ಹುಲಿಗಳ ಸಂಖ್ಯೆ ಮತ್ತು ಸ್ಥಿತಿಗತಿ ಅರಿಯುವ ಉದ್ದೇಶದೊಂದಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತಿದ್ದು, ಪ್ರಸಕ್ತ ಸಾಲಿನ ಹುಲಿ ಗಣತಿ ಜ.5ರಿಂದ ರಾಜ್ಯದಲ್ಲಿ ಆರಂಭಿಸಲಾಗಿದೆ.

 ಬೆಂಗಳೂರು : ಹುಲಿಗಳ ಸಂಖ್ಯೆ ಮತ್ತು ಸ್ಥಿತಿಗತಿ ಅರಿಯುವ ಉದ್ದೇಶದೊಂದಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತಿದ್ದು, ಪ್ರಸಕ್ತ ಸಾಲಿನ ಹುಲಿ ಗಣತಿ ಜ.5ರಿಂದ ರಾಜ್ಯದಲ್ಲಿ ಆರಂಭಿಸಲಾಗಿದೆ.

ರಾಷ್ಟ್ರೀಯ ಹುಲಿಗಳ ಸಂಖ್ಯೆ ಮತ್ತು ಸ್ಥಿತಿಗತಿ ಅರಿಯಲು ಕಳೆದ 2006ರಿಂದ ಅಖಿಲ ಭಾರತ ಹುಲಿ ಗಣತಿ ನಡೆಸಲಾಗುತ್ತಿದೆ. ಈಗಾಗಲೇ ಒಟ್ಟು 5 ಸುತ್ತುಗಳಲ್ಲಿ ಹುಲಿ ಗಣತಿ ಮಾಡಲಾಗಿದ್ದು, ಕಳೆದ ಬಾರಿ 2022ರಲ್ಲಿ ಹುಲಿ ಗಣತಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ದೇಶದಲ್ಲಿ 3,682 ಹುಲಿಗಳಿರುವುದು ಪತ್ತೆಯಾಗಿದ್ದು, ಕರ್ನಾಟಕದಲ್ಲೇ 563 ಹುಲಿಗಳನ್ನು ಪತ್ತೆ ಮಾಡಲಾಗಿತ್ತು. ಆ ಮೂಲಕ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು.

6ನೇ ಸುತ್ತಿನ ಹುಲಿ ಗಣತಿ ಕಾರ್ಯ

ಇದೀಗ 6ನೇ ಸುತ್ತಿನ ಹುಲಿ ಗಣತಿ ಕಾರ್ಯವನ್ನು ರಾಜ್ಯದಲ್ಲಿ ಜ.5ರಿಂದ ಆರಂಭಿಸಲಾಗಿದೆ. ಹುಲಿ ಗಣತಿಗಾಗಿ ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶ, ಅರಣ್ಯ ಇಲಾಖೆಯ 13 ವೃತ್ತಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ವಿವಿಧ ಕಾರ್ಯಕ್ಕಾಗಿ ಒಟ್ಟಾರೆ 9 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಹುಲಿ ಗಣತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು ಮೂರು ಹಂತದಲ್ಲಿ ಹುಲಿ ಗಣತಿ ಸಮೀಕ್ಷೆ ನಡೆಯಲಿದ್ದು, ಮೊದಲಿಗೆ ಅರಣ್ಯ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಮಾಂಸಾಹಾರಿ ಪ್ರಾಣಿಗಳ ಕುರುಹು ಪತ್ತೆ ಮಾಡಲಾಗುತ್ತದೆ. ಈ ವೇಳೆ ಮಾಂಸಾಹಾರಿ ಪ್ರಾಣಿಗಳ ಡಿಎನ್‌ಎ ಪರೀಕ್ಷೆಗಾಗಿ ಲದ್ದಿ/ಹಿಕ್ಕೆಗಳನ್ನು ಸಂಗ್ರಹಿಸಲಾಗುತ್ತದೆ. ಅದಕ್ಕಾಗಿ ರಾಜ್ಯದಲ್ಲಿ 2,700 ಜಿಪ್‌ ಲಾಕ್‌ ಬ್ಯಾಗ್‌ಗಳನ್ನು ಪೂರೈಸಲಾಗಿದೆ.

ಅದಾದ ನಂತರ ಲೈನ್‌ ಟ್ರಾನ್ಸೆಕ್ಟ್‌ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಜಿಂಕೆ, ಕಡವೆ, ಕಾಟಿ, ಕಾಡು ಕುರಿ ಸೇರಿ ಸಸ್ಯಹಾರಿ ಪ್ರಾಣಿಗಳ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಸೀ-ಥ್ರೂ ಕಂಪಾಸ್‌, ರೇಂಜ್‌ ಫೈಂಡರ್‌ ಸಾಧನಗಳನ್ನು ಬಳಸಲಾಗುತ್ತಿದೆ. ಈ ಕಾರ್ಯವು ಜ.9ರಿಂದ ಫೆ.7ರವರೆಗೆ ನಡೆಯಲಿದೆ.

ಮೂರನೇ ಹಂತದಲ್ಲಿ ಕ್ಯಾಮೆರಾ ಟ್ರ್ಯಾಪ್‌ ಬಳಸಿ ಹುಲಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲೆರಡು ಸಮೀಕ್ಷೆಯಲ್ಲಿ ಪತ್ತೆಯಾದ ಅಂಶಗಳನ್ನಾಧರಿಸಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಓಡಾಟವಿರುವ ಅರಣ್ಯ ಪ್ರದೇಶದ ನಿರ್ದಿಷ್ಟ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ. ರಾಜ್ಯದ 5 ಹುಲಿ ಸಂರಕ್ಷಿತಾರಣ್ಯದಲ್ಲಿ ಒಟ್ಟು 2,230 ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ಅಖಿಲ ಭಾರತ ಹುಲಿ ಗಣತಿ 2026 ಮತ್ತು ಹುಲಿ ಯೋಜನೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ಕುಮಾರ್‌ ತಿಳಿಸಿದ್ದಾರೆ.