ಗೋಕರ್ಣ: ಮೀನುಗಾರಿಕೆ ಮುಗಿಸಿ ಬಂದ ಬೋಟ್ನಿಂದ ಮೀನು ಖಾಲಿ ಮಾಡಿ ಸ್ವಚ್ಛಗೊಳಿಸುವ ವೇಳೆ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟು, ಓರ್ವ ಜೀವಾಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ಇಲ್ಲಿನ ತದಡಿ ಬಂದರಿನಲ್ಲಿ ನಡೆದಿದೆ. ಕುಮಟಾ ಕಾಗಾಲ ಹೆನಿಯ ನೌಶಾದ ಅಲಿರಾಜನ್(೩೫), ಒನ್ನಳ್ಳಿಯ ಅಮನ್ ಅಯುಬ್ ಲಿಂಗಾಡೂ(೧೮), ಅಮೀರ ಅಬ್ದುಲ್ ಉಂಚಳ್ಳಿ(೨೦) ಎಂಬವರೇ ಮೃತಪಟ್ಟ ಮೀನುಗಾರಿಕಾ ಕಾರ್ಮಿಕರು. ಬೆಟ್ಕುಳಿಯ ಅಬ್ದುಲ್(೫೫) ಜೀವಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಕುಮಟಾ ಒನ್ನಳ್ಳಿಯ ಖುಜೈನಾ ಎಂಬ ಬೋಟ್ನಲ್ಲಿ ಮಂಗಳವಾರ ಸಂಜೆ ಮೀನು ಇಳಿಸಿದ್ದಾರೆ. ನಂತರ ತ್ಯಾಜ್ಯ ತೆಗೆಯಲು ಹೋದ ಕಾರ್ಮಿಕರಿಗೆ ಚಮನ್ ಜಾತಿಯ ಮೀನಿನ ಕೊಳೆತ ತ್ಯಾಜ್ಯದ ತೀವ್ರ ಘಾಟಿಗೆ ಪ್ರಜ್ಞೆ ತಪ್ಪಿ ಕೋಲ್ಡ್ ಸ್ಟೋರೇಜ್ನ ಚಿಕ್ಕ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದ್ದು, ಒಬ್ಬರನ್ನು ಮತ್ತೊಬ್ಬರು ಬಚಾವ್ ಮಾಡಲು ತೆರಳಿ ಒಟ್ಟು ನಾಲ್ವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಖಾಸಗಿ ಆ್ಯಂಬುಲೆನ್ಸ್ ಮೂಲಕ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದಿದ್ದಾರೆ. ಇಲ್ಲಿ ಬರುವಷ್ಟರಲ್ಲಿ ಮೂವರು ಮೃತಪಟ್ಟಿದ್ದು, ಇನ್ನೋರ್ವನಿಗೆ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕುಮಟಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಪಿಐ ಶ್ರೀಧರ ಎಸ್.ಆರ್., ಪಿಎಸ್ಐ ಅನಿಲ್ ಹಾಗೂ ಸಿಬ್ಬಂದಿ, ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮುಗಿಲು ಮುಟ್ಟಿದ ಆಕ್ರಂದನ: ಮೃತಪಟ್ಟವರು ಚಿಕ್ಕ ವಯಸ್ಸಿನವರಾಗಿದ್ದು, ತಂದೆ- ತಾಯಿಯ ಜೀವನಕ್ಕೆ ಆಧಾರವಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು, ಸ್ಥಳೀಯ ಮೀನುಗಾರರ, ಆಸ್ಪತ್ರೆಯವರು ಸಮಾಧಾನಪಡಿಸಲು ಹರಸಾಹಸ ಮಾಡಿದ್ದರು.ಮೀನಿನ ಘಾಟು ಜೀವಕ್ಕೆ ಕುತ್ತು: ಚಮನ್ ಜಾತಿಯ ಮೀನು ಕೊಳೆತರೆ ಅದರ ಹೊಲಸು ವಾಸನೆ ಹಾಗೂ ಗಾಳಿ ಮನುಷ್ಯನಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಇಲ್ಲಿನ ಮೀನುಗಾರರು ಹೇಳುತ್ತಿದ್ದು, ಇದೇ ಗಾಳಿಯಿಂದ ಕಾರ್ಮಿಕರು ದಿಢೀರ್ ಅಸ್ವಸ್ಥಗೊಳ್ಳಲು ಕಾರಣ ಎನ್ನಲಾಗಿದ್ದು, ಈ ಬಗ್ಗೆ ನಿಖರ ಮಾಹಿತಿಗಾಗಿ ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆದಿದೆ.