ಬಿಜೆಪಿ ಅಭ್ಯರ್ಥಿ ನಾಟಕಕ್ಕೂ ಮಿತಿ ಇರಲಿ: ನರೇಂದ್ರ

| Published : Mar 30 2024, 12:49 AM IST

ಸಾರಾಂಶ

ಬಿಜೆಪಿ ಅಭ್ಯರ್ಥಿಗಳು ಒಂದು ಕಡೆ ಹಾಡುತ್ತಾರೆ, ಮತ್ತೊಂದು ಕಡೆ ದುಃಖಿಸಿ ಕಣ್ಣಿರಿಡುತ್ತಾರೆ, ಇವರ ನಾಟಕಕ್ಕೂ ಮಿತಿ ಬೇಕು ಎಂದು ಮಾಜಿ ಶಾಸಕ ನರೇಂದ್ರ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಿಜೆಪಿ ಅಭ್ಯರ್ಥಿಗಳು ಒಂದು ಕಡೆ ಹಾಡುತ್ತಾರೆ, ಮತ್ತೊಂದು ಕಡೆ ದುಃಖಿಸಿ ಕಣ್ಣಿರಿಡುತ್ತಾರೆ, ಇವರ ನಾಟಕಕ್ಕೂ ಮಿತಿ ಬೇಕು ಎಂದು ಮಾಜಿ ಶಾಸಕ ನರೇಂದ್ರ ಟೀಕಿಸಿದರು. ಗುರುವಾರ ಸಂಜೆ ಆಯೋಜಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸುಳ್ಳು ಬಿಜೆಪಿಗರ ಮನೆದೇವ್ರು, ನಮ್ಮ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ವಿದ್ಯಾವಂತ, ಬುದ್ದಿವಂತ ಅವರನ್ನು ಆಶೀರ್ವದಿಸುವ ಮೂಲಕ ಲೋಕಸಭೆಗೆ ಕಳುಹಿಸಿ ಸಿದ್ದರಾಮಯ್ಯ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ನಮ್ಮ ಪಕ್ಷದಲ್ಲಿದ್ದವರು, ಅವರಿಗೆ ಈಗ ಎಲ್ಲಾ ಪಟುಗಳು ಗೊತ್ತು, ಒಂದು ಕಡೆ ಅಳುತ್ತಾರೆ, ಮತ್ತೊಂದು ಕಡೆ ಹಾಡು ಹೇಳುತ್ತಾರೆ, ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆ ತಮ್ಮ ಗೆಳೆಯ ಧ್ರುವನಾರಾಯಣ್ ಸಮಾಧಿಗೆ ತೆರಳಿ ಕಣ್ಣಿರು ಹಾಕಿದ ಅವರು, ಧ್ರುವನಾರಾಯಣ್ ಮಗ ದರ್ಶನ್ ಧ್ರುವ ನಂಜನಗೂಡಿನಲ್ಲಿ ಸ್ಪರ್ಧೆಯಲ್ಲಿದ್ದಾಗ ಆತನ ಜ್ಞಾಪಕ ಬರಲಿಲ್ಲವೇ, ಈಗ ಜ್ಞಾನೋದಯವಾಗುತ್ತಿದ್ದಂತೆ ಕಾಮಗೆರೆಯ ನಾಗಪ್ಪ ಅವರ ಸಮಾಧಿಗೆ ತೆರಳುತ್ತಾರೆ, ಮಹದೇವಪ್ರಸಾದ್ ಸಮಾಧಿಗೆ ತೆರಳಿ ಕಣ್ಣಿರಿಡುತ್ತಾರೆ. ಇಂತಹವರನ್ನು ಮತದಾರರು ತಿರಸ್ಕರಿಸಬೇಕು ಎಂದು ವ್ಯಂಗ್ಯವಾಡಿದರು. ಮಾಜಿ ಶಾಸಕ ನಂಜುಂಡಸ್ವಾಮಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಬಾಲರಾಜು ಮಹಾನ್ ನಾಟಕಕಾರ, ಆತ ಕೆಲಸಗಾರನಲ್ಲ, ಪ್ರಮುಖವಾಗಿ ಆತ ಜನ ನಾಯಕನೇ ಅಲ್ಲ, ಅಂದು ಪಕ್ಷೇತರವಾಗಿ 26 ಸಾವಿರ ಮತಕ್ಕೆ ಗೆದ್ದ ಶಾಸಕ, ಆತ ಅನೇಕ ವಿದ್ಯೆಗಳುಳನ್ನು ಕಲಿತಿದ್ದರೂ ಕಾಂಗ್ರೆಸ್ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.ಆತ ಅನೇಕ ಮೋಡಿ ಮಾಡುವ ವಿದ್ಯೆ ಕಲಿತಿದ್ದು, ಅಂತಹ ವಿದ್ಯೆ, ಬುದ್ದಿಗಳೆಲ್ದದ್ದಕ್ಕೂ ಬುದ್ದಿ ಕಲಿಸಬೇಕಿದೆ. ಬಿಜೆಪಿ ಟಿಕೆಟ್ ಪಡೆದ ಬಾಲರಾಜು, ಈಗ ಬಿಜೆಪಿ ಹಾಳು ಮಾಡಲು ಹೋಗಿದ್ದು ಬಾಲರಾಜುವನ್ನು ಬಿಜೆಪಿಗೆ ಸೇರಿಸಿಕೊಂಡ ಮಾಜಿ ಸಚಿವ ಮಹೇಶ್ ಬಾಲರಾಜುಗಿಂತಲೂ ಮಹಾನ್ ಘಾತುಕ ಶಕ್ತಿ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಯುವ ನಾಯಕ, ಆತನಿಗೆ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ. ಹನೂರಿನ ನರೇಂದ್ರ ಅವರನ್ನು ನಮ್ಮವರೇ ಸೋಲಿಸಿದ್ರು. ಮಹೇಶ್ ಅವರು ಬಾಲರಾಜುಗೆ ಟಿಕೆಟ್ ಕೊಡಿಸಿ ಆತನನ್ನು ಹಾಳು ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಎಚ್ ಸಿ ಮಹದೇವಪ್ಪ, ವೆಂಕಟೇಶ್, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್, ಗುಂಡ್ಲುಪೇಟೆ ಶಾಸಕ ಗಣೇಶ ಕುಮಾರ್ , ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಕ್ಷೇತ್ರ ಉಸ್ತುವಾರಿ ಬಸವರಾಜು, ಉಗ್ರಾಣ ನಿಗಮದ ಅಧ್ಯಕ್ಷರಾದ ಮರಿಸ್ವಾಮಿ, ಎಸ್. ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಹೊಂಗನೂರು ಚಂದ್ರು, ನಗರ ಸಭೆ ಮಾಜಿ ಅಧ್ಯಕ್ಷರಾದ ರೇಖಾ ರಮೇಶ್, ಶಾಂತರಾಜು ಬಸ್ತಿಪುರ, ಬೀಮನಗರ ರಮೇಶ್, ಮಾಜಿ ಉಪಾಧ್ಯಕ್ಷ ಎ ಪಿ ಶಂಕರ್, ಅಕ್ಮಲ್ ಪಾಶ. ನಟರಾಜ ಮಾಳಿಗೆ, ಕುಮಾರ, ಎ ಪಿ ಶಂಕರ್, ಮಂಜುನಾಥ್, ಕೊಪ್ಪಾಳಿನಾಯಕ, ಅಗರ ವೆಂಕಟೇಶ ಇನ್ನಿತರರಿದ್ದರು.

ಸುನೀಲ್ ಬೋಸ್ ಉತ್ತಮ ಕೆಲಸ ಮಾಡಲಿದ್ದಾರೆ: ಯತೀಂದ್ರ ಕೊಳ್ಳೇಗಾಲ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಒಳ್ಳೆ ಸಂಸದೀಯ ಪಟುವಾಗಿ ಕೆಲಸ ಮಾಡುತ್ತಾರೆ. ಅವರಿಗೂ ಜನಪರ ಕಾಳಜಿ ಇದ್ದು ಹಲವು ವರ್ಷಗಳ ಕಾಲ ಜನಸೇವೆ, ಪಕ್ಷ ಸಂಘಟನೆಯ ಕೆಲಸ ಮಾಡಿದ್ದಾರೆ. ನಿಜಕ್ಕೂ ಧ್ರುವನಾರಾಯಣರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸುನೀಲ್ ಬೋಸ್ ಗೆಲ್ಲಬೇಕು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಣ ತೊಡಿ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನ್ಯಾಷನಲ್ ಶಾಲಾ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೆಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಟಿವಿ ಪರದೆಗೆ ಸೀಮತವಾಗಿದೆ. ಇದು ಸುಳ್ಳಿನ ಸರ್ಕಾರ ಎಂದು ಆರೋಪಿಸಿದರು.ಈ ಗೆಲುವು ಪ್ರಜಾಪ್ರಭುತ್ವದ ಗೆಲುವು: ಎಚ್‌ಸಿಎಮ್‌

ಸಚಿವ ಎಚ್ ಸಿ ಮಹದೇವಪ್ಪ ಮಾತನಾಡಿ, ಹಿಂದೊಮ್ಮೆ ಬಿಜೆಪಿಯಿಂದ ನನಗೆ ಆಹ್ವಾನ ಬಂದಾಗ ನನ್ನ ಶವವೂ ಸಹಾ ಬಿಜೆಪಿಗೆ ಬರಲ್ಲ ಎಂದಿದ್ದೆ, ಬಿಜೆಪಿಗರದ್ದು ಧರ್ಮ, ಧರ್ಮದ ನಡುವೆ ಹೊಡೆದಾಳುವ ನೀತಿ ಎಂದರಲ್ಲದೆ ಈ ಚುನಾವಣೆಯಲ್ಲಿ ಎದುರಾಳಿ ಮುಖ್ಯವಲ್ಲ, ಈ ಗೆಲುವು ಪ್ರಜಾ ಪ್ರಭುತ್ವದ ಗೆಲುವು , ಸಂವಿಧಾನಕ್ಕೆ ಸಂದ ಗೆಲುವಾಗಬೇಕು, ಸುನೀಲ್ ಬೋಸ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದರು.