ಕನ್ನಡಪ್ರಭ ವಾರ್ತೆ ಹೊನ್ನಾಳಿ
ತರಗನಹಳ್ಳಿಯ ಗ್ರಾಮಸ್ಥರು ಸಾಮೂಹಿಕವಾಗಿ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರೆ ನಿಮ್ಮ ಬದುಕಿಗೆ ಹೊಸ ಹೊಳಪು ಕಂಡುಬರುತ್ತದೆ ಎಂದು ಸಾಣೆಹಳ್ಳಿಯ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಗುರುವಾರ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಬಸವಣ್ಣನವರು ನಡೆ-ನುಡಿಯ ಸಿದ್ಧಾಂತವನ್ನು ನಂಬಿದವರು. ನನ್ನ ನಡೆಯಲ್ಲಿ ಕುದುರೆ ಕೂದಲಿನಷ್ಟು ವ್ಯತ್ಯಾಸ ಕಂಡುಬಂದರೆ ನನ್ನ ತುಳಿದು ಮುಂದೆ ನಡೆ ಎಂದು ಸವಾಲು ಹಾಕಿದ್ದರು ಎಂದು ಹೇಳಿದರು.
ಬಸವಣ್ಣನವರು ತಮ್ಮ ಸರಳ ವಚನಗಳ ಮೂಲಕ ವ್ಯಕ್ತಿಗಳನ್ನು, ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು. ಕಷ್ಟಪಟ್ಟು ಅರ್ಥ ಮಾಡಿಕೊಳ್ಳುವ ಸಾಹಿತ್ಯಕ್ಕಿಂತ ಸರಳ ವಚನಗಳ ಮೂಲಕ ಬದುಕಿನ ಮೌಲ್ಯಗಳನ್ನು ಹೇಳಿದರೆ ಅದು ಸುಲಭವಾಗಿ ಜನರಿಗೆ ಅರ್ಥವಾಗುತ್ತದೆ ಎಂದು ನಂಬಿದ್ದರು ಎಂದರು.ವಚನಗಳನ್ನು ನಾವು ಸುಲಭವಾಗಿ ಹೇಳಿಬಿಡುತ್ತೇವೆ. ಆದರೆ ಅದರಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಮದಲ್ಲಿರುವ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಗುಟ್ಕಾ, ತಂಬಾಕು, ಸಿಗರೇಟು ಹಾಗೂ ಮದ್ಯ ಮಾರಾಟ ಮಾಡದಂತೆ ಸಂಕಲ್ಪ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅದೇ ರೀತಿ ಗ್ರಾಮದ ಯುವಕರು ಅವುಗಳನ್ನು ತಿನ್ನುವುದಿಲ್ಲ ಎಂದು ಸಂಕಲ್ಪ ಮಾಡಲು ಸಾಧ್ಯವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಮದ್ಯ ಮಾರಾಟ ಮಾಡುವವನು ಗ್ರಾಮಕ್ಕೆ ಬಂದರೆ, ಮೊದಲು ನೀವು ಕೇಳುವುದು ದೇವಸ್ಥಾನಕ್ಕೆ ಎಷ್ಟು ಕೊಡುತ್ತೀಯಾ ಎಂದು. ಅವನ ಜೊತೆ ಒಡಂಬಡಿಕೆ ಮಾಡಿಕೊಂಡೇ ನೀವು ನಿಮ್ಮ ಗ್ರಾಮಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿ ಕೊಡುತ್ತೀರಿ. ಇನ್ನು ದುಶ್ಚಟಗಳಿಂದ ದೂರ ಇರಿ ಎಂದು ಹೇಳುವುದಾದರೂ ಹೇಗೆ ಎಂದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸಮಾರಂಭದ ಪೂರ್ವದಲ್ಲಿ ಕೆಲವರು ನನ್ನ ಬಳಿ ಬಂದು ಗ್ರಾಮದ ಕೆರೆಗಳನ್ನು ತುಂಬಿಸಿ ಎಂದು ಬೇಡಿಕೆ ಇಟ್ಟರು. ಜುಲೈ 15 ರಿಂದ ನವೆಂಬರ್ 15 ರೊಳಗೆ ಎಲ್ಲಾ ಕೆರೆಗಳನ್ನು ತುಂಬಿಸುವುದಾಗಿ ಭರವಸೆ ನೀಡುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖಂಡ ಟಿ.ಜಿ. ರಮೇಶ್‌ಗೌಡ, ಡಿ.ಜಿ. ವಿಶ್ವನಾಥ್, ಎಚ್.ಎ. ಗದ್ದಿಗೇಶ್, ನಿವೃತ್ತ ಪ್ರಾಂಶುಪಾಲ ಬಸವರಾಜಪ್ಪ, ಹನುಮನಹಳ್ಳಿ ಬಸವರಾಜಪ್ಪ ಮಾತನಾಡಿದರು.ವೇದಿಕೆಯಲ್ಲಿ ಹೊನ್ನಾಳಿ ಶಿವ ಬ್ಯಾಂಕ್ ಅಧ್ಯಕ್ಷ ಎಚ್.ಜಿ. ರುದ್ರೇಶಪ್ಪ, ಕೋಡಿಕೊಪ್ಪ ಶಿವಪ್ಪ, ಕೆಂಗಲಹಳ್ಳಿ ಷಣ್ಮುಖಪ್ಪ, ವಿಎಸ್‌ಎಸ್‌ಎನ್ ನಿರ್ದೇಶಕ ಬಸವನಗೌಡ, ಪಿ. ರಾಜಪ್ಪ, ಆಂಜನೇಯ, ಪ್ರಭಣ್ಣ ಇತರರು ಉಪಸ್ಥಿತರಿದ್ದರು.
- - --30ಎಚ್.ಎಲ್.ಐ2:
ಹೊನ್ನಾಳಿ ತಾ. ತರಗನಹಳ್ಳಿಯಲ್ಲಿ ನಡೆದ ಬಸವಣ್ಣನವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.