ತಾಲೂಕಿನ ಮೇಟಿಕುರ್ಕೆ ಪಂಚಾಯ್ತಿ ವ್ಯಾಪ್ತಿಯ 108 ನಿವೇಶನದಾರರಿಗೆ ಇ ಸ್ವತ್ತು ಮಾಡಿಕೊಡಲು ಇರುವ ಅಡಚಣೆ ಸರಿಪಡಿಸಲು ಒತ್ತಾಯಿಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಭರ್ತಿ 34 ವರ್ಷವಾದರೂ ತಾಲೂಕಿನ ಮೇಟಿಕುರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರಾಗಿದ್ದ 108 ಆಶ್ರಯ ನಿವೇಶನಗಳ ಫಲಾನುಭವಿಗಳು ಜಾಗ ಗುರುತಿಸಿ ಕೊಡಿ, ಇ-ಸ್ವತ್ತು ಮಾಡಿಕೊಡಿ ಎಂದು ಮೂರು ದಶಕದಿಂದ ಕೇಳುತ್ತಲೇ ಇದ್ದಾರೆ. ಆದರೆ ಇತ್ತ ಗ್ರಾಮ ಪಂಚಾಯಿತಿಯಲ್ಲಿ ನೀವೇಶನ ಮಂಜೂರಿಗೆ ಸಂಬಂಧಪಟ್ಟ ದಾಖಲೆಗಳೇ ಇಲ್ಲ. ನಿವೇಶನ ಮಂಜೂರಾದ ಫಲಾನುಭವಿಗಳು ದಿಕ್ಕು ತೋಚದಂತಾಗಿದ್ದು ಒಂದು ಸಮಸ್ಯೆಯನ್ನು ದಶಕಗಳ ಕಾಲ ಸಮಸ್ಯೆಯನ್ನಾಗಿಯೇ ಉಳಿಸಿಕೊಂಡ ವ್ಯವಸ್ಥೆಯ ಬಗ್ಗೆ ಬೇಸರಗೊಂಡು ಒಂದಾದ ಮೇಲೊಂದು ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಆಶ್ರಯ ಯೋಜನೆಯಡಿ ಅಂದಿನ ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಇಂದಿನ ಮೇಟಿಕುರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಿಸನಂ 41ರಲ್ಲಿ ನಿರಾಶ್ರಿತರಿಗೆ 1991ರಲ್ಲಿ 108 ನಿವೇಶನ ಮಂಜೂರು ಆಗಿದ್ದವು. ಆಗ ಜಾಗ ಗುರುತಿಸಿ ಕೊಟ್ಟು ಹದ್ದುಬಸ್ತು ಮಾಡದೇ, ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳದೆ ಇರುವುದರ ಪರಿಣಾಮ ಇಂದು ಯಾರ ಜಾಗ ಎಲ್ಲಿದೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ. ಇ-ಸ್ವತ್ತಿಗೆ ಅರ್ಜಿ ಬಂದ ತಕ್ಷಣ ಸರ್ವೇ ನo.41ರಲ್ಲಿ ನೀಡಿರುವ ಹಕ್ಕುಪತ್ರಗಳ ಫಲಾನುಭವಿ ಪಟ್ಟಿ, ನಕಾಶೆ, ಪಹಣಿ ದಾಖಲಾತಿಗಳನ್ನು ನೀಡಿ ಎಂದು ಪಂಚಾಯಿತಿಯವರು ಸಂಬಂಧಪಟ್ಟ ಮೇಲಿನ ಇಲಾಖೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು ಸಹ ಫಲಿತಾಂಶ ಶೂನ್ಯವಾಗಿದೆ. ಜಾಗ ಸಿಗದೇ ಹಳೆಯ ಹಕ್ಕುಪತ್ರದ ಆಧಾರದ ಮೇಲೆ ಕೆಲವರು ಶೆಡ್ ನಿರ್ಮಿಸಿಕೊಂಡಿದ್ದು ಉಳಿದವರ ಪರದಾಟ ತಪ್ಪಿಲ್ಲ. ಕೆಲವರು ನಿವೇಶನ ಸಂಖ್ಯೆ ಹೊಂದಿದ್ದು, ಖಾತೆ ಸಂಖ್ಯೆ ಹೊಂದಿದ್ದು ಕ್ರಮವಾಗಿ ಕಂದಾಯ ಕಟ್ಟಿಕೊಂಡು ಬರುತ್ತಿದ್ದರು ಸಹ ಅವರಿಗೆ ಅವರ ನಿವೇಶನ ಗುರುತಿಸಿಕೊಳ್ಳಲಾಗುತ್ತಿಲ್ಲ. ನಿವೇಶನ ಗುರುತಿಗೆ ಹಾಕಿದ್ದ ಕಲ್ಲುಗಳು ಕಾಣೆಯಾಗಿದ್ದು ಸೈಟು ಹುಡುಕಲಾಗುತ್ತಿಲ್ಲ. ಇದೀಗ ಪಂಚಾಯಿತಿ ಬಳಿ ನಿವೇಶನ ಮಂಜೂರಾದವರ ಪಟ್ಟಿಯೇ ಇಲ್ಲ. 108 ನಿವೇಶನಗಳಿಗೆ 135ಕ್ಕೂ ಹೆಚ್ಚು ಖಾತೆಗಳಾಗಿವೆ ಎನ್ನಲಾಗುತ್ತಿದ್ದು ಒಂದೊಂದು ನಿವೇಶನಕ್ಕೆ 2-3 ಹಕ್ಕುಪತ್ರಗಳು ಸೃಷ್ಟಿಯಾಗಿ ಗೊಂದಲ ಉಂಟಾಗಿದೆ. ಕೆಲವು ದಾಖಲಾತಿ ಓವರ್ ರೈಟಿಂಗ್ ಆಗಿದ್ದು ತಿದ್ದಲ್ಪಟ್ಟು ದಾಖಲಾತಿಯ ಹೋಲಿಕೆಯೇ ಕಷ್ಟ ಎಂದು ಈ ಹಿಂದಿನ ಪಿಡಿಒ ಒಬ್ಬರು ತಮ್ಮ ಅಸಹಾಯಕತೆ ಹೊರ ಹಾಕಿದ್ದರು. ಇದೀಗ ಇಡೀ ಎಲ್ಲಾ ನಿವೇಶನಗಳನ್ನು ರದ್ದು ಮಾಡಿ ನೈಜ ಫಲಾನುಭವಿಗಳಿಗೆ ಹಂಚಲು ಪಂಚಾಯಿತಿಯಿಂದ ಸಿಎಸ್ ಆಫೀಸ್‌ಗೆ ಅಲ್ಲಿಂದ ಡಿಸಿ ಕಚೇರಿಗೆ, ಡಿಸಿ ಕಚೇರಿಯಿಂದ ಎಸಿ ಕಚೇರಿಗೆ, ಅಲ್ಲಿಂದ ತಹಸೀಲ್ದಾರ್‌ಗೆ ದಾಖಲಾತಿಗಳು, ಮನವಿ ಪತ್ರಗಳು ಹರಿದಾಡುತ್ತಿವೆ. 1991ರಲ್ಲಿ ನಿವೇಶನ ಪಡೆದು ನಿರಂತರವಾಗಿ ಕಂದಾಯ ಕಟ್ಟಿಕೊಂಡು ಬಂದಿರುವ ನೈಜ ಫಲಾನುಭವಿಗಳಿಗೆ ನಿವೇಶನ ಸಿಗಲು ಅಧಿಕಾರಿ ವರ್ಗ ಪ್ರಯತ್ನಿಸಬೇಕು.ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ: ಜಯಣ್ಣ
ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಅರಣ್ಯ ಹಕ್ಕು ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಯಣ್ಣ ಪ್ರತಿಕ್ರಿಯೆ ನೀಡಿ, ಫಲಾನುಭವಿಗಳು ಅನುಭೋಗದಲಿಲ್ಲ ಎನ್ನುತ್ತಿದ್ದಾರೆ. ಆದರೆ ಒಂದೇ ನಿವೇಶನಕ್ಕೆ ಎರಡು ಮೂರು ಹಕ್ಕುಪತ್ರ ನೀಡಿದರೆ ಅವರಲ್ಲಿ ಯಾರು ಅನುಭೋಗದಲ್ಲಿರಬೇಕು. ಹಕ್ಕುಪತ್ರ ಪಡೆದುಕೊಂಡು ಕಂದಾಯ ಕಟ್ಟಿಕೊಂಡು ಇಸ್ವತ್ತು ಮಾಡಿಸಿಕೊಳ್ಳಲು ಸ್ವಾತಂತ್ರ್ಯ ಇಲ್ಲದಂತಾಗಿದೆ. ನಿವೇಶನ ರದ್ದು ಮಾಡುವುದೇ ಮುಖ್ಯವಲ್ಲ. ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.