ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ 3 ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ರಾಜ್ಯದ ಅಡಕೆ ಲಾರಿಗಳನ್ನು ಎಫ್‌ಎಸ್‌ಎಸ್‌ಐಎಲ್ ಅಧಿಕಾರಿಗಳು ತಡೆ ಹಿಡಿದಿದ್ದರಿಂದ ಜಿಲ್ಲೆಯ ಅಡಕೆ ಬೆಳೆಗಾರರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ವಿಶೇಷ ಪ್ರಯತ್ನದಿಂದ ಸಮಸ್ಯೆ ಪರಿಹಾರವಾಗಿದೆ ಎಂದು ಅಡಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಗೃಹ ಕಛೇರಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬರಮಾಡಿಕೊಂಡು, ಅವರ ಸಮ್ಮುಖದಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು 50ಕ್ಕೂ ಹೆಚ್ಚು ಅಡಕೆ ಲಾರಿಗಳನ್ನು ತಡೆದು ವಶಕ್ಕೆ ಪಡೆದಿದ್ದರಿಂದ ಕಳೆದ 4 ತಿಂಗಳಿನಿಂದ ಜಿಲ್ಲೆಯ ಅಡಕೆಯನ್ನು ಬೇರೆ ರಾಜ್ಯಗಳಿಗೆ ಕೊಂಡೊಯ್ಯಲು ಲಾರಿ ಮಾಲೀಕರು ಹಿಂದೇಟು ಹಾಕುತ್ತಿದ್ದರು. ಇದರಿಂದ ಅಡಕೆ ಮಂಡಿ ವರ್ತಕರು ಖರೀದಿ ನಿಲ್ಲಿಸಿದ್ದಾರೆ. ಬೆಲೆ ನಿಗದಿಪಡಿಸುತ್ತಿಲ್ಲ. ಜಿಲ್ಲೆಯಿಂದ ಹೊರಗೆ ಅಡಕೆ ಹೋಗುತ್ತಿಲ್ಲ. ಪರಿಣಾಮ ಅಡಕೆಗೆ ಬೆಲೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ದೂರಿದರು.
ವಾಸ್ತವವಾಗಿ ಇದು ಮಹಾರಾಷ್ಟ್ರಕ್ಕೆ ಹೋಗುತ್ತಿರುವ ಅಡಕೆಯಲ್ಲ, ಮಹಾರಾಷ್ಟ್ರದ ಮೂಲಕ ದೆಹಲಿ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶಕ್ಕೆ ಈ ವೇಬಿಲ್ ಮೂಲಕ ನೇರವಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಮಹಾರಾಷ್ಟ್ರಕ್ಕೆ ಅನ್ವಯವಾಗುತ್ತಿಲ್ಲ. ಅಡಕೆಯ ಬಗ್ಗೆ ಅದನ್ನು ಅವಲಂಭಿಸಿದ ಬೆಳೆಗಾರರ ಬಗ್ಗೆ ಹಾಗೂ ರಾಷ್ಟ್ರಕ್ಕೆ ಅಡಕೆ ವ್ಯವಹಾರದಿಂದ ಸಲ್ಲುತ್ತಿರುವ ತೆರಿಗೆ ಹಾಗೂ 10 ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರ ಸಂಕಷ್ಟಗಳು ಇನ್ನಿತರ ವಿವರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಕೂಡಲೇ ಅವರು ಪ್ರತಿಕ್ರಿಯಿಸಿ ಈಗಾಗಲೇ ನಾನು ಮಹಾರಾಷ್ಟ್ರದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ವಶಕ್ಕೆ ಪಡೆದ ಲಾರಿಗಳನ್ನು ಬಿಡಲಾಗುವುದು. ಎಫ್‌ಐಆರ್ ಆಗಿದ್ದರೆ ಕೋರ್ಟ್‌ನಿಂದ ಬಿಡಿಸಲು ಕೂಡ ನೆರವಿನ ಭರವಸೆ ನೀಡಿದ್ದಾರೆ. ಜೊತೆಗೆ ಇನ್ನು ಮುಂದೆ ಅಡಕೆ ಲಾರಿಗಳನ್ನು ತಡೆಯಲಾಗುದಿಲ್ಲ ಎಂದು ಭರವಸೆ ನೀಡಿದ ಅವರು, ಯಾವುದೇ ತೊಂದರೆಯಾದರೆ ಹಿರಿಯ ಐಎಎಸ್ ಅಧಿಕಾರಿ ಲೋಕೇಶ್ ಚಂದ್ರ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಇದು ನಮ್ಮ ಮಹಾಮಂಡಲಕ್ಕೆ ಸಿಕ್ಕ ಜಯವಾಗಿದೆ ಎಂದರು.ಅಡಕೆ ಮಹಾಮಂಡಲ ರೈತರ, ಅಡಕೆ ಬೆಳೆಗಾರರ ಸುರಕ್ಷಾ ಚಕ್ರವಾಗಿ ಕೆಲಸ ಮಾಡುತ್ತಿದೆ. ಅಡಕೆಗೆ ಬೆಲೆ ಬಂದ ಮೇಲೆ 10 ಜಿಲ್ಲೆಗಳ ರೈತರು ನೆಮ್ಮದಿಯ ಬದುಕು ಸಾಗಿಸುತ್ತಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿಯಾಗಿದೆ. ಅಡಿಕೆ ಸುಲಿಯುವ ಯಂತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದರೆ ಯಂತ್ರದಲ್ಲಿ ಸುಲಿಯುವಾಗ ಅಡಕೆಗೆ ಗಚ್ಚು ಬೀಳುತ್ತಿದ್ದು, ಅದನ್ನು ಆಹಾರ ಅಧಿಕಾರಿಗಳು 2ನೇ ದರ್ಜೆಯ ಅಡಕೆ ಎಂದು ಭಾವಿಸುತ್ತಿದ್ದಾರೆ. ಅವರಿಗೆ ಈ ಬಗ್ಗೆ ಅರಿವಿಲ್ಲ. ಈ ವೇಬಿಲ್ ಸಮಸ್ಯೆ ಕೂಡ ಇತ್ತು ಎಂದು ತಿಳಿಸಿದರು.
ಗುಣಮಟ್ಟದ ಅಡಕೆ ನೀಡಲು ಕೂಡ ರೈತರ ಮತ್ತು ವರ್ತಕರ ಸಭೆ ಕರೆದು ಜಾಗೃತಿ ಮೂಡಿಸಲಾಗಿದೆ. ಗುಣಮಟ್ಟ ಕಳಪೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅಡಕೆ ಒಂದು ವೇಳೆ ಕಳಪೆ ಗುಣಮಟ್ಟದಿಂದಾಗಿ ಅಥವಾ ರಾಸಾಯನಿಕ ಬೆರಕೆಯಿಂದ ಬ್ಯಾನ್ ಆದರೆ ಮತ್ತೆ ಏನೂ ಮಾಡಲಾಗುವುದಿಲ್ಲ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಪಟೇಲ್, ಶ್ರೀನಿವಾಸ್ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್. ಮಹೇಶ್ , ಶ್ರೀಕಾಂತ್ ಬರುವೆ, ಪದ್ಮರಾಜ್, ಡಾ.ಬಿ.ವಿ. ಸತ್ಯನಾರಾಯಣ್, ತುಮ್ಕೋಸ್‌ನ ಎಚ್.ಎಸ್.ಶಿವಕುಮಾರ್ ಇದ್ದರು. ಅವರೆಲ್ಲರ ನಿಯೋಗ ಹೋಗಿ ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೇವೆ. ಉತ್ತಮ ಫಲಿತಾಂಶ ಬಂದಿದೆ. ಎಲ್ಲರಿಗೂ ಮಹಾಮಂಡಲದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಎಸ್. ಮಹೇಶ್ , ಸೂರ್ಯನಾರಾಯಣ, ಶ್ರೀಕಾಂತ್ ಬರುವೆ, ಶರ್ಮಾ ಮತ್ತಿತರರಿದ್ದರು. -------------ಪೊಟೋ: 08ಎಸ್‌ಎಂಜಿಕೆಪಿ04
ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.