ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಅರಣ್ಯದಂಚಿನ ಗ್ರಾಮಗಳಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳದಿಂದ ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಂದಡೆ ಕರಡಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ, ಮತ್ತೊಂದೆಡೆ ಚಿರತೆ ಉಪಟಳದಿಂದ ರೈತರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದ್ದು, ಇದರಿಂದಾಗಿ ಮಾನವ-ಪ್ರಾಣಿ ಸಂಘರ್ಷಕ್ಕೆ ಎಡೆ ಮಾಡಕ್ಕೊಟ್ಟಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತ ರೈತರು ಕಂಗಾಲಾಗಿ ಹೋಗಿದ್ದಾರೆ.
ಕರಡಿ ದಾಳಿ:ಕೌದಳ್ಳಿ ಸಮೀಪದ ಚೆನ್ನೂರು ಗ್ರಾಮದಲ್ಲಿ ಬುಧವಾರ ಮುಂಜಾನೆ 5.30ರಲ್ಲಿ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದ್ದು ಕಾಲಿಗೆ ತೀವ್ರವಾಗಿ ಗಾಯಗೊಂಡ ಗೋವಿಂದ ಬೋವಿ ಭಯ ಭೀತರಾಗಿದ್ದಾರೆ.
ತುರ್ತುವಾಹನದಲ್ಲಿ ಆಸ್ಪತ್ರೆಗೆ ರವಾನೆ:ಕರಡಿ ದಾಳಿಯಿಂದ ಗಾಯಗೊಂಡು ಚೀರಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾದ್ದಾರೆ. ಈ ಸಂಬಂಧ ಕಾವೇರಿ ವನ್ಯಧಾಮ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಗಾಯಗೊಂಡಿರುವ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೆರವಿಗೆ ಮುಂದಾಗಿದ್ದಾರೆ.
ಚಿರತೆ ಉಪಟಳ:ಅಂಬಿಕಾಪುರ ಗ್ರಾಮದ ಸುತ್ತಮುತ್ತ ಕಳೆದ ಒಂದು ವಾರದಿಂದ ಜೋಡಿ ಮರಿಗಳ ಜೊತೆ ಚಿರತೆ ಬೀಡು ಬಿಟ್ಟಿದ್ದು ರಾತ್ರಿ ವೇಳೆ ಮಾತ್ರ ರೈತರ ಜಮೀನಿನ ಮನೆಗಳ ಹತ್ತಿರ ಚಿರತೆಗಳು ಬರುತ್ತಿವೆ. ಮಂಗಳವಾರ ರಾತ್ರಿ ಅಂಬಿಕಾಪುರದ ಕಲೀಲ್ ಸಾಬ್ ಎಂಬ ರೈತ ತನ್ನ ತೋಟದ ಮನೆಯ ಮುಂಭಾಗದಲ್ಲಿ ಇದ್ದಾಗ ದಿಢೀರನೆ ಚಿರತೆ ತನ್ನ ಎರಡು ಮರಿಗಳ ಜೊತೆ ಮನೆ ಕಡೆ ಬರುತ್ತಿದ್ದನ್ನು ಕಂಡು ಪಕ್ಕದಲ್ಲಿ ಪಾತ್ರೆಯನ್ನು ಹಿಡಿದು ಸದ್ದು ಮಾಡಿದಾಗ ಅಕ್ಕ ಪಕ್ಕದ ನಿವಾಸಿಗಳು ಬಂದಾಗ ಚಿರತೆಗಳು ಅಲ್ಲಿಂದ ಓಡಿಹೋಗಿವೆ.ಬೋನಿಗೆ ಬೀಳದ ಚಿರತೆಗಳು:
ಕಳೆದ ಹಲವಾರು ತಿಂಗಳುಗಳಿಂದ ಬಸಪ್ಪನ ದೊಡ್ಡಿ, ಗಂಗನದೊಡ್ಡಿ ಹಾಗೂ ಕಳೆದ ಒಂದು ವಾರದಿಂದ ಅಂಬಿಕಾಪುರ ಗ್ರಾಮದ ತೋಟದ ಮನೆಗಳ ರೈತರಾದ ಹೀನಾಯತ್, ಕಲಿಲ್ ಸಾಬ್ ಜಮೀನು ಹಾಗೂ ಹಳ್ಳ, ತೋಟದ ಮನೆಗಳ ಬಳಿಯೇ ರಾತ್ರಿ ವೇಳೆ ಜೋಡಿ ಚಿರತೆಗಳ ಜೊತೆ ತಾಯಿ ಚಿರತೆ ಬರುತ್ತಿರುವುದರಿಂದ ತೋಟದ ಮನೆಯಲ್ಲಿ ವಾಸಿಸುವ ರೈತರು ಭಯಭೀತರಾಗಿದ್ದಾರೆ.ಸುತ್ತಲಿನ ಗ್ರಾಮಗಳಲ್ಲಿ ಐವತ್ತಕ್ಕೂ ಹೆಚ್ಚು ಸಾಕು ನಾಯಿಗಳನ್ನು ಹಾಗೂ ಸಾಕು ಪ್ರಾಣಿಗಳಾದ ಕುರಿ, ಕೋಳಿ, ಮೇಕೆಗಳನ್ನು ತಿಂದಿರುವ ಚಿರತೆಗಳು ಅರಣ್ಯದತ್ತ ಹೋಗದೆ ರೈತರ ಜಮೀನುಗಳ ಬಳಿಯ ಸುತ್ತಾಡುತ್ತಿರುವುದರಿಂದ ಭಾರಿ ಆತಂಕದಲ್ಲಿ ರೈತರು ವಾಸಿಸುವಂತಾಗಿದೆ.
ಚಿರತೆಗಾಗಿ ನಿರಂತರ ಶೋಧನೆ:ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಗಂಗನ ದೊಡ್ಡಿ, ಗ್ರಾಮದ ಭೈರಪ್ಪ ಜಮೀನಿನ ಬಳಿ ತುಮಕೂರು ಗೇಜ್ ದೊಡ್ಡ ಗೇಟ್ ಅಳವಡಿಸಲಾಗಿದೆ.
ಕಳೆದ ಹಲವಾರು ತಿಂಗಳ ಹಿಂದೆ ಒಂದು ಚಿರತೆಯಿಂದ ಈಗ ಮೂರು ಚಿರತೆಗಳಾಗಿ ರೈತರ ಜಮೀನುಗಳಲ್ಲಿ ಉಪಟಳ ನೀಡುವುದರ ಜೊತೆಗೆ ಸಾಕುಪ್ರಾಣಿಗಳನ್ನು ತಿಂದು ದಿನನಿತ್ಯ ರೈತರಿಗೆ ಕಾಣಿಸಿಕೊಳ್ಳುತ್ತಿದೆ. ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಚಿರತೆಗಳು ಮನುಷ್ಯನ ಮೇಲೆ ದಾಳಿ ಮಾಡಬಹುದು. ಇದರಿಂದಾಗಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.ಅಮ್ಜಾದ್ ಖಾನ್, ರಾಜ್ಯ ರೈತ ಸಂಘ, ತಾಲೂಕು ಘಟಕ ಅಧ್ಯಕ್ಷಚಿರತೆಗಳು ಇರುವ ಬಗ್ಗೆ ನಮ್ಮ ಇಲಾಖೆ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಪಟಳ ನೀಡುತ್ತಿರುವ ಚಿರತೆಗಳನ್ನು ಸೆರೆ ಹಿಡಿಯಲು ತುಮಕೂರು ಗೇಜ್ ಪಂಜರ ಸೇರಿದಂತೆ ಇನ್ನು ಎರಡು ಗ್ರಾಮಗಳಲ್ಲಿ ಬೋನ್‌ಗಳನ್ನು ಇಡಲಾಗಿದೆ. ಡೋಣ್ ಕ್ಯಾಮೆರಾದಲ್ಲೂ ಚಿರತೆಗಳ ಚಲನವಲನ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಕ್ರಮ ಕೈಗೊಳ್ಳಲಾಗುವುದು.-ಸಂತೋಷ್ ಕುಮಾರ್, ಡಿಸಿಎಫ್, ಕೊಳ್ಳೇಗಾಲ ಉಪ ವಿಭಾಗ