ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾದ ಶಾಸಕ ಸುರೇಶ್‌ಗೌಡ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಬುಧವಾರ ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸದ ಮುಂದೆ ಬೆಳಿಗ್ಗೆಯಿಂದಲೇ ಬಿಜೆಪಿ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಓರ್ವ ಹೆಚ್ಚುವರಿ ಎಸ್ಪಿ, ಇಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಪೊಲೀಸರನ್ನು ಬಿಗಿ ಪೊಲೀಸ್ ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಪೊಲೀಸರು ಈ ಭಾಗದ ರಸ್ತೆಯಲ್ಲಿ ಸಂಚರಿಸುವ ಕಾರು ಮತ್ತು ಬಸ್‌ಗಳ ತಪಾಸಣಾ ಕಾರ್ಯನ್ನು ನಡೆಸಿದರು. ಕಾರುಗಳಲ್ಲಿ ಬಂದ ಬಿಜೆಪಿ ಕಾರ್ಯಕರ್ತರನ್ನು ತಪಾಸಣೆ ವೇಳೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದ ವಿಷಯ ತಿಳಿದ ಶಾಸಕ ಸುರೇಶ್‌ಗೌಡ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ನೇತೃತ್ವದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ನಗರ ಸಾರಿಗೆ ಬಸ್‌ನಲ್ಲಿ ಸಿದ್ದಾರ್ಥ ನಗರಕ್ಕೆ ಆಗಮಿಸಿದರು. ಪೊಲೀಸರು ಕಾರುಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ನಗರ ಸಾರಿಗೆ ಬಸ್ ಪೊಲೀಸರು ಇರುವುದನ್ನು ಕಂಡು ಸಚಿವ ಪರಮೇಶ್ವರ್ ಅವರ ನಿವಾಸದ ಅಣತಿ ದೂರಲ್ಲಿ ಬಸ್ ನಿಧಾನಗತಿಯಲ್ಲಿ ಚಲಿಸಿತು. ಆ ವೇಳೆ ಬಸ್‌ನಲ್ಲಿದ್ದ ಶಾಸಕ ಸುರೇಶ್‌ಗೌಡ ಅವರು ಗುರುತು ಸಿಗದಂತೆ ಮುಖಕ್ಕೆ ಕೇಸರಿ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡು ಇಳಿದು ಪರಮೇಶ್ವರ್ ನಿವಾಸದತ್ತೆ ತೆರಳಲು ಮುಂದಾದರು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸುರೇಶ್‌ಗೌಡ, ರವಿಶಂಕರ್ ಹಾಗೂ ಕಾರ್ಯಕರ್ತರನ್ನು ಸುತ್ತುವರೆದು ವಶಕ್ಕೆ ಪಡೆದರು. ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಶಾಸಕ ಸುರೇಶ್‌ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ರಾಜ್ಯದಲ್ಲಿ ವಿಕೃತಿ ಮೆರೆಯುವ ಘಟನೆ ನಡೆದಿದೆ:ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರದ ಹಾಗೂ ಗೃಹ ಸಚಿವರ ಆಡಳಿತ ವೈಫಲ್ಯವೇ ಕಾರಣ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಸಚಿವರ ನಿವಾಸದ ಬಳಿ ಬೀಡುಬಿಟ್ಟಿದ್ದ 200 ಕ್ಕೂ ಹೆಚ್ಚು ಮನೆಗೆ ಮುತ್ತಿಗೆ ಹಾಕಲು ಬಂದ ಮುಖಂಡರನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದು ನಗರದ ಚಿಲುಮೆ ಸಮುದಾಯ ಭವನಕ್ಕೆ ಕರೆದೊಯ್ದರು. ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.ಪ್ರತಿಭಟನೆ ಮಾಡಲೂ ಪೊಲೀಸರು ಅವಕಾಶ ನೀಡದೆ ತಡೆದ ಕ್ರಮ ಖಂಡಿಸಿದ ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡರು, ದೇಶದಲ್ಲಿ ಗೋವನ್ನು ದೇವರೆಂದು ಪೂಜಿಸುತ್ತೇವೆ. ಅದು ನಮಗೆ ಅಮೃತ ಕೊಡುತ್ತದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪದೇಪದೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೃತ್ಯಗಳು ನಡೆಯುತ್ತಿವೆ. ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಆರೋಪಿಸಿದರು.ಕಾನೂನಿನ ಭಯವಿಲ್ಲದೆ ಅಟ್ಟಹಾಸ ಮೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವುದೇ ಇದಕ್ಕೆಲ್ಲಾ ಕಾರಣ. ಈ ಸರ್ಕಾರದ ಆಯಸ್ಸು ಕಡಿಮೆ ಇದೆ. ತುಷ್ಟೀಕರಣ ರಾಜಕಾರಣದಿಂದ ಬೇಸತ್ತಿರುವ ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ಹಸುವಿನ ಕೆಚ್ಚಲುಕೊಯ್ದ ಪ್ರಕರಣದಲ್ಲಿ ಯಾರೋ ಅಮಾಯಕನನ್ನು ಹಿಡಿದುತಂದು, ಅವನನ್ನು ಆರೋಪಿ ಮಾಡಿದ್ದಾರೆ. ಘಟನೆ ಹಿಂದೆ ಯಾರ್ಯಾರು ಇದ್ದಾರೆ ಅನ್ನುವುದು ನಮಗೂ ಗೊತ್ತು. ಆ ಘಟನೆ ಯಾವ ಕ್ಷೇತ್ರದಲ್ಲಿ ನಡೆದಿದೆ? ಎಂದು ಅವರು, ಸಚಿವ ಜಮೀರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಒತ್ತಾಯಿಸಿದರು.
ಗೋವನ್ನು ಪೂಜಿಸುವ ದೇಶದಲ್ಲಿ ಗೋ ಮಾತೆ ಮೇಲಿನ ದೌರ್ಜನ್ಯ ದೇಶವೇ ಖಂಡಿಸುವಂತಾದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕಬೇಕು ಎಂದು ಸುರೇಶ್‌ಗೌಡರು ಗೃಹ ಸಚಿವರನ್ನು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಗೋ ಮಾತೆ ಮೇಲಿನ ದೌರ್ಜನ್ಯ ಎಲ್ಲರೂ ಖಂಡಿಸುವಂತಹ ಹೇಯಕೃತ್ಯ. ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಸರ್ಕಾರದ ಮಂತ್ರಿಗಳು ಬಂದಕಡೆಯಿಲ್ಲಾ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವರು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ತಮ್ಮ ಲೋಪಮುಚ್ಚಿಕೊಳ್ಳಲು ಇಂತಹ ವಿವಾದಗಳನ್ನು ಸೃಷ್ಠಿ ಮಾಡಿ ಜನರನ್ನು ದಿಕ್ಕುತಪ್ಪಿಸುವಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ ಎಂದು ಟೀಕಿಸಿದರು.ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಹಸುವಿನ ಕೆಚ್ಚಲು ಕೊಯ್ದು, ಮಚ್ಚಿನಿಂದ ಹೊಡೆದ ಅಮಾನುಷವಾಗಿ ಕೃತ್ಯವನ್ನು ಗಂಭೀರವಾಗಿ ಸ್ವೀಕರಿಸಿ ಸಮಗ್ರ ತನಿಖೆ ಮಾಡಬೇಕು. ಇದರ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್‌ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ರೈತ ಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ಒಬಿಸಿ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ಧನುಷ್, ಮುಖಂಡರಾದ ಗುಬ್ಬಿ ಪಂಚಾಕ್ಷರಿ, ಗಣೇಶ್‌ಪ್ರಸಾದ್, ಬನಶಂಕರಿಬಾಬು, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹೋರಾಟದಲ್ಲಿ ಭಾಗಿಯಾಗಿದ್ದರು.