ಆಸ್ತಿಗಾಗಿ ಹೆತ್ತತಾಯಿಯನ್ನು ಮನೆಯಿಂದ ಹೊರ ಹಾಕಿದ ಪುತ್ರ..!

| Published : Jul 14 2024, 01:30 AM IST

ಆಸ್ತಿಗಾಗಿ ಹೆತ್ತತಾಯಿಯನ್ನು ಮನೆಯಿಂದ ಹೊರ ಹಾಕಿದ ಪುತ್ರ..!
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿಗಾಗಿ ಹೆತ್ತ ತಾಯಿಯನ್ನು ಪುತ್ರ ಮನೆಯಿಂದ ಹೊರ ಹಾಕಿರುವ ಘಟನೆ ಹೋಬಳಿಯ ಮಾದಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ನಾಗಮ್ಮ(70) ಪುತ್ರನಿಂದ ಮನೆಯಿಂದ ಹೊರಹಾಕಲ್ಪಟ್ಟ ವೃದ್ಧೆ. ಈಕೆಯ ಪತಿ ಸಿಂಗ್ರಯ್ಯ, ಇಬ್ಬರು ಪುತ್ರರಲ್ಲಿ ಹಿರಿಯ ಮಗ ಕೆಲವು ವರ್ಷಗಳ ಹಿಂದೆ ಮೃತರಾಗಿದ್ದರು. ಒಬ್ಬಳು ಮಗಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಆಸ್ತಿಗಾಗಿ ಹೆತ್ತ ತಾಯಿಯನ್ನು ಪುತ್ರ ಮನೆಯಿಂದ ಹೊರ ಹಾಕಿರುವ ಘಟನೆ ಹೋಬಳಿಯ ಮಾದಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ನಾಗಮ್ಮ(70) ಪುತ್ರನಿಂದ ಮನೆಯಿಂದ ಹೊರಹಾಕಲ್ಪಟ್ಟ ವೃದ್ಧೆ.

ಈಕೆಯ ಪತಿ ಸಿಂಗ್ರಯ್ಯ, ಇಬ್ಬರು ಪುತ್ರರಲ್ಲಿ ಹಿರಿಯ ಮಗ ಕೆಲವು ವರ್ಷಗಳ ಹಿಂದೆ ಮೃತರಾಗಿದ್ದರು. ಒಬ್ಬಳು ಮಗಳಿದ್ದಾರೆ. ಕಿರಿಯ ಮಗ ಚಲುವರಾಜು ಶ್ರವಣಬೆಳಗೊಳದಲ್ಲಿ ಕೂಲಿ ಮಾಡಿಕೊಂಡಿದ್ದನು. ವಿಕಲಚೇತನ ಪುತ್ರಿ ರಾಜಮ್ಮ ಮದುವೆಯಾಗಿ ಮೈಸೂರಿನ ಮೇಟಗಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾಳೆ.

ಚಲುವರಾಜು ಈತ ತನ್ನ ಹೆಸರಿಗೆ ಜಮೀನು, ಮನೆ ಮಾಡಿಕೊಡಲು ತನ್ನ ತಾಯಿ ನಾಗಮ್ಮಳಿಗೆ ಆಗಿಂದಾಗ್ಗೆ ಹಿಂಸೆ ನೀಡುತ್ತಿದ್ದನು. ಕುಡಿದು ಮಾಡುವುದು, ಮನೆಯಿಂದ ಹೊರಹಾಕುವುದು ನಡೆದು ಸಾಕಷ್ಟು ರಾಜಿ ಪಂಚಾಯ್ತಿ ಕೂಡ ನಡೆದಿದೆ. ಈಕೆಗೆ ಗ್ರಾಮದಲ್ಲಿ ಒಂದು ಮನೆ ಹಾಗೂ ಸರ್ಕಾರಿ ಜನತಾ ಮನೆ ಕೂಡ ಇದ್ದು, ಈಕೆ ಜನತಾ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.

ತನ್ನ ಹೆಸರಿಗೆ ಖಾತೆ ಮಾಡಿಸಿ ಕೊಡದ ಕಾರಣ ಚಲುವರಾಜು ಕಂದಾಯ ಇಲಾಖೆಗೆ ತನ್ನ ತಾಯಿ ಮೃತಳಾಗಿರುವುದಾಗಿ ತಪ್ಪು ಮಾಹಿತಿ ನೀಡಿ ನಾಗಮ್ಮ ಅವರ ಪಡಿತರ ಆಹಾರ ಪದಾರ್ಥ ಚೀಟಿ, ವೃದ್ಧಾಪ್ಯ ವೇತನ ತಡೆ ಹಿಡಿಸಲು ಮುಂದಾಗಿದ್ದನು.

ನಾಗಮ್ಮ ಪಡಿತರ ಆಹಾರ, ವೃದ್ಧಾಪ್ಯ ವೇತನ ಪಡೆಯಲು ಅಂಗಡಿ, ಕಚೇರಿಗೆ ತೆರಳಿದ್ದಾಗ ವಿಷಯ ತಿಳಿದು ದೊಡ್ಡಗಲಾಟೆ ನಡೆದಿದೆ. ನಂತರ ಮಗಳಾದ ರಾಜಮ್ಮ ತಾನು ಇರುವ ಮೇಟಗಳ್ಳಿಗೆ ತಾಯಿಯನ್ನು ಕರೆದುಕೊಂಡು ಹೋಗಿದ್ದಾಳೆ.

ಕೆಲವು ದಿನಗಳ ನಂತರ ಸಂಬಂಧ ಪಟ್ಟವರ ಬಳಿ ಪಡಿತರ, ವ್ಯದ್ಧಾಪ್ಯ ವೇತನವನ್ನು ಕಾಡಿ ಬೇಡಿ ಸರಿಪಡಿಸಿಕೊಂಡಿದ್ದಾಳೆ.

ಈ ವೇಳೆ ತಾಯಿ, ಮಗಳು ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ವನಿತಾರಾಜ್, ತಹಸೀಲ್ದಾರ್ ನಿಸರ್ಗಪ್ರಿಯ, ಕಿಕ್ಕೇರಿ ಪೊಲೀಸ್‌ಅಧಿಕಾರಿ, ಸಂಬಂಧಪಟ್ಟ ಇಲಾಖೆಗೆ ಚಲುವರಾಜು ವಿರುದ್ಧ ದೂರು ನೀಡಿದ್ದಾರೆ.

ದೂರಿನ ಮೇರೆ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ತಂಡ, ಕಂದಾಯ ಇಲಾಖೆ, ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತೆರಳಿ ಚಲುವರಾಜುವಿಗೆ ಬುದ್ಧಿವಾದ ಹೇಳಿ ತಾಯಿ ನಾಗಮ್ಮ ಬಳಿ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ನಾಗಮ್ಮ ಜನತಾ ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆ ಮಾಡಲಾಯಿತು. ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲು ಮಾದಾಪುರ ಗ್ರಾಮ ಪಂಚಾಯಿತಿ ವ್ಯವಸ್ಥೆ ಮಾಡುವ ಭರವಸೆ ನೀಡಲಾಯಿತು.

ಪಿಎಸ್‌ಐ ರಮೇಶ್, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪದ್ಮಮ್ಮ, ಪಿಡಿಒಚಂದ್ರು, ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಜಿಲ್ಲಾಧ್ಯಕ್ಷ ರಜನಿರಾಜ್, ತಾ.ಅಧ್ಯಕ್ಷೆ ವನಿತಾ, ಗ್ರಾಮ ಲೆಕ್ಕಿಗ ಸುನಿಲ್ ಗಾಣಿಗೇರ, ಸಮೀರ್ ಮತ್ತಿತರರು ಇದ್ದರು.