಗಳು, ತೇಗದ ಮರಗಳು ನಾಶವಾಗಿವೆ. ಇದು ಬೆಳೆಗಾರರು, ರೈತರನ್ನು ತೀವ್ರವಾಗಿ ಆತಂಕಕ್ಕೆ ನೂಕಿದೆ. ಎಕರೆ ಬತ್ತಕ್ಕೆ ₹30 ಸಾವಿರಕ್ಕೂ ಅಧಿಕ ಹಣ ವ್ಯಯಿಸಿ, ಕೃಷಿಗೆ ಶ್ರಮ ಹಾಕಿದ್ದ ರೈತರು, ಅಡಕೆ ತೋಟಗಳು ಕೈಗೆ ಬಂದಿದ್ದ ಹೊತ್ತಿನಲ್ಲೇ ಇಂತಹ ಪರಿಸ್ಥಿತಿ ರೈತರಿಗೆ ಆತಂಕಕ್ಕೆ ನೂಕಿದೆ. ಬಿಟ್ಟಿ ಭಾಗ್ಯ ನೀಡುವ ಸರ್ಕಾರಕ್ಕೆ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಹಣವಿಲ್ಲವೇ ಎಂದು ರೈತರು ಕಿಡಿ ಕಾರುತ್ತಿದ್ದಾರೆ.- - -
(ಬಾಕ್ಸ್)* ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲೂ ಅಪಾರ ಹಾನಿ
- ಪರಿಹಾರ ಕಾರ್ಯಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದಲ್ಲಿ ಮಳೆಗೆ ಬತ್ತ ನೆಲಕ್ಕೆ ಒರಗಿದ್ದು, ಹಾನಿಗೀಡಾದ ತೋಟಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಭೇಟಿ ನೀಡಿ, ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ತ್ಯಾವಣಿಗೆ ಬಳಿ ಮಳೆಯಿಂದಾಗಿ ಅಡಕೆ ಮರಗಳು ಸಂಪೂರ್ಣ ತುಂಡಾಗಿ ಬಿದ್ದಿದ್ದು, ಕೆಲವು ಬೇರು ಸಮೇತವೇ ಧರೆಗುರುಳಿವೆ. ಭಾರೀ ಮಳೆ, ಬಿರುಗಾಳಿ ಜೊತೆಗೆ ಆಲಿಕಲ್ಲು ಹೊಡೆತವೂ ಬೆಳೆಗಳು ನಾಶವಾಗುವಂತೆ ಮಾಡಿದ್ದು, ರೈತರು ತಮ್ಮ ಸಂಕಷ್ಟವನ್ನು ಶಾಸಕರ ಬಳಿ ತೋಡಿಕೊಂಡರು.
ತ್ಯಾವಣಿಗಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಫಲಕ್ಕೆ ಬಂದ ಭತ್ತದ ಬೆಳೆ ನೆಲಕ್ಕುರುಳಿದೆ. ರೈತರಿಗೆ ಲಕ್ಷಾಂತರ ರು. ನಷ್ಟವುಂಟಾಗಿದೆ. ಶಿವರಾಜ, ಚಂದ್ರಕಾಂತ, ಹಾಲಪ್ಪ, ಶ್ರೀನಿವಾಸ, ಹೊನ್ನಪ್ಪ, ವನಜಾಕ್ಷಮ್ಮ ಸೇರಿದಂತೆ ಹಲವು ರೈತರು ತಮ್ಮ ಬೆಳೆಹಾನಿಯ ಬಗ್ಗೆ ಶಾಸಕ ಬಸವಂತಪ್ಪ ಅವರಿಗೆ ವಿವರಿಸಿದರು.ಗ್ರಾಮದ ಶೌಕತ್ ಅಲಿ, ಫರೀದಾ ಬಾನು, ಖಲೀಲ್ ಸಾಬ್ ಎಂಬವರ ಮನೆಗಳು ಮಳೆಯಿಂದಾಗಿ ಕುಸಿದುಬಿದ್ದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸವಾಪಟ್ಟಣ ಗ್ರಾಮದಲ್ಲಿಯೇ ಸುಮಾರು 3500 ಹೆಚ್ಚು ಅಡಕೆ ಮರಗಳು ಧರೆಗುರುಳಿವೆ. ಭಾರೀ ಬಿರುಗಾಳಿ, ಆಲಿಕಲ್ಲು ಮಳೆಗೆ ಭಾರೀ ಹಾನಿಯಾಗಿದೆ. ರೈತ ಚೆನ್ನಪ್ಪ ಎಂಬವರ 6 ಎಕರೆ ತೋಟದಲ್ಲಿ ಬೆಳೆದಿದ್ದ ಸುಮಾರು 3 ಸಾವಿರ ಅಡಕೆ ಮರಗಳು ಸಂಪೂರ್ಣ ನೆಲಕ್ಕುರುಳಿವೆ.
ರೈತ ಬಸವರಾಜ ಅವರ 2 ಎಕರೆ ತೋಟದಲ್ಲಿದ್ದ ನೂರಾರು ಅಡಕೆ ಮರಗಳು ಹಾನಿಗೊಳಗಾಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಶೃಂಗಾರಬಾಗು ತಾಂಡಾದಲ್ಲಿ ಮಳೆ ಆರ್ಭಟಕ್ಕೆ ಹಲವು ಮನೆ ಕುಸಿದುಬಿದ್ದಿವೆ. ಸೀತಾಬಾಯಿ ಶಂಕರ ನಾಯ್ಕ, ಮಂಜಿಬಾಯಿ ರಾಜನಾಯ್ಕ, ವಿನೋದಬಾಯಿ ರವಿನಾಯ್ಕ, ಆಶಾ ಬಾಯಿ ವಸಂತ ನಾಯ್ಕ, ಎಮ್ಲಿಬಾಯಿ ಹೇಮಾನಾಯ್ಕ ಹಾಗೂ ಕವಿತಾಬಾಯಿ ಕಾಂತಿನಾಯ್ಕರ ಮನೆಗಳಿಗೆ ಹಾನಿಯಾಗಿದೆ. ನಿವಾಸಿಗಳು ಶಾಸಕ ಬಸವಂತಪ್ಪ ಬಳಿ ತಮಗಾದ ನಷ್ಟ, ಸಮಸ್ಯೆ ಬಗ್ಗೆ ಹೇಳಿಕೊಂಡರು.ಹಾನಿಗೊಳಗಾದ ರೈತರು ಮತ್ತು ನಿವಾಸಿಗಳ ಸಮಸ್ಯೆ ಆಲಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಕೂಡಲೇ ಬೆಳೆಹಾನಿ ಪರಿಹಾರ ನೀಡುವಂತೆ ಹಾಗೂ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚನ್ನಗಿರಿ ತಹಸೀಲ್ದಾರ್ ನಾಗರಾಜ, ಸಹಾಯಕ ಕೃಷಿ ನಿರ್ದೇಶಕ ಅರುಣಕುಮಾರ, ತ್ಯಾವಣಿಗಿ ಕಂದಾಯ ಅಧಿಕಾರಿ ಬಸಣ್ಣ, ಬಸವಾಪಟ್ಟಣ ಕಂದಾಯ ಅಧಿಕಾರಿ ಜಬಿವುಲ್ಲಾ, ಪಿಡಿಒ ಹನುಮಂತರಾಯ, ವಿಎ ರೇಷ್ಮಾ, ಹಾನಿಗೊಳಗಾದ ರೈತರಾದ ಶಿವರಾಜ, ಚಂದ್ರಕಾಂತ, ಹಾಲಪ್ಪ, ಶ್ರೀನಿವಾಸ, ಹೊನ್ನಪ್ಪ, ವನಜಾಕ್ಷಮ್ಮ, ಗ್ರಾಮಸ್ಥರಾದ ಬಿ.ಎಚ್.ಹಾಲಪ್ಪ, ಸಂತೋಷ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಇತರರು ಇದ್ದರು.- - -
(ಬಾಕ್ಸ್-2)* ಆಲಿಕಲ್ಲು ಮಳೆಗೆ ಬೆಳೆ ಹಾನಿ: ಅಧಿಕಾರಿಗಳ ತುರ್ತು ಸಭೆ ಮಾಯಕೊಂಡ ಕ್ಷೇತ್ರದ ವಿವಿಧೆಡೆ ಶನಿವಾರ ಆಲಿಕಲ್ಲು ಸಹಿತ ಸುರಿದ ಭಾರೀ ಮಳೆಯಿಂದ ಬೆಳೆ ಹಾನಿ ಹಾಗೂ ಮನೆಗಳು ಕುಸಿದು ಬಿದ್ದ ಹಿನ್ನೆಲೆ ಬಸವಾಪಟ್ಟಣ ಗ್ರಾ.ಪಂ. ಸಭಾಂಗಣದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳೊಡನೆ ತುರ್ತು ಸಭೆ ನಡೆಸಿದರು.
ಶಾಸಕ ಬಸವಂತಪ್ಪ ಮಾತನಾಡಿ, ಶನಿವಾರ ಸುರಿದ ಭಾರೀ ಮಳೆಯಿಂದ ಹಲವು ಗ್ರಾಮಗಳಲ್ಲಿ ಬೆಳೆಗೆ ಹಾನಿಯಾಗಿದ್ದು, ಕೆಲ ಮನೆಗಳು ಕುಸಿದುಬಿದ್ದಿವೆ. ಮುಂಗಾರು ಆರಂಭದ ವೇಳೆಯೇ ಹೀಗೆ ಪ್ರಕೃತಿ ವಿಕೋಪ ಸಂಭವಿಸುತ್ತಿರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಬೆಳೆ ಹಾನಿಗೆ ಒಳಗಾದ ರೈತರ ವಿವರ ತಕ್ಷಣ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಹಾಗೂ ಮನೆ ಕಳೆದುಕೊಂಡ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಮಳೆಗಾಲದಲ್ಲಿ ಜನ, ಜಾನುವಾರು ಜೀವಕ್ಕೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಚನ್ನಗಿರಿ ಸಹಾಯಕ ಕೃಷಿ ನಿರ್ದೇಶಕ ಅರುಣಕುಮಾರ, ಕಂದಾಯ ಅಧಿಕಾರಿ ಜಬೀವುಲ್ಲಾ, ಪಿಡಿಒ ಹನುಮಂತರಾಯ, ವಿಎ ರೇಷ್ಮಾ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ, ಶಿವಣ್ಣ, ಅಯೂಬ್ ಖಾನ್, ಶಿವಾಜಿ ಹಾಗೂ ಗ್ರಾಮಸ್ಥರು ಇದ್ದರು.- - -
-17ಕೆಡಿವಿಜಿ1, 2, 3, 4:ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಶನಿವಾರ ಭಾರೀ ಬಿರುಗಾಳಿ, ಆಲಿಕಲ್ಲು ಮಳೆ ಹೊಡೆತಕ್ಕೆ ಧರೆಗುರುಳಿದ್ದ ಅಡಕೆ ತೋಟಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿ, ಬೆಳೆಹಾನಿ ಪರಿಹಾರ ಕ್ರಮಕ್ಕೆ ಸೂಚಿಸಿದರು. ಈ ಸಂದರ್ಭ ರೈತರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.