ಕನ್ನಡಪ್ರಭ ವಾರ್ತೆ ವಿಜಯಪುರ

ರಾಮ ಮಂದಿರದಲ್ಲಿ ಸಾವಿರಾರು ಕೋಟಿ ರೂಪಾಯಿ ಹುಂಡಿ ಕಳುವು ಪ್ರಕರಣದ ತನಿಖೆ ನಡೆಸುವುದು ಬಿಟ್ಟು, ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹುಂಡಿ ಕಳವಿಗೆ ಪ್ರೇರಣೆಯಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಿಎಂ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಮುಂಚೂಣಿಗೆ ಒಯ್ಯುತ್ತೇವೆಂದು ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥರು ಇದರ ಬಗ್ಗೆ ಹಿಂದೂಗಳು ಮಾತ್ರ ಪ್ರಶ್ನೆ ಕೇಳಬೇಕು. ಉಳಿದವರು ಕೇಳುವ ಅಗತ್ಯವಿಲ್ಲ ಎಂದಿರುವುದನ್ನು ನಾವು ಖಂಡಿಸುತ್ತೇವೆ ಎಂದರು.ಇಡೀ ದೇಶದ ಸರ್ವ ಜನರ ತೆರಿಗೆ ಹಣದಿಂದ ಕೇಂದ್ರ ಸರ್ಕಾರ ಶ್ರೀರಾಮ ಮಂದಿರ ನಿರ್ಮಿಸಿದೆ. ಇದೇಗೆ ಹಿಂದೂಗಳಿಗೆ ಮಾತ್ರ ಮಂದಿರ ಆಗುತ್ತದೆ?. ರಾಮಮಂದಿರ ನಿರ್ಮಾಣಕ್ಕೆ ಸಾವಿರಾರು ಜನ ಮುಸ್ಲಿಮರು ಲಕ್ಷಾಂತರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಸಿ.ಟಿ.ರವಿಯಂತವರು, ಸಾಂವಿಧಾನಿಕ ಹುದ್ದೆಯಲ್ಲಿರುವವರು ಗೂಂಡಾಗಿರಿ ವರ್ತನೆಯಲ್ಲಿ ಕಳ್ಳತನ ಸಮರ್ಥನೆ ಮಾಡಿಕೊಳ್ಳುತ್ತಾರೆ. ಚಂದಾಚೋರಿ ಚಂದಾಚೋರಿ ಎಂದು ಹುಂಡಿ ಕಳವು ಮಾಡಿದ್ದರ ಕುರಿತು ಹೇಳುತ್ತಿದ್ದು, ಇದು ಕೇವಲ ಸಿಸಿಟಿವಿಯಲ್ಲಿ ದಾಖಲಾಗಿರುವುದು ಮಾತ್ರ ಬೆಳಕಿಗೆ ಬಂದಿದೆ. ಆದರೆ ನೇರವಾಗಿ ಹಣದ ರೂಪದಲ್ಲಿ ದೇಣಿಗೆ ಕೊಟ್ಟವರು, ಖಾತೆಗೆ ಹಣ ಹಾಕಿರುವ ಹಣ ಮಾಹಿತಿ ಸಿಗುತ್ತಿಲ್ಲ. ಟ್ರಸ್ಟ್ ಅಧ್ಯಕ್ಷ ನೃತ್ಯದಾಸ, ಕಾರ್ಯದರ್ಶಿ ಚಂಪಕರಾಯ ಹಾಗೂ ಪದಾಧಿಕಾರಿಗಳ ರಾಜೀನಾಮೆ ಮಾತ್ರ ಪಡೆದಿದ್ದು, ಅವರ ಮೇಲೆ ದೂರು ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ರಾಮಮಂದಿರ ಕಟ್ಟಲು ಕಾಂಗ್ರೆಸ್ ಪಕ್ಷ ಯಾವತ್ತೂ ವಿರೋಧಿಸಿಲ್ಲ, ಅದನ್ನು ಬಿಜೆಪಿಯವರು ಅರಿಯಬೇಕು. ರಾಮಮಂದಿರದಲ್ಲಿ ಪೂಜೆ ಮಾಡಲು ಅನುಮತಿ ನೀಡಿದ್ದೇ ಕಾಂಗ್ರೆಸ್‌ನ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು. ಆದರೆ ವೋಟಿಗೋಸ್ಕರ ಆಡ್ವಾಣಿಯವರ ನೇತೃತ್ವದಲ್ಲಿ ಹೋರಾಟದ ಸಂಚಲನ ಮೂಡಿಸಿ ದೇಶಾದ್ಯಂತ ಇಟ್ಟಂಗಿ (ಇಟ್ಟಿಗೆ) ಹೆಸರಿನ ಮೇಲೆ ಕೋಟ್ಯಂತರ ಹಣ ಸಂಗ್ರಹಿಸಿದರು. ಆದರೆ ರಾಮಮಂದಿರ ಕೇಂದ್ರದ ಹಣದಲ್ಲಿ ನಿರ್ಮಿಸಲಾಯಿತು, ದೇಣಿಗೆ ಸಂಗ್ರಹಿಸಿದ ಹಣವೆಲ್ಲ ಎಲ್ಲಿ ಹೋಯ್ತು? ಅದರ ಲೆಕ್ಕ ಕೊಡಬೇಕು. ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಮೇತರ ಜನರನ್ನು ಸೇರಿಸಿದ ಹಾಗೆಯೇ ಹಿಂದೂಗಳ ಟ್ರಸ್ಟ್ ಹಾಗೂ ಹಿಂದೂ ದೇವಸ್ಥಾನಗಳಲ್ಲಿಯೂ ಹಿಂದೂಯೇತರರನ್ನು ಸೇರಿಸಬೇಕು. ಭ್ರಷ್ಟಾಚಾರ ತಡೆಯುತ್ತೇವೆ ಎಂದು ಅಧಿಕಾರಕ್ಕೆ ಬಂದು ಇವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.

ಹುಂಡಿ ಕಳವಿಗೆ ಪ್ರೇರಣೆಯಾಗಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ, ಸಿಎಂ ಯೋಗಿ ಆದಿತ್ಯನಾಥ ರವರು ರಾಜೀನಾಮೆ ಕೊಟ್ಟು, ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಫಯಾಜ್ ಕಲಾದಗಿ ಇದ್ದರು.