ದೇಶದಲ್ಲಿ ಹುಲಿ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರಾಜೆಕ್ಟ್ ಟೈಗರ್, ವನ್ಯಜೀವಿ ಕಾರಿಡಾರ್‌ಗಳ ನಿರ್ಮಾಣ, ಅರಣ್ಯ ಪ್ರದೇಶಗಳ ವಿಸ್ತರಣೆ ಆಕ್ರಮ ಬೇಟೆ ಸೇರಿದಂತೆ ಹಲವಾರು ಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಿಲಾಗಿದೆ.

ಸುಬ್ರಮಣಿ ಸಿದ್ದಾಪುರಸಿದ್ದಾಪುರ: ದೇಶದಲ್ಲಿ ಹುಲಿ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರಾಜೆಕ್ಟ್ ಟೈಗರ್, ವನ್ಯಜೀವಿ ಕಾರಿಡಾರ್‌ಗಳ ನಿರ್ಮಾಣ, ಅರಣ್ಯ ಪ್ರದೇಶಗಳ ವಿಸ್ತರಣೆ ಆಕ್ರಮ ಬೇಟೆ ಸೇರಿದಂತೆ ಹಲವಾರು ಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಿಲಾಗಿದೆ.

ಪ್ರಸ್ತುತ ಹುಲಿ ಸಂರಕ್ಷಣೆಗಾಗಿ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ 843 ಚದರ ಕಿ.ಮಿ. ಅರಣ್ಯ ಪ್ರದೇಶಗಳಿದ್ದು, ಅಲ್ಲಿ 149 ಹುಲಿಗಳಿರುವುದಾಗಿ ಅರಣ್ಯಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಲಿ ಸಂರಕ್ಷಣೆಗೆ ಅರಣ್ಯದಲ್ಲಿ ಹಲವು ಕ್ರಮಗಳನ್ನು ಕೈಗೊಂಡರೂ ಅರಣ್ಯದಂಚಿನ ಪ್ರದೇಶಗಳಲ್ಲಿ ಮಾತ್ರ ಹುಲಿ ದಾಳಿ ನಡೆಯುತ್ತಿದೆ. ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಮಾನವ–ವನ್ಯಜೀವಿ ಸಂಘರ್ಷವೂ ಹೆಚ್ಚಾಗುತ್ತಿದೆ. ಗ್ರಾಮದ ಸುತ್ತಮುತ್ತಲಿನ ನಿವಾಸಿಗಳ ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಹುಲಿ ದಾಳಿಗೆ ಜಾನುವಾರುಗಳು ಬಲಿ:

ಹುಲಿಗಳು ಆಹಾರಕ್ಕಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಅರಣ್ಯದಂಚಿನ ಗ್ರಾಮಗಳಾದ ಮಾಲ್ದಾರೆ, ಬಾಣಾಂಗಾಲ ಗೂಡ್ಲುರು ಶ್ರೀಮಂಗಲ ತಿತಿಮತಿ ಮುಂತಾದ ಪ್ರದೇಶದಲ್ಲಿ ನಿವಾಸಿಗಳು ಸಾಕಿದ ಹಸು, ಎಮ್ಮೆ, ಕರು ಮೊದಲಾದ ಸಾಕು ಪ್ರಾಣಿಗಳನ್ನು ಹುಲಿಗಳು ತಿಂದು ಹಾಕುತ್ತಿವೆ. ಕಾಫಿ ತೋಟಗಳಲ್ಲಿ ಕೂಡ ಹುಲಿ ಸಂಚಾರ ಕಂಡುಬರುತ್ತಿದ್ದು, ಕಾರ್ಮಿಕರು ಬೆಳೆಗಾರರು ಆತಂಕ ಪಡುವಂತಾಗಿದೆ. ಅಗತ್ಯವಿದ್ದರೆ ಸರ್ಕಾರದಿಂದ ಅನುಮತಿ ಪಡೆದು, ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿದ ಹುಲಿ ಅಥವಾ ಕಾಡಾನೆಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮರಳಿ ಕಾಡಿಗೆ ಬಿಡುವ ಕಾರ್ಯವೂ ನಡೆಯುತ್ತಿದೆ. ಈ ಎಲ್ಲ ಕ್ರಮಗಳ ಮೂಲಕ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣೆ ಜತೆಗೆ ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವತ್ತ ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ವಿರಾಜಪೇಟೆ ಪೊನ್ನಂಪೇಟೆ ಮತ್ತು ತಿತಿಮತಿ ವಲಯಗಳಲ್ಲಿ 2024-25ನೇ ಸಾಲಿನಲ್ಲಿ 57 ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, 15 ಲಕ್ಷದ 91 ಸಾವಿರ ಹಾಗೂ 2025-26 ಸಾಲಿನಲ್ಲಿ 48 ಪ್ರಕರಣಗಳು ದಾಖಲಾಗಿದ್ದು, 15,51, 600 ರು.ವನ್ನು ಅರಣ್ಯ ಇಲಾಖೆಯು ಜಾನುವಾರುಗಳ ವಾರಸುದಾರರಿಗೆ ಪರಿಹಾರವಾಗಿ ನೀಡಿದೆ.

ಹುಲಿ ದಾಳಿ ತಡಗೆ ಎಐ ತಂತ್ರಜ್ಞಾನ:

ಅರಣ್ಯ ಇಲಾಖೆ ಹುಲಿ ಆಕ್ರಮಣಕ್ಕೆ ಹಲವು ಅಧುನಿಕ ಕ್ರಮಗಳನ್ನು ಕೈಗೊಂಡಿದ್ದು, ಹುಲಿ ಚಲನವಲನ ಪತ್ತೆಹಚ್ಚಲು

ಕ್ಯಾಮೆರಾ ಅಳವಡಿಸಿ ನಿಗಾ ವಹಿಸುತ್ತಿದೆ. ಸೌರ ಬೇಲಿ, ವಿದ್ಯುತ್ ಬೇಲಿ, ಟ್ರೆಂಚ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಹುಲಿ ದಾಳಿ ಹೆಚ್ಚಿರುವ ಕಡೆಗಳಲ್ಲಿ ಬೋನುಗಳನ್ನು ಇಟ್ಟು ಹುಲಿಯನ್ನು ಸೆರೆ ಹಿಡಿಯುವ ಕಾರ್ಯವು ನಡೆಯುತ್ತಿದೆ.

ವನ್ಯಜೀವಿಗಳ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಹಲವು ಸಮಗ್ರ ಹಾಗೂ ತಂತ್ರಜ್ಞಾನಾಧಾರಿತ ಕ್ರಮಗಳನ್ನು ಕೈಗೊಂಡಿದೆ. ಈ ಭಾಗವಾಗಿ ಮ್ಯಾಕ್ (MAC) ತಂಡಗಳನ್ನು ರಚಿಸಲಾಗಿದ್ದು, ಹುಲಿ ಸೇರಿದಂತೆ ಅಪಾಯಕಾರಿ ವನ್ಯಜೀವಿಗಳ ಇರುವಿಕೆ ಕಂಡುಬಂದ ತಕ್ಷಣ ಸ್ಥಳೀಯರಿಗೆ ಅಗತ್ಯ ಮುನ್ನೆಚ್ಚರಿಕೆ ಮಾಹಿತಿ ನೀಡಲಾಗುತ್ತಿದೆ.

ಅರಣ್ಯ ಅಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳು ಹೊರಬರುವ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಎಐ ಆಧರಿತ ಕ್ಯಾಮೆರಾಗಳನ್ನು ಅಳವಡಿಸಿ ಅವುಗಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ವನ್ಯಜೀವಿಗಳ ಚಲನವಲನಗಳ ಬಗ್ಗೆ ಮುಂಚಿತ ಮಾಹಿತಿ ಲಭ್ಯವಾಗುತ್ತಿದ್ದು, ದಾಳಿಗಳನ್ನು ತಡೆಯಲು ಸಹಕಾರಿಯಾಗುತ್ತಿದೆ. ಇದಲ್ಲದೆ ಆರ್‌ಆರ್‌ಟಿ, ಎಡಿಸಿ ಹಾಗೂ ಎಸಿಸಿ ತಂಡಗಳನ್ನು ರಚಿಸಿ ಅವರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಈ ತಂಡಗಳು ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿವೆ.

-ಜಗನ್ನಾಥ್ ,ಡಿಎಫ್ ಒ ವಿರಾಜಪೇಟೆ

ಕಳೆದ ಎರಡು ಮೂರು ದಶಕಗಳಿಂದ ಕಾಡಾನೆ ದಾಳಿಯಿಂದ ನಿರಂತರವಾಗಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಜತೆಗೆ ಇತ್ತೀಚಿನ ಹಲವು ವರ್ಷಗಳಲ್ಲಿ ಹುಲಿ ದಾಳಿಯಿಂದ ಹಲವಾರು ಹಸುಗಳನ್ನು ರೈತರು ಕಳೆದುಕೊಂಡಿದ್ದಾರೆ ಮಾತ್ರವಲ್ಲದೆ ಕಾರ್ಮಿಕರ ಮೇಲೆಯೂ ದಾಳಿ ನಡೆಯುತ್ತಿದ್ದು, ಕಾರ್ಮಿಕರು ತೋಟಗಳಲ್ಲಿ ಕೆಲಸ ನಿರ್ವಹಿಸಲು ಭಯಪಡುತ್ತಿದ್ದಾರೆ.

ಜೀವ ಭಯದಲ್ಲಿ ಕೆಲಸ ಮಾಡುವ ಆತಂಕವನ್ನು ಸೃಷ್ಟಿ ಮಾಡಿದೆ ಸರಕಾರಗಳು ತಕ್ಷಣವೇ ಈ ಹುಲಿ ದಾಳಿಯ ಗಂಭೀರತೆಯನ್ನು ಅರಿತು ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕಿದೆ.

-ಎಚ್.ಬಿ. ರಮೇಶ್, ಜಿಲ್ಲಾ ಕಾರ್ಯದರ್ಶಿ. ಸಿಪಿಐಎಂ ಕೊಡಗು

ಹುಲಿ ಸಂರಕ್ಷಣೆ ಭಾಗವಾಗಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ರಾಷ್ಟ್ರೀಯ ಹುಲಿ ಗಣತಿ ಕಾರ್ಯ ನಡೆಯುತ್ತಿದೆ. ಕ್ಯಾಮೆರಾಗಳಲ್ಲಿ ಸೆರೆಯಾದ ಹುಲಿಗಳ ಮಾಹಿತಿಯನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಮಾಹಿತಿಯನ್ನು ವಿಶ್ಲೇಷಣೆ ಮಾಡಿ, ಹೊಸ ಹುಲಿಗಳು ಪತ್ತೆಯಾದರೆ ಅವುಗಳಿಗೆ ಹೊಸ ಗುರುತಿನ ಸಂಖ್ಯೆ (ಐಡಿ) ನೀಡಲಾಗುತ್ತದೆ. ಪ್ರಸ್ತುತ ನಾಗರಹೊಳೆ ಅರಣ್ಯದಲ್ಲಿ 149 ಹುಲಿಗಳಿವೆ.

-ಸೀಮಾ ಪಿ.ಎ. (ಐಎಫ್‌ಎಸ್) ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹಾಗೂ ನಿರ್ದೇಶಕರು, ನಾಗರಹೊಳೆ