ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪ್ರತಿ ಧರ್ಮದಲ್ಲಿ ಭಕ್ತಿಯ ಜತೆ ಮೂಢನಂಬಿಕೆಗಳು ಇವೆ. ಹಳೆ ವಸ್ತ್ರಗಳನ್ನು ನದಿಗಳ ನೀರಿಗೆ ಹಾಕಿದರೆ ಪಾಪ ಪರಿಹಾರವಾಗುವುದಿಲ್ಲ. ಇದು ನೀರು, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹೇಳಿದರು.ಅವರು ಭಾನುವಾರ ಧರ್ಮಸ್ಥಳದ ನೇತ್ರಾವತಿಯಲ್ಲಿ ವಂದೇ ಮಾತರಂ ನನ್ನ ಸೇವೆ ದೇಶಕ್ಕಾಗಿ ಎಂಬ ಧ್ಯೇಯ ವಾಕ್ಯದಡಿ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಮಾತನಾಡಿ, ಆರೋಗ್ಯ ಪೂರ್ಣ ನೆಮ್ಮದಿಯ ಬದುಕಿಗೆ ಸ್ವಚ್ಛ ಪರಿಸರ, ಗಾಳಿ, ಆಹಾರ ಬೇಕು. ಇದನ್ನು ಕಾಪಾಡಿ ಬಳಸುವುದು ನಮ್ಮ ಕರ್ತವ್ಯವಾಗಬೇಕು. ಪರಿಸರ ಸಂರಕ್ಷಣೆಯ ಹೊಣೆ ನಮ್ಮದಾಗಿದ್ದು ಇದರ ಅರಿವು ಇನ್ನಷ್ಟು ಹೆಚ್ಚಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಧನಂಜಯ ರಾವ್ ಮಾತನಾಡಿ, ಸ್ವಚ್ಛತೆ ನಮ್ಮ ಮನೆಗಷ್ಟೇ ಸೀಮಿತವಾಗಬಾರದು. ಸ್ವಚ್ಛತೆ ಎಂಬುದು ಸಾಮಾಜಿಕ ಜಾಗೃತಿಯಾಗಬೇಕು. ನಮ್ಮ ಆಶ್ರಯದಾತೆ ತಾಯಿ ಭಾರತಿ ಕೊಟ್ಟಿರುವ ಪರಿಸರವನ್ನು ರಕ್ಷಿಸುವ ಸಂಕಲ್ಪ ನಮ್ಮದಾಗಬೇಕು ಎಂದರು.
ಬೆಳ್ತಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಬಿ.ಜಿ.ಸುಬ್ಬಪುರ್ ಮಠ್ ಶುಭ ಹಾರೈಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಬೆಳ್ತಂಗಡಿ ಸಂಚಾರಿ ಠಾಣೆಯ ಉಪನಿರೀಕ್ಷಕ ಅರ್ಜುನ್, ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಕಿಶೋರ್ ಪಿ., ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಎಸ್ ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಕೆ.ಇದ್ದರು.ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ.ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಡಿಎಂ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್ ವಂದಿಸಿದರು. ತಿಮ್ಮಯ್ಯ ನಾಯ್ಕ ನಿರೂಪಿಸಿದರು.
ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಎಸ್ ಡಿಎಂ ಕಾಲೇಜು ಎನ್ನೆಸ್ಸೆಸ್ ಘಟಕಗಳು, ಎಸ್ ಡಿ ಎಂ ಸ್ಪೋರ್ಟ್ಸ್ ಕ್ಲಬ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಹಾಗೂ ತಾಲೂಕು ಆರಕ್ಷಕ ಠಾಣೆಯ ಸಿಬ್ಬಂದಿ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.................
ನೇತ್ರಾವತಿ ನದಿ ಪರಿಸರದಲ್ಲಿ ಸುಮಾರು 650ಕ್ಕಿಂತ ಅಧಿಕ ಮಂದಿ ಸ್ವಚ್ಛತೆಗೆ ಕೈಜೋಡಿಸಿದರು. ನದಿ ಪಾತ್ರದ ಗುರುತಿಸಿದ ಸ್ಥಳಗಳಲ್ಲಿ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಪೊಲೀಸ್ ಇಲಾಖೆ ಸಿಬ್ಬಂದಿ ಸ್ವಚ್ಛತೆಗೆ ಕೈಜೋಡಿಸಿದರು. ಭಕ್ತಾದಿಗಳಿಗೆ ಕಸವನ್ನು, ಬಟ್ಟೆಗಳನ್ನು ಅಲ್ಲಲ್ಲಿ ಎಸೆಯದಂತೆ ಮಾಹಿತಿ ನೀಡಲಾಯಿತು. ಭಾಗವಹಿಸಿದವರಿಗೆ ಬದುಕು ಕಟ್ಟೋಣ ಬನ್ನಿ ತಂಡದ ವತಿಯಿಂದ ಸಮವಸ್ತ್ರ ನೀಡಲಾಯಿತು.---------------8 ವರ್ಷಗಳಿಂದ ಸಾಮಾಜಿಕ ಸೇವೆಕಳೆದ 8 ವರ್ಷಗಳಿಂದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಾಮಾಜಿಕ ಸೇವೆಗಳನ್ನು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೈಗೊಳ್ಳುತ್ತಿದೆ. ನಾವು ಮಾಡುವ ಕೆಲಸಗಳು ಇತರರಿಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿ ಸಮೂಹ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ನದಿ, ಜಲಮೂಲಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಕೆ.ಮೋಹನ್ ಕುಮಾರ್ ಹೇಳಿದರು.