ಶಿವಕುಮಾರ ಕುಷ್ಟಗಿಗದಗ: ದುಡಿಯುವ ವರ್ಗದ ಸುರಕ್ಷತೆ ದೃಷ್ಟಿಯಿಂದ ಕಾರ್ಮಿಕರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮಹತ್ವದ ಯೋಜನೆಯೇ ಇದೀಗ ಜಿಲ್ಲೆಯಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ.

ವಿತರಣೆಗೂ ಪೂರ್ವದಲ್ಲಿಯೇ ಕಳಪೆಯಾಗಿವೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಕೋಟ್ಯಂತರ ರು. ವೆಚ್ಚದಲ್ಲಿ ಖರೀದಿಸಲಾದ ಸುರಕ್ಷತಾ ಕಿಟ್‌ಗಳು ಹಲವಾರು ತಿಂಗಳಿನಿಂದ ವಿತರಣೆಯಾಗದೆ ಗೋದಾಮುಗಳಲ್ಲಿ ಬಿದ್ದಿವೆ.

ಸರ್ಕಾರದಿಂದ ಜಿಲ್ಲೆಗೆ 3 ಸಾವಿರಕ್ಕೂ ಹೆಚ್ಚು ಸುರಕ್ಷತಾ ಕಿಟ್‌ಗಳು ಬಂದಿವೆ. ಅವುಗಳನ್ನು ಅರ್ಹ ಕಾರ್ಮಿಕರಿಗೆ ವಿತರಿಸುವ ಪ್ರಕ್ರಿಯೆ ಮಾತ್ರ ಇನ್ನೂ ಆರಂಭವಾಗಿಲ್ಲ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ವಿತರಣಾ ಕಾರ್ಯ ಬಹುತೇಕ ಪೂರ್ಣಗೊಂಡಿರುವಾಗ, ಗದಗ ಜಿಲ್ಲೆಯಲ್ಲಿ ಮಾತ್ರ ಯೋಜನೆ ಸ್ಥಗಿತಗೊಂಡಿರುವುದು ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.₹3.53 ಕೋಟಿ ವೆಚ್ಚದ ಯೋಜನೆ: ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ₹3.53 ಕೋಟಿ ವೆಚ್ಚದಲ್ಲಿ ವಿವಿಧ ವೃತ್ತಿಗಳ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವೆಲ್ಡರ್‌, ಎಲೆಕ್ಟ್ರಿಷಿಯನ್‌, ಪೇಂಟರ್ ಸೇರಿದಂತೆ ವಿವಿಧ ವೃತ್ತಿಗಳ ನೋಂದಾಯಿತ ಕಾರ್ಮಿಕರಿಗೆ ಈ ಕಿಟ್‌ಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಒಟ್ಟು 7 ಸಾವಿರ ಕಿಟ್‌ಗಳ ಪೂರೈಕೆಗೆ ಅನುಮೋದನೆ ನೀಡಲಾಗಿದ್ದು, ಅದರ ಒಂದು ಭಾಗ ಈಗಾಗಲೇ ಜಿಲ್ಲೆಗೆ ತಲುಪಿದೆ.

ಆದರೆ ಕಿಟ್ ವಿತರಣೆಗಾಗಿ ಅಗತ್ಯವಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಕಾರ್ಮಿಕ ಇಲಾಖೆ ನೀಡದೇ ಇರುವುದರಿಂದ ಫಲಾನುಭವಿಗಳ ವಿವರಗಳಿಲ್ಲದೇ ಯಾರಿಗೆ ಕಿಟ್ ನೀಡಬೇಕು ಎಂಬ ಗೊಂದಲ ನಿರ್ಮಾಣವಾಗಿದೆ. ಪಟ್ಟಿ ಕೊಟ್ಟರೆ ತಕ್ಷಣ ವಿತರಣೆ: ಈ ಕುರಿತು ಪ್ರತಿಕ್ರಿಯಿಸಿರುವ ಖಾಸಗಿ ಏಜೆನ್ಸಿ ಪ್ರತಿನಿಧಿಗಳು, ಜಿಲ್ಲಾ ಕಾರ್ಮಿಕ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಅರ್ಹ ಕಾರ್ಮಿಕರ ಪಟ್ಟಿ ಸಿಗುತ್ತಿಲ್ಲ. ಈ ಹಿಂದೆ ಕಿಟ್ ಪಡೆದವರನ್ನು ಹೊರತುಪಡಿಸಿ ಹೊಸ ಫಲಾನುಭವಿಗಳ ಮಾಹಿತಿಯನ್ನು ನೀಡಬೇಕು. ಇಲಾಖೆ ಮಾಹಿತಿ ನೀಡಿದ ಕೂಡಲೇ ವಿತರಣೆ ಆರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವಿತರಣಾ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ವ್ಯವಸ್ಥೆಯೂ ಜಾರಿಯಾಗಲಿದ್ದು, ಒಂದೇ ವ್ಯಕ್ತಿಗೆ ಮರು ವಿತರಣೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ. ಗಂಭೀರ ಆರೋಪ: ಜಿಲ್ಲೆಗೆ ಬಂದಿರುವ ಕಾರ್ಮಿಕರ ಸುರಕ್ಷತಾ ಕಿಟ್‌ಗಳು ಗುಣಮಟ್ಟವನ್ನು ಹೊಂದಿಲ್ಲ, ಇವುಗಳು ಬಳಸುವಷ್ಟು ಕನಿಷ್ಠ ಗುಣಮಟ್ಟವನ್ನು ಹೊಂದಿಲ್ಲ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಿಗೆ ನೀಡಲಾಗಿರುವ ಸುರಕ್ಷತಾ ಮಾಸ್ಕ್ ಗಳು ಬೆಂಕಿ ಕಿಡಿಗೆ ತಡೆ ನೀಡುವ ಮಟ್ಟದಲ್ಲಿಯೇ ಇಲ್ಲ. ಫೈಬರ್ ಮಾದರಿಯ ವಸ್ತುಗಳಿಂದ ತಯಾರಾದ ಮಾಸ್ಕ್ ಗಳು ಹೆಚ್ಚು ತಾಪಕ್ಕೆ ಕರಗುವಂತಿವೆ. ಅದೇ ರೀತಿ ಎದೆಗವಚ ಸೇರಿದಂತೆ ಇತರೆ ಸುರಕ್ಷತಾ ಉಪಕರಣಗಳೂ ದೀರ್ಘಕಾಲ ಬಳಕೆಗೆ ಯೋಗ್ಯವಾಗಿಲ್ಲ. ಕಡಿಮೆ ದರದ ಹೆಸರಿನಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಈಚೆಗೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಈಚೆಗೆ ಬಹಿರಂಗ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ.

ಸಮಿತಿ ರಚನೆ ಮಾಡಿ: ಈಗಾಗಲೇ ಪೂರೈಕೆಯಾಗಿರುವ ಕಿಟ್‌ಗಳು ಗುಣಮಟ್ಟವನ್ನು ಹೊಂದಿಲ್ಲ. ಅದಕ್ಕಾಗಿ ಅವುಗಳನ್ನು ಮರಳಿ ಪಡೆದು ಹೊಸ ಕಿಟ್‌ಗಳನ್ನು ವಿತರಣೆ ಮಾಡಬೇಕು. ಇದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ಪರಿಶೀಲಿಸುವ ಸಮಿತಿ ರಚನೆ ಮಾಡಿ, ಕಾರ್ಮಿಕ ಪ್ರತಿನಿಧಿಗಳು ಪರಿಶೀಲಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಮೆಹಬೂಬ್ಖಾನ್ ಪಠಾಣ ತಿಳಿಸಿದರು.


ಮಾಹಿತಿ ಇಲ್ಲ: ಕಿಟ್‌ಗಳ ಗುಣಮಟ್ಟ ಮತ್ತು ವಿತರಣೆ ಪ್ರಕ್ರಿಯೆ ಕೇಂದ್ರ ಕಚೇರಿಯಿಂದಲೇ ಆಗುತ್ತದೆ. ಜಿಲ್ಲಾ ಕಚೇರಿಯಿಂದ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ಏಜೆನ್ಸಿ ಮೂಲಕ ಬಂದಿರುವ ಕಿಟ್‌ಗಳನ್ನು ನಾವು ಜಿಲ್ಲೆಯಲ್ಲಿ ಸ್ವೀಕರಿಸುತ್ತೇವೆ ಅಷ್ಟೇ. ಎಲ್ಲ ಪ್ರಕ್ರಿಯೆ ಬೆಂಗಳೂರಿನಿಂದಲೇ ನಡೆಯುತ್ತದೆ. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ತಿಳಿಸಿದರು.