ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ರಾಜ್ಯ ಸರ್ಕಾರವು ಕಾಫಿನಾಡು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಮಂದಿಗೆ ಹಕ್ಕುಪತ್ರ ವಿತರಣೆಗೆ ಸಿದ್ದತೆ ಮಾಡಿಕೊಂಡಿದೆ.
ಇದೇ ಫೆ.14ರಂದು ಹಾವೇರಿಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ.ಹಲವು ವರ್ಷದಿಂದ ದಾಖಲೆ ರಹಿತ ವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದ ವಸತಿ ಗುಚ್ಚಗಳಿಗೆ ರಾಜ್ಯ ಸರ್ಕಾರವು ಇದೀಗ ಕಂದಾಯ ಗ್ರಾಮದ ಮಾನ್ಯತೆ ನೀಡಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಕೊಳ್ಳುವುದಕ್ಕೆ ಮುಂದಾಗಿದೆ. ಇಷ್ಟು ದಿನ ಕಂದಾಯ ಗ್ರಾಮವಲ್ಲ ಎಂಬ ಕಾರಣಕ್ಕೆ ಅಲ್ಲಿನ ನಿವಾಸಿಗಳು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಈ ಸಮಸ್ಯೆ ಪರಿಹಾರ ನೀಡುವ ನಿಟ್ಟಿನಲ್ಲಿ ಹೊಸ ಕಂದಾಯ ಗ್ರಾಮ ಹಾಗೂ ಕಂದಾಯ ಉಪಗ್ರಾಮ ಅಧಿಸೂಚನೆ ಹೊರಡಿಸಿ ಇದೀಗ ಬಡವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ.
203 ಗ್ರಾಮ, ಉಪಗ್ರಾಮ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ ಒಟ್ಟು ಮೂರು ಹಂತದಲ್ಲಿ ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ 364 ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಪೈಕಿ ಈಗಾಗಲೇ 211 ಪ್ರಾಥಮಿಕ ಅಧಿಸೂಚನೆ, 203ಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಗ್ರಾಮಗಳಲ್ಲಿರುವ ದಾಖಲೆ ರಹಿತ ವಸತಿ ಪ್ರದೇಶದ ನಿವಾಸಿಗಳಿಗೆ ಇದೀಗ ಹಕ್ಕುಪತ್ರ ನೀಡಲಾಗುತ್ತಿದೆ.
4376 ಹಕ್ಕುಪತ್ರ ಸಿದ್ಧ:ಜಿಲ್ಲೆಯಲ್ಲಿ ಒಟ್ಟು 9 ತಾಲೂಕುಗಳಿದ್ದು, ಈ ಪೈಕಿ ಹೊಸದಾಗಿ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳಲ್ಲಿ ಇರುವ ವಸತಿಗಳಿಗೆ ಹಕ್ಕುಪತ್ರ ನೀಡುವುದಕ್ಕೆ ಈವರೆಗೆ 7,936 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಈಗಾಗಲೇ 4376 ಮಂದಿಗೆ ಹಕ್ಕುಪತ್ರ ನೀಡುವುದಕ್ಕೆ ಅರ್ಹ ಎಂದು ಪರಿಶೀಲಿಸಿ ತಹಸೀಲ್ದಾರ್ ಅಂತಿಮಗೊಳಿಸಿದ್ದಾರೆ. ಇನ್ನೂ 360 ಗ್ರಾಮ ಆಡಳಿತಾಧಿಕಾರಿ ಬಳಿ ಬಾಕಿ ಇವೆ, 277 ಆಯಾ ತಾಲೂಕು ತಹಸೀಲ್ದಾರ್ ಬಳಿ ಅನುಮೋದನೆ ಬಾಕಿ ಇದೆ. 107 ಆಯಾ ತಹಸೀಲ್ದಾರ್ ಅವರ ಕೇಸ್ ವರ್ಕರ್ ಬಳಿ ಬಾಕಿ ಇವೆ.1795 ಆಸ್ತಿಗಳು ಕಾವೇರಿ ತಂತ್ರಾಂಶದಲ್ಲಿ ನೋಂದಣಿ:
ಈಗಾಗಲೇ ಹಕ್ಕುಪತ್ರ ವಿತರಣೆಗೆ ತಹಸೀಲ್ದಾರ್ ಅನುಮೋದನೆ ನೀಡಿರುವ 4376 ಹಕ್ಕುಪತ್ರದ ಫಲಾನುಭವಿ ಪೈಕಿ 1795 ಮಂದಿ ಫಲಾನುಭವಿಗಳ ಹೆಸರಿಗೆ ಕಾವೇರಿತಂತ್ರಾಂಶದಲ್ಲಿ ನೋಂದಣೆ ಮಾಡಲಾಗಿದೆ. ನಿರಂತರವಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ನೋಂದಣಿ ಶುಲ್ಕ ಸಹ ಉಚಿತವಾಗಿದೆ.ಇನ್ನೂ 2532 ಆಸ್ತಿಗಳ ದಾಖಲೆಗಳನ್ನು ಇ ಸ್ವತ್ತಿನಲ್ಲಿ ದಾಖಲಿಸಲಾಗಿದೆ. ಇನ್ನೂ 2430 ಆಸ್ತಿಗಳಿಗೆ ಸಂಬಂಧಿಸಿದಂತೆ ಡೀಡ್‌ಗೆ ಆಯಾ ತಹಸೀಲ್ದಾರ್ ಸಹಿ ಮಾಡಿದ್ದಾರೆ.
ಹೊಸ ಕಂದಾಯ ಗ್ರಾಮಕ್ಕೆ ಮಾರ್ಗಸೂಚಿಗಳೇನು?:ಹೊಸದಾಗಿ ಕಂದಾಯ ಗ್ರಾಮ ರಚನೆ ಮಾಡಬೇಕಾದರೆ ಕನಿಷ್ಠ 250 ಮಂದಿ ವಾಸಿಸುತ್ತಿರಬೇಕು. ಕನಿಷ್ಟ 50 ಮನೆ ಇರಬೇಕು. ಆ ಗ್ರಾಮಕ್ಕೆ 100 ಎಕರೆ ಪ್ರದೇಶ ಇರಬೇಕು. ಒಂದು ಗ್ರಾಮಠಾಣಾದಿಂದ ಹೊಸ ಗ್ರಾಮಠಾಣಾಗೆ ಕನಿಷ್ಠ 1 ಕಿ.ಮೀ ದೂರದ ಹಂತರ ಇರಬೇಕಿದೆ, ಹೊಸ ಗ್ರಾಮದ ನಿವಾಸಿಗಳ ಮನೆಗಳು ಸಹ ಗುಚ್ಚದ ರೀತಿಯಲ್ಲಿ ಇರಬೇಕು. ಅಲ್ಲೊಂದು ಇಲ್ಲೊಂದು ಮನೆ ಇದ್ದರೆ ಅನ್ವಯಿಸುವುದಿಲ್ಲ. ಒಂದು ವೇಳೆ ಖಾಸಗಿ ಸ್ವತ್ತಿನಲ್ಲಿ ಇದ್ದರೆ ಆಸ್ತಿ ಮಾಲೀಕನಿಗೆ ಪರಿಹಾರ ನೀಡಬೇಕಾಗಲಿದೆ.
ಕಳೆದ ಎರಡೂವರೆ ವರ್ಷದಿಂದ ಹೊಸ ಕಂದಾಯ ಗ್ರಾಮ ರಚನೆ ಮಾಡಿ ಅಲ್ಲಿನ ದಾಖಲೆ ಸಹಿತ ವಸತಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದಕ್ಕೆ ಬೇಕಾದ ಕಾರ್ಯ ನಡೆಸಲಾಗುತ್ತಿದ್ದು, ಇದೀಗ ಜಿಲ್ಲೆಯ 9 ತಾಲೂಕಿನ 5 ಸಾವಿರ ಮಂದಿಗೆ ಹಕ್ಕುಪತ್ರ ನೀಡಲಾಗುತ್ತಿದೆ, ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ನೀಡಲಾಗುವುದು.ನಾರಾಯಣ ಕನಕರಡ್ಡಿ ಅಪರ ಜಿಲ್ಲಾಧಿಕಾರಿ
ತಾಲೂಕುವಾರು ಹಕ್ಕುಪತ್ರ, ಕಂದಾಯ ಗ್ರಾಮದ ವಿವರತಾಲೂಕು ಅಂತಿಮ ಹೊಸ ಕಂದಾಯ ಗ್ರಾಮ (ಫೆ.10ಕ್ಕೆ)
ಶೃಂಗೇರಿ 9 1ಕೊಪ್ಪ 26 2
ತರೀಕೆರೆ 1055 35ಕಡೂರು 1078 81
ಚಿಕ್ಕಮಗಳೂರು 854 38ಮೂಡಿಗೆರೆ 66 4
ಅಜ್ಜಂಪುರ 1290 42ಒಟ್ಟು 4376 203