ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರವಾಸೋದ್ಯಮ ಇಲಾಖೆ ಕಲಬುರಗಿ ವಿಭಾಗದ ಉಪ ನಿರ್ದೇಶಕ ಎಸ್.ತಿಪ್ಪೇಸ್ವಾಮಿ, ಗುತ್ತಿಗೆದಾರರೋರ್ವರಿಂದ 5 ಲಕ್ಷ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಬೀಸಿದ ಬಲೆಗೆ ಸಿಲುಕಿದ್ದಾರೆ.ಹಿರಿಯೂರು ಹೊರ ವಲಯದ ಅಗ್ನಿಶಾಮಕ ಕಚೇರಿ ಸಮೀಪ ಲೋಕಾಯುಕ್ತ ಅಧಿಕಾರಿಗಳು ಕಾದಿದ್ದು ಭ್ರಷ್ಟನ ಬಲೆಗೆ ಕೆಡವಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ಎನ್.ಲಕ್ಷ್ಮೀಪತಿ ಎನ್ನುವ ಗುತ್ತಿಗೆದಾರ ವಿಜಯನಗರ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಸಾಕ್ಷ್ಯ ಚಿತ್ರ, ಕ್ಯೂಆರ್ ಕೋಡ್ ಹಾಗೂ ಡೈರೆಕ್ಷನ್ ಬೋರ್ಡ್‌ಗಳ ಅಳವಡಿಸುವ ಕಾಮಗಾರಿಯ 18.37 ಲಕ್ಷ ರು. ಗುತ್ತಿಗೆ ಪಡೆದು ಪೂರ್ಣ ಪ್ರಮಾಣದಲ್ಲಿ ಕೆಲಸ ಮುಗಿಸಿ ಈ ಸಂಬಂಧ ಹಣ ಕೂಡ ಪಡೆದಿದ್ದರು. 2024-25ನೇ ಸಾಲಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ (ಡಿಟಿಡಿಸಿ) ಕಾಮಗಾರಿ ನಿರ್ವಹಣೆ ಮಾಡಲಾಗಿತ್ತು.ಕಾಮಗಾರಿ ಪೂರ್ಣಗೊಂಡ ನಂತರ ಖ್ಯಾತೆ ತೆಗೆದ ತಿಪ್ಪೇಸ್ವಾಮಿ, ಸರಿಯಾಗಿ ನಿರ್ವಹಣೆ ಮಾಡಿಲ್ಲ. ನಿಯಮಗಳ ಪಾಲಿಸಿಲ್ಲವೆಂದು ಹೇಳಿ 5 ಲಕ್ಷ ರು. ಲಂಚದ ಬೇಡಿಕೆ ಇಟ್ಟಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಲಂಚದ ಹಣಕ್ಕಾಗಿ ಗುತ್ತಿಗೆದಾರ ಲಕ್ಷ್ಮೀಪತಿ ಹಾಗೂ ಅವರ ಲಕ್ಷ್ಮಿನಾರಾಯಣ ಅವರಿಗೆ ಪೀಡಿಸುತ್ತಿದ್ದ.
ಗುತ್ತಿಗೆದಾರ ಲಕ್ಷ್ಮೀಪತಿ ಲಂಚದ ಬೇಡಿಕೆ ಸಂಗತಿಯ ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದು ಈ ಸಂಬಂಧ ಮೊಬೈಲ್‌ನಲ್ಲಿ ರೆಕಾರ್ಡ ಮಾಡಿದ ಸಂಭಾಷಣೆಗಳ ಒಪ್ಪಿಸಿದ್ದಾರೆ. ಲಂಚ ನೀಡಲು ಇಷ್ಟವರಿದ ಲಕ್ಷ್ಮಿಪತಿ ಲೋಕಾಯುಕ್ತ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಲೋಕಾಯುಕ್ತರ ಸೂಚನೆಯಂತೆ ಲಂಚದ ಹಣ ನೀಡಲು ಮುಂದಾದ ಗುತ್ತಿಗೆದಾರ ಲಕ್ಷ್ಮೀಪತಿ ಹಿರಿಯೂರಿಗೆ ಬರಲು ತಿಪ್ಪೇಸ್ವಾಮಿಗೆ ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನಹಿರಿಯೂರಿನ ಅಗ್ನಿ ಶಾಮಕ ದಳ ಕಚೇರಿ ಹತ್ತಿರ 5 ಲಕ್ಷ ರು. ಲಂಚ ನೀಡುವಾಗ ಲೋಕಾಯುಕ್ತ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾರೆ. ಕರ್ನಾಟಕ ಲೋಕಾಯುಕ್ತ, ಬಳ್ಳಾರಿ ಕಚೇರಿಯ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ, ಉಪಾಧೀಕ್ಷ ಸಚಿನ್ ಎಸ್.ಚಲವಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
