ಹಾವೇರಿ: ಸಾಂಘಿಕ ಪ್ರಯತ್ನ ಮತ್ತು ಸತತ ಪರಿಶ್ರಮದ ಫಲವಾಗಿ ಕನ್ನಡ ಪರಂಪರೆಯನ್ನು ಬೆಳೆಸುವ ಕಾರ್ಯ ಮಾಡುತ್ತಿರುವ ಜಿಲ್ಲೆಯ ಕನ್ನಡದ ಮನಸ್ಸುಗಳು ಮಾದರಿ ರೂಪದಲ್ಲಿ ಬೆಳೆದಿರುವುದು ಅಭಿಮಾನ ಮೂಡಿಸಿದೆ ಎಂದು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಯೋಜಿತ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.ಇಲ್ಲಿನ ವಿನಾಯಕ ನಗರದ ಶ್ರೀ ಗಂಗಾಧರ ನಂದಿ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಜಿಲ್ಲೆಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತಿಹಾಸದ ಪುಟಗಳಲ್ಲಿ ಸದಾ ಉಳಿಯುವ ಕಾರ್ಯ ಮಾಡಿದೆ. ಯಾವುದೇ ಒಂದು ಸಂಸ್ಥೆ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಕ್ರಿಯ ರೂಪದ ತಂಡ ಇರಬೇಕು. ಆಗ ಮಾತ್ರ ಗುರಿ ಮತ್ತು ಉದ್ದೇಶ ತಲುಪಲು ಸಾಧ್ಯ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಬ್ಬರೂ ತನು-ಮನ-ಧನದಿಂದ ಸಾಹಿತ್ಯಿಕ ವಾತಾವರಣ ಸೃಷ್ಟಿಸಿರುವರು. ಸರ್ಕಾರ ಮತ್ತು ದಾನಿಗಳ ಸಹಕಾರದಿಂದ ಸ್ವಾಯತ್ತ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಿಸಿರುವುದು ಮುಂಬರುವ ದಿನಗಳಲ್ಲಿ ಜಿಲ್ಲೆಯ ಸಾಹಿತ್ಯ ಲೋಕ ಸದಾ ಜೀವಂತಿಕೆ ರೂಪ ಪಡೆಯುತ್ತದೆ ಎಂದರು.ಉಪನ್ಯಾಸ ನೀಡಿದ ಸಾಹಿತಿ ಡಾ.ಎಚ್.ಐ. ತಿಮ್ಮಾಪುರ ಮಾತನಾಡಿ, ಕನ್ನಡ ನಾಡು-ನುಡಿ ಪೋಷಿಸಲು ಮೈಸೂರು ಅಭ್ಯುದಯ ಸಮಾಜ ಹೆಸರಿನಲ್ಲಿ ಶುರುವಾದ ಕನ್ನಡ ಸಾಹಿತ್ಯ ಪರಿಷತ್ತು ಸದ್ಯ ನಾಲ್ಕು ಲಕ್ಷಕ್ಕೂ ಅಧಿಕ ಆಜೀವ ಸದಸ್ಯರನ್ನು ಪಡೆದ ಹೆಗ್ಗಳಿಕೆ ಹೊಂದಿದೆ. ರಾಜ್ಯದ ಎಲ್ಲ ಗಡಿ ಪ್ರದೇಶದ ಭಾಷೆಗಳನ್ನು ಒಂದೇ ರೂಪಕ್ಕೆ ತರುವುದು, ಪಠ್ಯಪುಸ್ತಕ ರಚಿಸುವುದು, ಕನ್ನಡದ ಅಕ್ಷರ ಜಾತ್ರೆ ಆಯೋಜಿಸುವ ಮೂಲಕ ನೂರು ವರ್ಷಗಳನ್ನು ದಾಟಿ ಬಂದಿರುವುದು ಒಂದು ಮೈಲಿಗಲ್ಲು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡ್ರ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಲಿಂಗಯ್ಯ ಬಿ.ಹಿರೇಮಠ ಅವರ ನೇತೃತ್ವದಲ್ಲಿ ಅನೇಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯ ಮಾಡಿದೆ. ಅವರ ಅವಧಿಯಲ್ಲಿ ನಾನು ಕೋಶಾಧ್ಯಕ್ಷನಾಗಿ ಕನ್ನಡ ಸೇವೆ ಮಾಡಿರುವುದು ತೃಪ್ತಿ ತಂದಿದೆ ಎಂದರು.ಡಿಡಿಪಿಯು ಅಶೋಕ ಶಾಸ್ತ್ರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಗೌರವಿಸಿರುವುದು ಅಭಿನಂದನೀಯ. ವಿದ್ಯಾರ್ಥಿಗಳು ತಮ್ಮ ಸತತ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸಿ ನಮ್ಮ ಇಲಾಖೆಗೂ ಹಾಗೂ ಹೆತ್ತವರಿಗೂ ಹೆಸರು ತಂದಿರುವರು ಎಂದರು.ಇದೇ ಸಂದರ್ಭದಲ್ಲಿ ಸಂಜೀವಕುಮಾರ ನೀರಲಗಿ, ಲಿಂಗರಾಜ ಸೊಟ್ಟಪ್ಪನವರ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ಲಕ್ಷ್ಮಿ ವಾಲ್ಮೀಕಿ, ಆರತಿ ಆನ್ವೇರಿ, ಶಂಭುಲಿಂಗ ಸುಂಕದ, ಪ್ರಸನ್ನಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ. ಸತೀಶ ಕುಲಕರ್ಣಿ, ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಪರಿಷತ್ತಿನ ಶಂಕರ ಸುತಾರ, ಪೃಥ್ವಿರಾಜ್ ಬೆಟಗೇರಿ, ವಿ.ಪಿ. ದ್ಯಾಮಣ್ಣವರ, ಹನುಮಂತಗೌಡ ಗೊಲ್ಲರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಅಕ್ಕಮಹಾದೇವಿ ಹಾನಗಲ್ಲ ಉಪಸ್ಥಿತರಿದ್ದರು. ಎನ್.ಬಿ.ಕಾಳೆ ನಿರೂಪಿಸಿದರು. ಸಿ.ಎಸ್. ಮರಳಿಹಳ್ಳಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.ಬಹುಶಃ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಇದು ನನ್ನ ಕೊನೆಯ ಕಾರ್ಯಕ್ರಮ. ಎರಡು ಅವಧಿಯಲ್ಲಿ ನನಗೆ ಅವಕಾಶ ನೀಡಿ ಕನ್ನಡ ನುಡಿ ಸೇವೆ ಮಾಡಲು ಸಹಕಾರ ನೀಡಿದವರನ್ನು ಮತ್ತು ನನಗೆ ನೈತಿಕವಾಗಿ ಬೆಂಬಲಿಸಿದವರನ್ನು ಸದಾ ಸ್ಮರಿಸುವೆ. ಇದು ನನ್ನ ಪಾಲಿಗೆ ಸಂದ ಅದೃಷ್ಟವೂ ಎಂದು ಭಾವಿಸುತ್ತೇನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಹೇಳಿದರು.
ಸಾಂಘಿಕ ಪ್ರಯತ್ನದಿಂದ ಕನ್ನಡ ಪರಂಪರೆ ಬೆಳೆಸುವ ಕಾರ್ಯ-ನೀರಲಗಿ
ಸಾಂಘಿಕ ಪ್ರಯತ್ನ ಮತ್ತು ಸತತ ಪರಿಶ್ರಮದ ಫಲವಾಗಿ ಕನ್ನಡ ಪರಂಪರೆಯನ್ನು ಬೆಳೆಸುವ ಕಾರ್ಯ ಮಾಡುತ್ತಿರುವ ಜಿಲ್ಲೆಯ ಕನ್ನಡದ ಮನಸ್ಸುಗಳು ಮಾದರಿ ರೂಪದಲ್ಲಿ ಬೆಳೆದಿರುವುದು ಅಭಿಮಾನ ಮೂಡಿಸಿದೆ ಎಂದು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಯೋಜಿತ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.