ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿನ ಹೊಸ ತಲೆಮಾರಿಗೂ ವಚನಗಳು ಜ್ಞಾನಧಾರೆಯಾಗುತ್ತಿವೆ ಎಂದು ಪಿಇಎಸ್ ಕಾನೂನು ಕಾಲೇಜಿನ ಗೌರವ ಪ್ರಾಧ್ಯಾಪಕ ಎಚ್.ಬಸವಯ್ಯ ಹೇಳಿದರು.ನಗರದ ಕೆರೆಯಂಗಳದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಯುನಿಟ್-೧ರ ಸಭಾಂಗಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ಪ್ರತಿಭಾಂಜಲಿ-೨೫ ವರ್ಷಗಳ ಸಂಭ್ರಮ ಸಂಚಿಕೆ-೨ರ ಪ್ರಯುಕ್ತ ಹೊಸ ತಲೆಮಾರಿಗೆ ವಚನಧಾರೆ ಮತ್ತು ಬಸವಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.
ವಚನಗಳಲ್ಲಿ ಜೀವನ ಮೌಲ್ಯಗಳ ಸಾರವಿದೆ. ವಿದ್ಯಾರ್ಥಿಗಳು ದಿನಕ್ಕೊಂದು ವಚನ ಓದಿ-ಅರ್ಥೈಸಿಕೊಂಡರೆ ಜ್ಞಾನ ಹೆಚ್ಚುತ್ತದೆ. ಶರಣರು ಸಾರಿದ ವಚನಧಾರೆಯು ಸರ್ವಕಾಲಕ್ಕೂ ಪ್ರಸ್ತುತ ಎಂದು ನುಡಿದರು.ಇಂದು ನಾವು ೨೧ನೇ ಶತಮಾನದಲ್ಲಿದ್ದೇವೆ. ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಮತ್ತು ಶಿವಶರಣರು ನೀಡಿದ ವಚನಗಳು ಸಂವಿಧಾನದ ಕಾನೂನುಗಳಾಗಿವೆ. ೧೨ ಸೂತ್ರಗಳ ವಚನ ಕಾನೂನಿನಲ್ಲಿದೆ. ಕೊಲಬೇಡ, ಕಳ್ಳತನ ಮಾಡಬೇಡ ಹೀಗೆ ಜನಪಾಠವಾಗಿದೆ ಎಂದು ಎಚ್ಚರಿಸಿದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಇತ್ತೀಚಿನ ದಿನಗಳಲ್ಲಿನ ಚಲನಚಿತ್ರ ಗೀತೆಗಳು ಮನಸ್ಸನ್ನು ಗೆಲ್ಲಲು ಸೋಲುತ್ತಿವೆ. ವಾಣಿಜ್ಯ ಸಾಹಿತ್ಯದಿಂದ ಸಾಮಾಜಿಕ ಬಹಿಷ್ಕಾರವು ಆಗುತ್ತಿವೆ. ಆದರೆ ಮೌಲ್ಯ ಸಾರುವ ವಚನಗಳು ಜೀವನ ಕಟ್ಟಿಕೊಡುತ್ತಿವೆ. ಕಾಯಕ ತತ್ವ ಸಾರುತ್ತಿವೆ. ಸರ್ವಕಾಲಕ್ಕೂ ಸರ್ವರಿಗೂ ಸಮರ್ಪಿತ ಎಂದು ನುಡಿದರು.
ಮಾದರ ಚನ್ನಯ್ಯ, ಜೇಡರದಾಸೀಮಯ್ಯ, ಬಸವಣ್ಣ ಮುಂತಾದ ಶರಣು ಸಮಸಮಾಜ ನಿರ್ಮಾಣ ಮಾಡಲು ಹೊರಟರು, ೨೪ಸಾವಿರಕ್ಕೂ ಹೆಚ್ಚು ವಚನಗಳಿವೆ, ೨೪೦ಕ್ಕೂ ಹೆಚ್ಚು ವಚನಕಾರರು ಸಿಗುತ್ತಾರೆ. ವಿದ್ಯಾರ್ಥಿಗಳು ವಚನ ಓದುವುದಿಂದ ಸಂಸ್ಕಾರ ಹಾಗೂ ಜೀವನದ ಮೌಲ್ಯ ಅರಿಯಬಹುದು ಎಂದು ಸಲಹೆ ನೀಡಿದರು.
ಪ್ರತಿಭಾಂಜಲಿ ಸುಮಗ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಅಕಾಡೆಮಿ ಸ್ಥಾಪನೆಯಾಗಿ ೨೫ ವರ್ಷಗಳು ಸಂದಿವೆ, ಈ ಸಂಸ್ಥೆಯಿಂದ ಗಾಯಕ-ಸಂಗೀತ ಕಲಿತವರು ಟಿವಿ ಮಾಧ್ಯಮಗಳು ನಡೆಸುವ ಸಂಗೀತ ಸ್ಪರ್ಧೆ ಕಾರ್ಯಗಳನ್ನು ಭಾಗಿಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.ಮನೆ ಮನೆಗೆ ವಚನಗಳು ಕಾರ್ಯಕ್ರಮದಿಂದ ವಚನಗಳನ್ನು ಮನೆ ಮನೆಗೆ ತಲುಪಪಿಸಿದ ಕೀರ್ತಿ ಆಕಾಡೆಮಿಗೆ ಸಲ್ಲುತ್ತದೆ, ೨೫ವರ್ಷ ಸಂದಿರುವ ಈ ವರ್ಷದಿಂದ ೨೫ ಕಾರ್ಯಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಗಾಯಕರಾದ ಶಂಕರ್, ಐಶ್ವರ್ಯ, ಹಂಸ, ವಂದನಾ, ಸರಿತಾ, ಶಶಿಕಲಾ, ಕರಣ್‌ವೀರ್,ಯೋಗಿತಾ ವಿಶ್ವಾನ್, ಸಿಂಧುಶ್ರೀ ಗಾಮನಹಳ್ಳಿ, ಡೇವಿಡ್ ಇವರು ವಚನಗಳನ್ನು ಸಂಗೀತ ಮೂಲಕ ಹಾಡಿದರು. ನಿಲಯ ವಿದ್ಯಾರ್ಥಿನಿಯರಿಗೂ ವಚನ ಹಾಡುವ ರೀತಿಯನ್ನು ಕಲಿಸಿಕೊಟ್ಟರು.ಕಾರ್ಯಕ್ರಮದಲ್ಲಿ ನಿಲಯಪಾಲಕರಾದ ಯೋಗಿತಾ, ನಿವೃತ್ತ ಶಿಕ್ಷಣ ಅಧಿಕಾರಿ ಪಾಪಯ್ಯ, ಕಸಾಪ ದರಸಗುಪ್ಪೆ ಧನಂಜಯ್, ಗಾಯಕರು ಹಾಜರಿದ್ದರು.