ಕನ್ನಡಪ್ರಭ ವಾರ್ತೆ ಮದ್ದೂರು

ಮೂರು ಮಂದಿ ಪ್ರಯಾಣಿಸುತ್ತಿದ್ದ ಬೈಕ್ ಸಾರಿಗೆ ಸಂಸ್ಥೆ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಚಾಲಕ ಹಾಗೂ ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯದ ಐಶ್ವರ್ಯ ಕಾನ್ವೆಂಟ್ ಸಮೀಪದ ಬೆಂಗಳೂರು- ಮೈಸೂರು ಹೆದ್ದಾರಿಯ ಎಕ್ಸಿಟ್ ಬಳಿ ಶುಕ್ರವಾರ ಬೆಳಗ್ಗೆ ಜರುಗಿದೆ.

ಪಟ್ಟಣದ ಹೊಳೆ ಬೀದಿ ನಿವಾಸಿ ವೆಂಕಟೇಶ್ ಪುತ್ರ ಶಶಾಂಕ್ (18) ಮೃತಪಟ್ಟ ಹಿಂಬದಿ ಸವಾರ. ಅಪಘಾತದಲ್ಲಿ ತಲೆಗೆ ಬಿದ್ದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡ ಶಶಾಂಕ್ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.

ಬೈಕ್ ಚಾಲನೆ ಮಾಡುತ್ತಿದ್ದ ಪ್ರವೀಣ್ ಕುಮಾರ್ (೨೫) ಹಾಗೂ ಹೇಮಂತ್ (17) ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಡಿಪೋಗೆ ಸೇರಿದ ಸಾರಿಗೆ ಬಸ್ಸು ಮೈಸೂರು - ಮದ್ದೂರು ಮಾರ್ಗವಾಗಿ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿತ್ತು. ಬೆಳಗ್ಗೆ 10:30 ಸುಮಾರಿಗೆ ಐಶ್ವರ್ಯ ಕಾನ್ವೆಂಟ್ ನ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಎಕ್ಸಿಟ್ ರಸ್ತೆಯಲ್ಲಿ ಪ್ರವೀಣ್ ಕುಮಾರ್ ಚಾಲನೆ ಮಾಡುತ್ತಿದ್ದ ಬೈಕ್ ಅಡ್ಡಾದಿಡ್ಡಿಯಾಗಿ ಚಲಿಸಿ ಬಸ್ ನ ಎಡಬಾಗದ ಮಧ್ಯಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಅಪಘಾತ ಸಂಭವಿಸಿದೆ.


ಸುದ್ದಿ ತಿಳಿದತಕ್ಷಣ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಮೃತನ ಶವ ಮತ್ತು ಗಾಯಾಳುಗಳನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮದ್ದೂರು ವೃತ್ತ ನಿರೀಕ್ಷಕ ನವೀನ್ ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.