ರಾಜ್ಯ ರಾಜಕೀಯ ವಲಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಅನವಶ್ಯಕ ಅತಿರೇಕದ ಚರ್ಚೆಗಳು ನಡೆಯುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಕೊಡದ ಈ ಚರ್ಚೆಯಲ್ಲಿ ಭಾಗವಹಿಸಲು ನನಗೆ ಆಸಕ್ತಿ ಇಲ್ಲ. ಮಾಧ್ಯಮಗಳು ಮಾಡಬೇಕಾದ ಸಾಕಷ್ಟು ಸಮಾಜಮುಖಿ ಕೆಲಸಗಳಿದೆ. ಅದರ ಬಗ್ಗೆ ಗಮನಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ರಾಜಕೀಯ ವಲಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಅನವಶ್ಯಕ ಅತಿರೇಕದ ಚರ್ಚೆಗಳು ನಡೆಯುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಕೊಡದ ಈ ಚರ್ಚೆಯಲ್ಲಿ ಭಾಗವಹಿಸಲು ನನಗೆ ಆಸಕ್ತಿ ಇಲ್ಲ. ಮಾಧ್ಯಮಗಳು ಮಾಡಬೇಕಾದ ಸಾಕಷ್ಟು ಸಮಾಜಮುಖಿ ಕೆಲಸಗಳಿದೆ. ಅದರ ಬಗ್ಗೆ ಗಮನಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಜನಪರ ಕೆಲಸಗಳಲ್ಲಿ ತೊಡಗಿದ್ದು, ಅರ್ಥಹೀನ ರಾಜಕೀಯ ಚರ್ಚೆಗಳು ಜನರ ಜೀವನಕ್ಕೆ ಏನೂ ಉಪಕಾರಿಯಾಗುವುದಿಲ್ಲ. ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ಕುರಿತು ಕೇಳಿದಾಗ ಮಾತ್ರ ಅಭಿಪ್ರಾಯ ನೀಡುವುದಾಗಿ ಅವರು ತಿಳಿಸಿದರು. "ನನಗೆ ಈಗ ಕೈ ತುಂಬಾ ಕೆಲಸಗಳಿವೆ. ಜನರ ಕೆಲಸವೇ ಮೊದಲ ಆದ್ಯತೆ. ಈಗಿರುವ ಕೆಲಸ ಬಿಟ್ಟು ಜನತೆಗೆ ಪ್ರಯೋಜನವಿಲ್ಲದ ವಿಷಯಗಳ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲ " ಎಂದು ಸ್ಪಷ್ಟತೆ ನೀಡಿದರು. ಮಠಾಧೀಶರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾಯಕತ್ವ ಬಲವರ್ಧನೆಗೆ ಕೆಲವು ಹೇಳಿಕೆಗಳು ಇಂಬು ನೀಡಬಹುದಾದರೂ, ರಾಜ್ಯದ ಮುಂದೆ ಇರುವ ಅನೇಕ ಸಮಸ್ಯೆಗಳನ್ನು ಬಿಟ್ಟು ಒಂದೇ ವಿಷಯದ ಬಗ್ಗೆ ದಿನವಿಡೀ ಚರ್ಚಿಸುವುದು ಸೂಕ್ತವಲ್ಲ. ಮಾಧ್ಯಮಗಳಿಗೆ ಟಿಆರ್‌ಪಿ ಬರಬಹುದು, ಆದರೆ ಅವರಿಗೂ ಮಿತಿ ಅಗತ್ಯ ಎಂದು ಹೇಳಿದರು. ಬೆಳೆ ಪರಿಹಾರ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ರೈತರಿಗೆ ೨೨೫೧ ಕೋಟಿ ರು. ಪರಿಹಾರ ನೀಡದಿರುವುದನ್ನು ಉಲ್ಲೇಖಿಸಿ, ಅತಿವೃಷ್ಟಿಯಿಂದ ಹಾನಿಯಾದ ಮೂಲಸೌಕರ್ಯಕ್ಕೆ ಕೇಂದ್ರದಿಂದ ಪರಿಹಾರ ಬರಬೇಕಿದೆ. ಎನ್‌ಡಿಆರ್‌ಎಫ್ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನಾವು ಮತ್ತು ಮುಖ್ಯಮಂತ್ರಿ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ೬೧೪ ಕೋಟಿ ಬೆಳೆ ಹಾನಿ ಹಾಗೂ ೧೫೨೧ ಕೋಟಿ ಆಸ್ತಿ ಹಾನಿಗೆ ಪರಿಹಾರ ಬೇಡಿದ್ದೇವೆ. ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಆದ್ದರಿಂದ ಕೇಂದ್ರವು ತಕ್ಷಣ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು. ಪ್ರಧಾನಿ ಮೋದಿ ಅವರ ರಾಜ್ಯ ಭೇಟಿಯನ್ನು ಉಲ್ಲೇಖಿಸಿದ ಸಚಿವರು, ಭೇಟಿ ಸಂದರ್ಭದಲ್ಲಿ ಕರ್ನಾಟಕಕ್ಕೆ ಕೊಡಬೇಕಾದ ಪರಿಹಾರವನ್ನು ಘೋಷಿಸಬೇಕು. ಹಿಂದಿನ ಬರಗಾಲದ ಸಮಯದಲ್ಲಿ ಕೇಂದ್ರ ಪರಿಹಾರ ನೀಡದೇ, ಸುಪ್ರೀಂ ಕೋರ್ಟ್‌ ಮುಖಾಂತರ ಪರಿಹಾರ ಪಡೆಯಬೇಕಾದ ಪರಿಸ್ಥಿತಿ ಬಂದಿತ್ತೆಂದು ಸ್ಮರಿಸಿದರು.ಜೋಳಕ್ಕೆ ಎಂಎಸ್‌ಪಿ ಘೋಷಿಸಿ ಬೆಂಬಲ ಬೆಲೆ ನೀಡದಿರುವುದು ನ್ಯಾಯವಲ್ಲ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ ಸಂಸದರು ಮೌನವಾಗಿರುವುದು ವಿಷಾದನೀಯ ಎಂದು ಸವಾಲು ಹಾಕಿದರು. ರಾಜ್ಯದ ಸಮಸ್ಯೆ ಬಿಟ್ಟು ಬೆಂಬಲ ಬೆಲೆ ಕೇಂದ್ರದಿಂದ ಮಂಜೂರು ಮಾಡಿಸಲಿ ನಾಟಕ ಬೇಡ ಎಂದು ಎಚ್ಚರಿಸಿದರು.

ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ. ಎಂ. ಶಿವಲಿಂಗೇಗೌಡ, ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಅಪರ ಜಿಲ್ಲಾಧಿಕಾರಿ ಬಿ.ಎ. ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.