ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಸಂಸ್ಕಾರ ಕಲಿಸಿದರೆ ಅವರು ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಭಾರತೀನಗರದ ಪ್ರಶಾಂತ್ ಹೈಸ್ಕೂಲ್ ಆಫ್ ಬ್ರಿಲಿಯನ್ಸ್ ವತಿಯಿಂದ ನಡೆದ ಪಿಎಸ್‌ಬಿ ಪ್ರಕಾಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಬಹಳಷ್ಟು ನಗರಗಳಲ್ಲಿ ಖಾಸಗಿ ಶಾಲೆಗಳು ದೊಡ್ಡ ಮಟ್ಟದಲ್ಲಿರುವುದನ್ನು ಕಾಣುತ್ತೇವೆ. ಹೋಬಳಿ ಮಟ್ಟದಲ್ಲಿ ಪ್ರಶಾಂತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಶಾಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ಶಿಕ್ಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಶ್ರಮಿಸುತ್ತಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯೂ ಮುಖ್ಯ. ಇವುಗಳ ಮೂಲಕ ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ನೋಡಿ ಆನಂದಿಸುತ್ತಾರೆ. ಪ್ರತಿಭೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.ಮಂಗಳೂರು ಡಿಐಜಿಪಿ ಹಾಗೂ ಶಾಲೆಯ ಗೌರವಾಧ್ಯಕ್ಷ ಎ.ಎನ್. ಪ್ರಕಾಶ್‌ಗೌಡ ಮಾತನಾಡಿ, ಪ್ರಸ್ತುತ ಶಿಕ್ಷಣದ ಮಹತ್ವ ಬಹಳಷ್ಟಿದೆ. ವಿದ್ಯಾರ್ಥಿಗಳನ್ನು ಆಧುನಿಕ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸಜ್ಜುಗೊಳಿಸಬೇಕು. ಅದು ಶಿಕ್ಷಕರು ಮತ್ತು ಪೋಷಕರ ಕರ್ತವ್ಯ ಎಂದರು.
ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರು ವಿಶೇಷಚೇತನರಾದರೂ ಅವರ ಸಾಧನೆ ನಮ್ಮೆಲ್ಲರ ಸಾಧನೆಯನ್ನು ಮೀರಿಸುತ್ತದೆ. ಅವರು ವಿಶೇಷಚೇತನರಾದರೂ ಅಂಗವಿಕಲರಿಗೆ ಎಲ್ಲ ರೀತಿಯ ಸೌಲಭ್ಯ ಸಿಗಬೇಕು, ಸ್ವಾವಲಂಬಿಗಳಾಗಿ ಬದುಕಬೇಕೆಂದು ದೇಶಾದ್ಯಂತ ಸಂಚರಿಸಿ ಅರಿವು ಮೂಡಿಸುತ್ತಿದ್ದಾರೆ ಎಂದರು.
ನಾವು ಸದೃಢವಾಗಿದ್ದರೂ ಯಾವುದಾದರೂ ಕುಂಟು ನೆಪ ಹೇಳಿ ಕೆಲಸದಿಂದ ವಿಮುಕ್ತಿ ಹೊಂದುತ್ತೇವೆ. ಮನಸ್ಸಿದ್ದರೆ ಮಾರ್ಗ, ಸವಾಲುಗಳನ್ನು ಎದುರಿಸಿ ನಿಂತಾಗ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಡಾ. ಕೆ.ಎಸ್. ರಾಜಣ್ಣ ಅವರು ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಕೆ.ಎಸ್.ರಾಜಣ್ಣ ದಂಪತಿಯನ್ನು ಗಣ್ಯರು ಸನ್ಮಾನಿಸಿದರು. ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷ ಡಾ. ಜಯಪ್ರಕಾಶ್, ಕಾರ್ಯದರ್ಶಿ ಬಿ.ಬಸವರಾಜು, ಉಪಾಧ್ಯಕ್ಷ ಮಹದೇವು, ಶಾಲಾ ವಾಹನ ಉಸ್ತುವಾರಿ ಹಾಗೂ ನಿರ್ದೇಶಕ ಕೆ. ಭಾಸ್ಕರ್, ಕವಿಯತ್ರಿ ಡಾ. ಎಚ್.ಎಲ್.ಪುಷ್ಪ, ಬಿಇಒ ಧನಂಜಯ, ಮುಖ್ಯ ಶಿಕ್ಷಕ ರಾಜೇಂದ್ರ, ಶಾಲೆಯ ನಿರ್ದೇಶಕರಾದ ಎಂ. ಅರುಣ್ ಕುಮಾರ್, ಡಿ.ಕೆ. ಸುಮಿತ್ರ, ಬಿ. ಸುಷ್ಮಾ, ಡಿ. ಅರುಣ್, ವಿನಯ್ ಕುಮಾರ್, ಭಾಗ್ಯಲಕ್ಷ್ಮೀ, ಅಣ್ಣೂರು ಮಹೇಂದ್ರ,ಡಾ. ಭಾರ್ಗವಿ, ಕರವೇ ಮುಖಂಡ ರಾಮಚಂದ್ರ, ಸಿದ್ದೇಗೌಡ ಉಪಸ್ಥಿತರಿದ್ದರು.