ಪರಿಸರ ಪೂರಕ ಅಭಿವೃದ್ಧಿ ನಮ್ಮ ಜಿಲ್ಲೆಗೆ ಅವಶ್ಯವಾಗಿದೆ. ಭಗವಂತನ ಸೃಷ್ಟಿಯಲ್ಲಿ ನದಿಗಳು ಜೀವಿಗಳು. ಅವುಗಳನ್ನು ದೇವತೆಯ ಸ್ಥಾನದಲ್ಲಿ ಕಾಣುತ್ತೇವೆ. ಅದಕ್ಕಾಗಿ ಹರಿಯುವ ಸ್ವಾತಂತ್ರ್ಯ ನೀಡಲಾಗಿದೆ. ನದಿಗಳಿಗೂ ಬದುಕುವ ಸ್ವಾತಂತ್ರ್ಯವಿದೆ ಎಂಬ ಕಾನೂನು ಆಗಬೇಕು.

ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಎಚ್ಚರಿಕೆ

ಬೇಡ್ತಿ, ಅಘನಾಶಿನಿ, ಶರಾವತಿ ಕಣಿವೆ ಉಳಿಸಿ ಬೃಹತ್ ಜನ ಸಮಾವೇಶ

ಕನ್ನಡಪ್ರಭ ವಾರ್ತೆ ಶಿರಸಿ

ಪರಿಸರ ಪೂರಕ ಅಭಿವೃದ್ಧಿ ನಮ್ಮ ಜಿಲ್ಲೆಗೆ ಅವಶ್ಯವಾಗಿದೆ. ಭಗವಂತನ ಸೃಷ್ಟಿಯಲ್ಲಿ ನದಿಗಳು ಜೀವಿಗಳು. ಅವುಗಳನ್ನು ದೇವತೆಯ ಸ್ಥಾನದಲ್ಲಿ ಕಾಣುತ್ತೇವೆ. ಅದಕ್ಕಾಗಿ ಹರಿಯುವ ಸ್ವಾತಂತ್ರ್ಯ ನೀಡಲಾಗಿದೆ. ನದಿಗಳಿಗೂ ಬದುಕುವ ಸ್ವಾತಂತ್ರ್ಯವಿದೆ ಎಂಬ ಕಾನೂನು ಆಗಬೇಕು ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ಭಾನುವಾರ ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ಜಿಲ್ಲೆ ಉಳಿಸಿ; ಬೇಡ್ತಿ, ಅಘನಾಶಿನಿ, ಶರಾವತಿ ಕಣಿವೆ ಉಳಿಸಿ ಬೃಹತ್ ಜನ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲೆಯ ಜನಪ್ರತಿನಿಧಿಗಳು ನದಿ ತಿರುವ ಯೋಜನೆ ವಿರೋಧಿ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡದಿದ್ದರೆ ಜಿಲ್ಲೆಯ ಜನತೆ ಸಾಮೂಹಿಕ ಚುನಾವಣೆ ಬಹಿಷ್ಕಾರ ಮಾಡುವ ಕಾಲ ಬರಬಹುದು ಎಂದು ಎಚ್ಚರಿಸಿದರು.ಪಶ್ಚಿಮ ಘಟ್ಟ ಪ್ರದೇಶದ ನದಿ ಜೋಡಣೆಯಿಂದ ಆಗುವ ಹಾನಿಯ ಬಗ್ಗೆ ವಿಜ್ಞಾನಿಗಳ ಹಲವು ಬಾರಿ ಅಧ್ಯಯನ ವರದಿ ಸಲ್ಲಿಸಿದ್ದಾರೆ. ದುಷ್ಪರಿಣಾಮದ ಕುರಿತು ತಿಳಿಸಿದ್ದಾರೆ. ಕೆರೆ, ಬಾವಿಗಳಿಗೆ ಅಂತರ್ಜಲ ಮರುಪೂರಣ ಕಡಿಮೆಯಾಗುತ್ತದೆ. ನದಿ ನೀರು ಹರಿಯುತ್ತಿದ್ದರೆ ಅವಲಂಬಿತ ಜನರಿಗೆ ಸಮಸ್ಯೆಯಾಗುತ್ತದೆ.‌ ಅಂತರ್ಜಲ ಮಟ್ಟ ಕಡಿಮೆಯಾಗಿ ಮಲೆನಾಡು ಬರಪೀಡಿತ ಜಿಲ್ಲೆಯಾಗುವ ಅಪಾಯವಿದೆ.‌ ಮೀನುಗಾರಿಕೆ ದೊಡ್ಡ ಹೊಡೆತ ಬೀಳಲಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಬಯಲುಸೀಮೆ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ ಮಾಡುವುದು ಅತ್ಯವಶ್ಯ. ಶಾಶ್ವತ ವಿನಾಶದ ಯೋಜನೆ ಕೈಬಿಡುವುದು ಒಳ್ಳೆಯದು. ಶರಾವತಿ ಜಲ ವಿದ್ಯುತ್ ಯೋಜನೆಯನ್ನೂ ಸ್ಥಗಿತಗೊಳಸಬೇಕು ಎಂದು ಒತ್ತಾಯಿಸಿದರು.ಜೈನಮಠದ ಸ್ವಸ್ತಿಶ್ರೀ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನದಿ ಪ್ರದೇಶ ತೀರದಲ್ಲಿ ಭಾರತ ದೇಶದ ನಾಗರಿಕತೆ ಬೆಳೆದು ಬಂದಿದೆ. ನದಿಯಿಂದ ಜನರು ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳು ಜೀವಿಸುತ್ತಿವೆ. ಬೇಡ್ತಿ ನದಿಗಳಿಗೆ ಅನೇಕ ಉಪ್ರದವ ಆಗಿದೆ.‌ ನದಿ ನಮಗೆ ಉಪಕಾರ ಮಾಡಿದೆ. ಅವುಗಳಿಗೆ ಕಾಟ ನೀಡಬಾರದು. ಜನರ, ಪರಿಸರ, ಆರೋಗ್ಯ, ಸಂಸ್ಕೃತಿ, ನದಿ ಪರವಾಗಿ ಇರುವ ಸರ್ಕಾರ ಉತ್ತಮವಾದುದು ಎಂದರು.ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ನದಿಯಿಂದ ಸಂಸ್ಕೃತಿ, ಉದ್ಯೋಗ, ಬದುಕು, ಜೀವನದ ನಾಡಿಯಾಗಿದೆ. ಆದ್ದರಿಂದ ರಕ್ಷಣೆ ನಮ್ಮೆಲ್ಲರ ಹೊಣೆ. ತಾಯಿಗೆ ಸಮಾನವಾದ ನದಿ ಮುಟ್ಟಬಾರದು. ಪ್ರಗತಿ ಒಳ್ಳೆಯ ಉದ್ದೇಶಕ್ಕಿರಬೇಕು.‌ ಜನರ ಬದುಕು ಕಸಿದುಕೊಳ್ಳುವುದು ಪ್ರಗತಿಯಲ್ಲ. ಕಾಡು ಕಡಿಯುವುದರಿಂದ ಭೂಕುಸಿತ ಉಂಟಾಗುತ್ತದೆ. ಸಹಸ್ರಾರು ವರ್ಷದಿಂದ ಜೀವನ ಕಟ್ಟಿಕೊಂಡಿರುವ ಕೃಷಿಕರ ಪುಣ್ಯ ಭೂಮಿ ಮುಳುಗಿಸುವುದು ಪ್ರಕೃತಿಗೆ ಮಾಡಿದ ಮೋಸವಾಗುತ್ತದೆ. ಯಜ್ಞ ಹಾಗೂ ಯಾಗದ ರೀತಿಯಲ್ಲಿ ಹೋರಾಟ ಮಾಡುವುದರಿಂದ ಭೂಮಿ ಉಳಿಯಲಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಗೆ ಮಾರಕವಾದ, ಜಿಲ್ಲೆಯ ಜನತೆಗೆ ಬೇಡವಾದ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನದಿ ಜೋಡಣೆ ವಿರೋಧಿಸಿ, ಕೊಳ್ಳ ಸಂರಕ್ಷಣಾ ಸಮಿತಿ ಮುಂದಾಳತ್ವದಲ್ಲಿ ಜಿಲ್ಲೆಯ ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿ ಇತರ ಪ್ರಮುಖರ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಧಾರಣ ಸಾಮರ್ಥ್ಯ ಅಧ್ಯಯನ ಮಾಡದೇ ಡಿಪಿಆರ್‌ ತಯಾರಿಗೆ ಅನುಮತಿ ನೀಡಬೇಡಿ ಎಂದು ವಿನಂತಿಸಿಕೊಳ್ಳಲಾಗಿತ್ತು. ಆದರೂ ಅನುಮತಿ ನೀಡಲಾಗಿದೆ. ಈ ಯೋಜನೆ ನಿನ್ನೆ ಮೊನ್ನೆದಲ್ಲ. ನದಿ ತಿರುವು ಯೋಜನೆ ತೂಗುಗತ್ತಿ ಬಹಳ ಹಿಂದಿನಿಂದ ನೇತಾಡುತ್ತಿದ್ದು, ಕಳೆದ 30 ವರ್ಷದ ಹಿಂದೆ ಕೈಗಾ ಪ್ರಾರಂಭಗೊಂಡಿದೆ. ಆಗ ಯಾವ ಸರ್ಕಾರ ಇತ್ತು ಎಂಬುದನ್ನು ನೆನಪು ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದರುಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು. ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಶಿರಳಗಿ ಚೈತನ್ಯ ರಾಜಾರಾಮಾಶ್ರಮದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸ್ವಾಗತಿಸಿದರು. ಸ್ವರ್ಣವಲ್ಲೀ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಎಂ.ಕೆ. ಭಟ್ಟ ಸಂದೇಶ ವಾಚಿದರು. ಅನಂತ ಭಟ್ಟ ಹುಳಗೋಳ, ಸುರೇಶ ಹಕ್ಕಿಮನೆ ನಿರೂಪಿಸಿದರು. ಆರ್‌.ಎಂ. ಹೆಗಡೆ ಬಾಳೇಸರ, ಗೋಪಾಲಕೃಷ್ಣ ವೈದ್ಯ, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಜಿ.ಎಂ. ಹೆಗಡೆ ಮುಳಖಂಡ, ಶ್ರೀನಿವಾಸ ಹೆಬ್ಬಾರ, ರಮೇಶ ದುಭಾಶಿ ಫಲ ಸಮರ್ಪಿಸಿದರು. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ನಳ್ಳಿ ವಂದಿಸಿದರು.ಪೂರಕ ಯೋಜನೆಗಾಗಿ ಹೋರಾಡೋಣ: ವೈದ್ಯ

ನದಿ ಜೋಡಣೆ ಯೋಜನೆ ಹಾಲಿ ಸರ್ಕಾರದ ಯೋಜನೆಯಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2021 ಡಿ. 25ರಂದು ಈ ಯೋಜನೆ ಜಾರಿಗೆ ಕ್ಯಾಬಿನೆಟ್‌ನಲ್ಲಿ ನಿರ್ಣಯವಾಗಿತ್ತು. ಆಗ ಜನಪ್ರತಿನಿಧಿಗಳು ಮಾತನಾಡಿಲ್ಲ. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದರು. ಅಂದೇ ಮುಗಿದಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಹಳ ಮುಂದು ಹೋಗಿದೆ. ಕೇಂದ್ರ ಶೇ. 90 ಹಾಗೂ ರಾಜ್ಯ ಸರ್ಕಾರ ಶೇ. 10ರಷ್ಟು ಹಣ ನೀಡುವ ಸುಮಾರು 23 ಸಾವಿರ ಕೋಟಿ ರು. ಯೋಜನೆಯಾಗಿದೆ. ರಾಜಕಾರಣ ಬದಿಗಿಟ್ಟು ವಿರೋಧ ಮಾಡಬೇಕಿದೆ. ವೇದಿಕೆಯಲ್ಲಿ ಮಾತನಾಡಿರುವುದಕ್ಕೆ ಬದ್ಧರಾಗಿರಬೇಕು. ಇಂತಹ ಯೋಜನೆಯಿಂದ ಕೃಷಿಕರಿಗೆ, ಮೀನುಗಾರಿಕೆಗೆ, ಅರಣ್ಯ ಅತಿಕ್ರಮಣದಾರರಿಗೆ ತೊಂದರೆಯಾಗಲಿದೆ.‌ ಶ್ರೀಗಳ ನೇತೃತ್ವದಲ್ಲಿ ಅಧ್ಯಯನ ಮಾಡಿಸಿ, ಈ ಯೋಜನೆ ಕೈಬಿಡಬೇಕು. ಜಿಲ್ಲೆಗೆ ಪೂರಕ ಯೋಜನೆಗಾಗಿ ಹೋರಾಡೋಣ. ನಿಮ್ಮ ಜೊತೆ ಇದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದರು.

ಬುದ್ಧಿ ಇಲ್ಲದ ರಾಜಕಾರಣಿಗಳ ಪಡೆದಿರುವುದು ದುರ್ದೈವ

ಪರಿಸರ ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಉಪನ್ಯಾಸ ನೀಡಿ, ನದಿ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತದೆ ಎಂಬ ಹೇಳುವ ರಾಜಕಾರಣಿ ಮೂರ್ಖ. ರಾಜಕಾರಣಗಳಿಗೆ ಜಲಚಕ್ರ ಅಗತ್ಯವಿಲ್ಲ. ಬುದ್ಧಿ ಇಲ್ಲದ ರಾಜಕಾರಣಿಗಳನ್ನು ಪಡೆದಿರುವುದು ದುರ್ದೈವ. ಒಟ್ಟಾರೆ 2353 ಹೆಕ್ಟೇರ್ ಭೂಮಿ ನಾಶವಾಗಲಿದೆ. ಅಘನಾಶಿನಿ ನದಿ ಮುಖಜಭೂಮಿ ಫಲವತ್ತಾಗಿದ್ದು, ಚಿತ್ರದುರ್ಗದ ವಾಣಿವಿಲಾಸ ಡ್ಯಾಂಗೆ ಕೊಂಡೊಯ್ಯಲಾಗುತ್ತದೆ. 23 ಸಾವಿರ ಕೋಟಿ ರು.‌ ವೆಚ್ಚದ ಈ ಯೋಜನೆಯಲ್ಲಿ 1.20 ಲಕ್ಷ ಮರ ನಾಶವಾಗಲಿವೆ. 2500 ಎಕರೆ ಅರಣ್ಯ ನಾಶವಾಗಲಿದೆ. ಅರಣ್ಯ ಉಳಿಯುವುದಿಲ್ಲ ಎಂಬ ಸ್ಥಿತಿ ಇದೆ. ಈ 2 ಯೋಜನೆಯಿಂದ ಉತ್ತರ ಕನ್ನಡಕ್ಕೆ ಏನು ಉಪಯೋಗ? ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಜನರು ಕೇಳದೇ ಅಭಿವೃದ್ಧಿ ಯೋಜನೆ ಕೊಟ್ಟಿದೆ.‌ ಉತ್ತರ ಕನ್ನಡದ ಬಹು ವರ್ಷದ ಬೇಡಿಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಿಕೊಡಿ ಎಂದು ಕೇಳಿದ್ದೇವೆ. ಆದರೆ.‌ ಸರ್ಕಾರ ಮಾನ್ಯತೆ ಮಾಡಿಲ್ಲ. ಮಂಗನ ಕಾಯಿಲೆ ಲ್ಯಾಬ್ ವ್ಯವಸ್ಥೆ ಇಲ್ಲ. ಜನಪ್ರತಿನಿಧಿಗಳಿಗೆ ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶವಿಲ್ಲ. ಆದರೆ ಜನರಿಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ದಯವಿಟ್ಟು ಜನಪ್ರತಿನಿಧಿಗಳು ಈ ಯೋಜನೆ ಬೇಡ ಎಂಬುದನ್ನು ಅಧಿವೇಶನಕ್ಕೆ ಗಟ್ಟಿ ಧ್ವನಿಯಿಂದ ಹೇಳಬೇಕು. ಅಘನಾಶಿನಿ, ಬೇಡ್ತಿ ಉಳಿಸಿಕೊಳ್ಳುವುದು ಸಾವು ಬದುಕಿನ ಪ್ರಶ್ನೆಯಾಗಿದೆ ಎಂದರು.