ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ರಚ್ಚೆ ಹಿಡಿದು ಸುರಿಯುತ್ತಿದೆ. ಇದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಮಳೆಯ ರಭಸಕ್ಕೆ ಶಿವಮೊಗ್ಗ ನಗರದಲ್ಲಿ ಮನೆ ನೆಲಕ್ಕುರುಳಿದರೆ ಇತ್ತ ಹೊಸನಗರದಲ್ಲಿ ಗಾಳಿಮಳೆಗೆ ಬರೋಬ್ಬರಿ 170ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ.ಶಿವಮೊಗ್ಗ ನಗರದಲ್ಲಿ ಸುರಿದ ಮಳೆಗೆ ನ್ಯೂಮಂಡ್ಲಿಯಲ್ಲಿ ಮನೆಯೊಂದು ಕುಸಿದಿದೆ. ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಆಧಿ ಕಾರಿಗಳು ಬೇಟಿ ನೀಡಿ ಸಂತ್ರಸ್ತ ಕುಟುಂಬದವರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಜನರು ವಿದ್ಯುತ್ ಇಲ್ಲದೇ ಕತ್ತಲಿನಲ್ಲಿ ಜೀವನ ಕಳೆಯುವಂತಾಗಿದೆ. ಶರಾವತಿ ಹಿನ್ನೀರಿನ ತುಮರಿ,ಬ್ಯಾಕೋಡು, ಹೊಸಕೊಪ್ಪ, ಬರುವೆ, ಕೋಗಾರು, ಮರಾಠಿ, ಗುಡಿಹಿತ್ತಲು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಹೊರಗೆ ಬಾರದಂತಾಗಿದೆ.ದ್ವೀಪದ ನಾಲ್ಕು ಗ್ರಾಮದಲ್ಲಿನ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ಹಳ್ಳಿಗಳ ರಸ್ತೆ ಮಣ್ಣು ಕೊಚ್ಚಿಕೊಂಡು ಹೋಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.ಮಳೆ-ಗಾಳಿಗೆ ದ್ವೀಪದ ಕರೂರು, ಭಾರಂಗಿ ಅವಳಿ ಹೋಬಳಿಗಳಲ್ಲಿ ವಿದ್ಯುತ್ ಸಂಪರ್ಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳು ಮತ್ತು ತಂತಿಗಳ ಮರುಜೋಡಣೆಗಾಗಿ ಕಸರತ್ತು ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಹುತೇಕ ಟವರ್ ವಿದ್ಯುತ್ ಇಲ್ಲದೆ ಸ್ಥಗಿತಗೊಂಡಿವೆ.
ಹೊಸನಗರ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು,ಚರಂಡಿ ಕಟ್ಟಿದ್ದರಿಂದ ರಸ್ತೆಗಳು ಹಳ್ಳದಂತಾಗಿವೆ.ಗಾಳಿಯ ರಭಸಕ್ಕೆ ತಾಲೂಕಿನಾದ್ಯಂತ 170 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ.
ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಮೈದುಂಬಿ ಹರಿಯುತ್ತಿರುವ ಕುಮದ್ವತಿ ನದಿ:ಭಾರಿ ಗಾಳಿ ಮಳೆಯ ಪರಿಣಾಮ ರಿಪ್ಪನ್‍ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕಹಾನಿ ಸಂಭವಿಸಿದೆ.ಬಿರುಗಾಳಿಯ ಆಬ್ಬರಕ್ಕೆ ಹತ್ತಾರು ಮರಗಳು ನೆಲಕ್ಕೂರುಳಿದ್ದು 50 ಅಧಿಕ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ರಿಪ್ಪನ್‍ಪೇಟೆ ಹೆದ್ದಾರಿಪುರ, ಚಿಕ್ಕಜೇನಿ, ಕೋಡೂರು, ಹುಂಚ, ಬೇಳ್ಳೂರು, ಅರಸಾಳು, ಬೆನವಳ್ಳಿ ಮಸರೂರು, ಬೆಳಂದೂರು, ಹಾಲುಗುಡ್ಡೆ, ಬಾಳೂರು, ಹರತಾಳು, ಕುಕ್ಕಳಲೇ, ಕೆರೆಹಳ್ಳಿ, ಬರುವೆ, ಗವಟೂರು, ಮಳವಳ್ಳಿ, ಮೂಗುಡ್ತಿ, ಕಣಬಂದೂರು, ಕೊಳವಳ್ಳಿ, ಕೋಟೆತಾರಿಗಾ, ಜಂಬಳ್ಳಿ, ಮಳಲಿಕೊಪ್ಪ, ಹುಗುಡಿ, ಅಮೃತ, ಶಿವಪುರ, ಹುಳಗದ್ದೆ, ಸಂಪಳ್ಳಿ, ಕಲ್ಲುಕೊಪ್ಪ, ಅನೆಗದ್ದೆ, ಹುಂಚದಕಟ್ಟೆ, ಧೋಬೈಲು, ಬುಕ್ಕಿವರೆ, ಹುತ್ತಳ್ಳಿ, ತಳಲೆ, ಕಗ್ಗಚ್ಚಿ, ಕಲ್ಲೂರು, ಮುನಿಯೂರು, ಬಿದರಹಳ್ಳಿ, ನಾಗರಹಳ್ಳಿ, ಹಾರಂಬಳ್ಳಿ, ಬಸವಾಪುರ, ವಡಾಹೊಸಳ್ಳಿ, ಮುಡುಬ, ತಮ್ಮಡಿಕೊಪ್ಪ ಇನ್ನಿತರ ಕಡೆಗಳಲ್ಲಿ ಗಾಳಿ-ಮಳೆಯ ಆರ್ಭಟಕ್ಕೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ.ಮೈದುಂಬಿದ ಕುಮದ್ವತಿ ನದಿ: ಸಮೀಪದ ಕಲ್ಲೂರು ಗ್ರಾಮದ ಬಳಿ ಹರಿಯುವ ಕುಮದ್ವತಿ ನದಿ ನೀರು ಹರಿಯಲಾರಂಭಿಸಿದ್ದು ,ಮೀನು ಹಿಡಿಯಲು ಹಲವರು ನದಿಯಂಚಿನಲ್ಲಿ ಗಾಳ ಹಾಕುತ್ತಿರುವುದು ಕಂಡ ಬಂದಿತು.
ಜಲಾಶಯಗಳ ಒಳಹರಿವು ಏರಿಕೆಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ, ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಮಂಗಳವಾರ 29.043 ಕ್ಯುಕೆಸ್ ನೀರು ಹರಿದು ಬಂದಿದ್ದು, 1754.40 (ಗರಿಷ್ಠ ಮಟ್ಟ: 1819) ಅಡಿಗೆ ಏರಿಕೆ ಕಂಡಿದೆ.
ಭದ್ರಾ ಜಲಾಶಯಕ್ಕೆ 8117 ಕ್ಯೂಸೆಕ್ ನೀರು ಹರಿದು ಬಂದಿದ್ದು, ಸೋಮವಾರ 4135 ಕ್ಯುಸೆಕ್ ನೀರು ಮಾತ್ರ ಹರಿದು ಬಂದಿತ್ತು. ಜಲಾಶಯದ ನೀರಿನ ಮಟ್ಟ 140.6 (ಗರಿಷ್ಠ ಮಟ್ಟ : 186) ಅಡಿಗೆ ಏರಿಕೆ ಕಂಡಿದೆ.ಜಿಲ್ಲೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಪಶ್ಚಿಮಘ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 180 ಮಿ.ಮೀ., ಯಡೂರು 180 ಮಿ.ಮೀ., ಹುಲಿಕಲ್ 145 ಮಿ.ಮೀ., ಮಾಸ್ತಿಕಟ್ಟೆ 152 ಮಿ.ಮೀ., ಚಕ್ರಾ 123 ಮಿ.ಮೀ., ಸಾವೇಹಕ್ಲುವಿನಲ್ಲಿ 142 ಮಿ.ಮೀ. ಮಳೆಯಾಗಿದೆ.
ತುಂಗಾ ಹೊರಹರಿವು ಹೆಚ್ಚಳ:ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ತುಂಗಾ ಜಲಾಶಯದ ಒಳ ಹರಿವು ಭಾರಿ ಏರಿಕೆಯಾಗಿದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ 22 ಕ್ರಸ್ಟ್ ಗೇಟ್‌ಗಳ ಮೂಲಕ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
ತುಂಗಾ ಜಲಾಶಯಕ್ಕೆ 46,385 ಕ್ಯೂಸೆಕ್ ಒಳ ಹರಿವು ಇದೆ. 46,385 ಕ್ಯೂಸೆಕ್ ನೀರು ಹೊರ ಹರಿವು ಇದೆ. ಈ ಪೈಕಿ 43,305 ಕ್ಯೂಸೆಕ್ ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ತುಂಗಾ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿದೆ.ಮೂರು ತಾಲೂಕುಗಳಲ್ಲಿ ರಜೆ ಘೋಷಣೆ
ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮಂಗಳವಾರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ರಜೆ ಘೋಷಣೆ ಮಾಡಲಾಗಿತ್ತು. ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ರಜೆ ಘೋಷಣೆಹೊಸನಗರ ತಹಸೀಲ್ದಾರ್ ಭರತ್ ರಾಜ್, ತೀರ್ಥಹಳ್ಳಿ ತಹಸಿಲ್ದಾರ್ ರಂಜಿತ್, ಸಾಗರ ತಹಸಿಲ್ದಾರ್ ಡಾ.ಪ್ರತಿಭಾರಿಂದ ರಜಾ ಘೋಷಣೆ ಮಾಡಿ ಆದೇಶ ಹೊರಡಿಸಿದ್ದರು.
ಅಂಗನವಾಡಿ ಪ್ರಾಥಮಿಕ ಶಾಲೆ ಪ್ರೌಢಶಾಲೆ ಪಿಯು ಕಾಲೇಜ್ ಸೇರಿದಂತೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬುಧವಾರವೂ ಜೋರು ಮಳೆಯ ಮುನ್ಸೂಚನೆ ಇದ್ದು, ಸಾಗರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ.ಮನೆ ಕುಸಿದ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ
ಶಿವಮೊಗ್ಗ: ಮಳೆಯಿಂದ ಇಲ್ಲಿನ ನ್ಯೂ ಮಂಡ್ಲಿಯಲ್ಲಿ ಮನೆ ಕುಸಿದ ಸ್ಥಳಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕ್ಷೇತ್ರದ ಸಾರ್ವಜನಿಕರ ದೈನಂದಿನ ಕಷ್ಟ-ಸುಖಗಳಿಗೆ ತಕ್ಷಣ ಸ್ಪಂದಿಸಿ, ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ಆಸರೆಯಾಗುವುದು ನಮ್ಮ ಜವಾಬ್ದಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಮನೆ ಕುಸಿದಿರುವ ಜಾಗಕ್ಕೆ ಶಾಸಕರು ಕಂದಾಯ ಇಲಾಖೆಯ ಅಽಕಾರಿಗಳೊಂದಿಗೆ ಮಂಗಳವಾರ ಖುದ್ದಾಗಿ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದರು.
ಮನೆ ಹಾನಿಗೊಳಗಾಗಿ ಆಶ್ರಯ ಕಳೆದುಕೊಂಡಿರುವ ಕುಟುಂಬದ ಅಹವಾಲನ್ನು ಆಪ್ತವಾಗಿ ಆಲಿಸಿದ ಶಾಸಕರು, ಪರಿಸ್ಥಿತಿಯ ಗಾಂಭೀರ್ಯತೆಯನ್ನು ಮನಗಂಡು ಧೈರ್ಯ ತುಂಬಿದರು. ನಂತರ, ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ತಕ್ಷಣವೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ್, ಪ್ರಮುಖರಾದ ವಿಜಯೇಂದ್ರ, ರಾಘವೇಂದ್ರ, ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.