ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಇತ್ತೀಚೆಗೆ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು, ಮತದಾರರನ್ನು ಹೆದರಿಸಿ, ಬೆದರಿಸಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡ ಶಾಸಕ ನಂಜೇಗೌಡರ ಕಾರ್ಯವೈಖರಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಜಿಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಗೆದ್ದ ಹಾಗೂ ಸೋತ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ವರ್ಧಿಸಬಹುದು ಹಾಗೂ ಯಾರಿಗೆ ಬೇಕಾದರೂ ತಮ್ಮ ಮತ ಹಾಕಬಹುದಾದ ಹಕ್ಕು ಇರುತ್ತದೆ. ಆದರೆ ಅಭ್ಯರ್ಥಿಗಳನ್ನು ಬೆದರಿಸಿ ಚುನಾವಣೆಯಲ್ಲಿ ಹಿಂಜರಿಯುವಂತೆ ಮಾಡುವುದು, ಮತದಾರರನ್ನು ಬೆದರಿಸುವಂತಹ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದರು.ಈಗ ನಡೆದಿರುವ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಅಂಬರೀಶ್ ನಮ್ಮ ಪಕ್ಷದವನಾಗಿದ್ದು, ಮಾಧ್ಯಮ ಮೂಲಕ ನಮ್ಮ ಪಕ್ಷದವನು ಎಂದು ಶಾಸಕರು ಬಿಂಬಿಸಲು ಹೊರಟ್ಟಿದ್ದಾರೆ ಎಂದ ಕೃಷ್ಣಪ್ಪ, ಜನರಲ್ಲಿ ಗೊಂದಲ ಹೋಗಲಾಡಿಸಲು ಅಭ್ಯರ್ಥಿ ಅಂಬರೀಶ್ ರವರಿಂದ ಪತ್ರಿಕಾಗೋಷ್ಠಿ ಆಯೋಜಿಸುವುದಾಗಿ ತಿಳಿಸಿದರು.
ಅಧಿಕಾರದ ದುರುಪಯೋಗದಿಂದ ಗೆಲವು ಸಾಧಿಸಿರುವ ಶಾಸಕರು ಮುಂಬರಲಿರುವ ಚುನಾವಣೆಯಲ್ಲಿ ಎನ್ಡಿಎಯಿಂದ ಸ್ಪರ್ಧಿಸಲು ನಾಯಕರೇ ಸಿಗದಂತೆ ಮಾಡುತ್ತೇನೆ ಎಂದಿರುವುದು ಸರ್ವಾಧಿಕಾರಿ ಧೋರಣೆಯ ಹೇಳಿಕೆಯಾಗಿದ್ದು ,ಅವರ ಬೆದರಿಕೆಗಳಿಗೆ ಬೆದರುವ ಜಾಯಮಾನ ನಮ್ಮ ಪಕ್ಷದ ಮುಖಂಡರಿಗಿಲ್ಲ. ಏಕೆಂದರೆ ನಾವೆಲ್ಲರೂ ಇಲ್ಲಿ ಹುಟ್ಟಿ ಬೆಳದವರು ಎಂದರು.ರೈತರ ಸಂಬಂಧ ಚುನಾವಣೆಯೆಂದೇ ಮಾಜಿ ಶಾಸಕ ಮಂಜುನಾಥ್ ಗೌಡರು ಈ ಚುನಾವಣೆಯಿಂದ ದೂರ ಇದ್ದು, ಮುಂಬರಲಿರುವ ಎಲ್ಲ ಜನಪ್ರತಿನಿಧಿ ಚುನಾವಣೆಗಳು ಮಂಜುನಾಥ್ ಗೌಡರ ನೇತೃತ್ವದಲ್ಲಿ ನಡೆಯಲಿದೆ. ಗೆದ್ದ ನಂತರದಿಂದ ಪತ್ರಿ ದಿನ ಮಾಧ್ಯಮ ಮೂಲಕ 2 ಸಾವಿರ ಕೋಟಿ ಅನುದಾನ ತಾಲೂಕಿಗೆ ಬಂದಿದೆ ಎಂದು ಹೇಳಿಕೆ ನೀಡುವ ಶಾಸಕರು, ಒಮ್ಮೆ ಮಾಲೂರಿನಿಂದ ಹೊಸೂರುಗೆ ಹೋಗುವ ನಮ್ಮ ಗಡಿ ಭಾಗ ಸಂಪಂಗೆರೆ ವೆರೆಗಿನ ರಸ್ತೆಯಲ್ಲಿ ಸಂಚರಿಸಿದರೆ ಸಾಕು, ರಸ್ತೆ ಪರಿಸ್ಥಿತಿ ಹೇಗಿದೆ ಎಂದು ಗೊತ್ತಾಗುತ್ತದೆ. ಶಾಸಕರು ಕೇವಲ ಬೊಗಳೆ ದಾಸರಾಗದೆ, ದ್ವೇಷ ರಾಜಕಾರಣ ಮಾಡದೆ ಅಭಿವೃದ್ಧಿ ಕಡೆ ಗಮನ ನೀಡಲಿ ಎಂದು ಆಶಿಸುತ್ತೇನೆ ಎಂದರು.
ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ಕೆ.ಬಿ.ನಾರಾಯಣಸ್ವಾಮಿ, ದಯಾನಂದ್, ತೇಜಸ್ ಹಾಗೂ ಸೋತ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಮಡಿವಾಳ ಚಂದ್ರಶೇಖರ್ ಗೌಡ ,ಬೆಳ್ಳಾವಿ ಸೋಮಣ್ಣ ,ಓಜರಹಳ್ಳಿ ಮುನಿಯಪ್ಪ ,ದೊಡ್ಡಿ ರಾಜಣ್ಣ ,ಮುನಿಶ್ಯಾಮಗೌಡ,ವೇಣು ,ಬಾಬು ,ಕೃಷ್ಣಪ್ಪ ,ವೆಂಕಟೇಶಪ್ಪ,ಗೂಡು ನಾಗರಾಜ್ ,ಮಹಿಳಾ ಅಧ್ಯಕ್ಷೆ ಪದ್ಮಾವತಿ ,ಅನಿತಾ ನಾಗರಾಜ ಇದ್ದರು.