ಕನ್ನಡಪ್ರಭ ವಾರ್ತೆ ಗೋಕರ್ಣ

ಸಮುದ್ರ ಸೇರುವ ಇಲ್ಲಿನ ಸಂಗಮ ನಾಲಾದ ವಿವಿಧೆಡೆ ಹೊಲಸು ನೀರು ನಿಂತು ಗಬ್ಬು ವಾಸನೆ ಹರಡುತ್ತಿದ್ದು, ಈ ಭಾಗದ ನಿವಾಸಿಗಳಿಗೆ ರೋಗರುಜಿನೆ ಹರಡುವ ಭೀತಿ ಎದುರಾಗಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಈ ಸಮಸ್ಯೆಇದ್ದರೂ ಸಹ ಸ್ಥಳೀಯ ಆಡಳಿತ ಯಾವುದೇ ಕ್ರಮ ತೆಗೆದುಕೊಳ್ಳದ ಪರಿಣಾಮ ವರ್ಷದಿಂದ ವರ್ಷಕ್ಕೆ ತೊಂದರೆ ಹೆಚ್ಚಾಗುತ್ತಿದೆ.

ಮಳೆಗಾಲದಲ್ಲಿ ಊರಿನ ವಿವಿಧೆಡೆಯ ನೀರು ಈ ನಾಲಾದ ಮೂಲಕ ಸಮುದ್ರ ಸೇರುತ್ತದೆ. ಈ ನಾಲಾದ ಅಂಚಿನ ಹೊಟೇಲ್ ಹಾಗೂ ಮನೆಯವರು ನೇರವಾಗಿ ನೀರು ನಾಲಾಕ್ಕೆ ಬಿಡುತ್ತಿರುವುದರಿಂದ ಬೇಸಿಗೆಯಲ್ಲಿ ಅಲಲ್ಲಿ ನಿಂತು ಗಬ್ಬು ನಾರುತ್ತಿದೆ. ಪ್ರಸ್ತುತ ಮಹಾಬಲೇಶ್ವರ ಮಂದಿರದ ಮಂಭಾಗದ ಮುಖ್ಯಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿಯಿದೆ. ಸಂಗಮ ನಾಲಾ ಸಮುದ್ರ ಸೇರುವಲ್ಲಿ ಮರಳು ತುಂಬಿ ರಾಶಿಯಾಗಿದ್ದು, ಇದನ್ನ ತೆರವುಗೊಳಿಸಿ ಕೊಟ್ಟರೆ ನೀರು ಹರಿದು ಹೋಗಿ ವಾಸನೆ ಕಡಿಮೆಯಾಗಬಹುದಾಗಿದ್ದು, ಈ ಬಗ್ಗೆ ತ್ವರಿತ ಕ್ರಮ ಅಗತ್ಯವಿದೆ.ಯೋಜನೆಯೂ ಇಲ್ಲ, ಕಠಿಣ ಕ್ರಮವು ಇಲ್ಲ:

ಈ ನಾಲಾ ಹೂಳೆತ್ತಿ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗುವಂತೆ ಮಾಡಲು ಹಲವು ಬಾರಿ ಯೋಜನೆ ರೂಪಿಸಿದರೂ ಅದು ಕಡತದಲ್ಲೆ ಉಳಿದಿದ್ದು, ಯಾವುದೇ ಕ್ರಮವಾಗಿಲ್ಲ. ನೇರವಾಗಿ ತ್ಯಾಜ್ಯ ನೀರು ಬಿಡುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಸೂಚಿಸಿದರೂ ಯಾವುದೇ ಕ್ರಮತೆಗೆದುಕೊಂಡಿಲ್ಲ. ಇದೆಲ್ಲದರ ಪರಿಣಾಮ ಪ್ರವಾಸಿ ತಾಣ ರೋಗರುಜಿನೆಯ ನಿಲ್ದಾಣವಾಗಿ ಮಾರ್ಪಟ್ಟಿದೆ.