ರೆಸಾರ್ಟ್, ಹೋಂ-ಸ್ಟೇ ಉದ್ದಿಮೆಗಳಿಗೆ ಆತಂಕ । ಪ್ರವಾಸಿಗರಿಗೆ ಅಗತ್ಯ ಊಟೋಪಚಾರ ನೀಡುವುದಕ್ಕೆ ಕಷ್ಟ


ಗುರುಶಾಂತ ಜಡೆಹಿರೇಮಠ

ಕನ್ನಡಪ್ರಭ ವಾರ್ತೆ ದಾಂಡೇಲಿ

ವಾಣಿಜ್ಯ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ ಪ್ರವಾಸೋದ್ಯಮ ಪ್ರದೇಶವಾದ ದಾಂಡೇಲಿ ಜೊಯಿಡಾ ಭಾಗದಲ್ಲಿರುವ ರೆಸಾರ್ಟ್ಸ್ ಮತ್ತು ಹೋಂ-ಸ್ಟೇ ಉದ್ದಿಗಳಿಗೆ ಈಗ ಬಿಸಿ ತಟ್ಟಿದ್ದು, ಪ್ರವಾಸಿಗರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಮಾಲೀಕರಿದ್ದಾರೆ. ದಾಂಡೇಲಿ-ಜೋಯಿಡಾ ಭಾಗದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಹೋಂ-ಸ್ಟೇಗಳು ಮತ್ತು ರೆಸಾರ್ಟ್ಸ್ ಇವೆ. ಪ್ರತಿ ಹೋಂ-ಸ್ಟೇಗಳು ಮತ್ತು ರೆಸಾರ್ಟ್ಸ್‌ಗಳಲ್ಲಿ ವಾಣಿಜ್ಯ ಅಡುಗೆ ಅನಿಲದ ಕೊರತೆಯಿಂದಾಗಿ ವಾಸ್ತವ್ಯ ಇರುವ ಪ್ರವಾಸಿಗರಿಗೆ ಅಗತ್ಯ ಊಟೋಪಚಾರ ನೀಡುವುದಕ್ಕೆ ಕಷ್ಟ ಉಂಟಾಗಿದೆ. ಆದರೆ ಮೆನು ಬದಲಾವಣೆ ಮಾಡಲು ಕಷ್ಟ. ಎರಡು ಪಲ್ಯ, ಚಪಾತಿ, ಅನ್ನ, ಸಾರು, ಪಾಯಸ, ಒಂದು ಹೊತ್ತು ಚಿಕನ್ ನೀಡಲೇಬೇಕು. ಆದರೆ ಅವುಗಳನ್ನು ಮಾಡಲು ಅಡುಗೆ ಇಂಧನದ ಕೊರತೆ ಕಾಡುತ್ತಿದೆ.ಮಾರ್ಚ್ ಮಧ್ಯ ಭಾಗದಿಂದ ಶಾಲಾ-ಕಾಲೇಜುಗಳ ರಜೆ ಮತ್ತು ಬಿಸಿಲಿನ ತಾಪವನ್ನು ತಪ್ಪಿಸಿಕೊಳ್ಳಲು ಸಹಜವಾಗಿ ದೂರದ ಬೆಂಗಳೂರು, ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಕಾಳಿ ನದಿಯ ಜಲಕ್ರೀಡೆ ಆಡಲು ದಾಂಡೇಲಿ-ಜೋಯಿಡಾಗಳ ಕಡೆಗೆ ಪ್ರವಾಸಿಗರು ಬರುತ್ತಾರೆ. ಆದರೆ ಬರುವ ಅತಿಥಿಗಳಿಗೆ ಅಗತ್ಯ ಊಟ ಉಪಚಾರ ಪೂರೈಸಲು ಅಡುಗೆ ಅನಿಲದ ಕೊರತೆಯಿಂದಾಗಿ ರೆಸಾರ್ಟ್ಸ್, ಹೋಂ-ಸ್ಟೇಗಳ ಮಾಲೀಕರು ತಮ್ಮ ಅತಿಥಿಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ರೆಸಾರ್ಟ್ಸ್, ಹೋಂ-ಸ್ಟೇಗಳಿಗೆ ಬರುತ್ತಾರೆ. ಮದ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ವಾಣಿಜ್ಯ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಅಡುಗೆ ಮಾಡಲು ಪರದಾಡುವ ಸ್ಥಿತಿ ಉಂಟಾಗಿದೆ. ರೆಸಾರ್ಟ್ಸ್, ಹೋಂ-ಸ್ಟೇಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ ಪ್ರವಾಸಿಗರು, ಗ್ರಾಹಕರು ತಮ್ಮ ಬುಕ್ಕಿಂಗ್‌ನ್ನು ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ. ರೆಸಾರ್ಟ್, ಹೋಂ-ಸ್ಟೇಗಳಿಗೆ ಬರುವ ಗ್ರಾಹಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟವನ್ನು ನೀಡುವ ಪ್ಯಾಕೇಜ್ ಒಳಗೊಂಡಿರುತ್ತದೆ. ರೆಸಾರ್ಟ್ಸ್, ಹೋಂ-ಸ್ಟೇಗಳಿಗೆ ವಾಣಿಜ್ಯ ಸಿಲಿಂಡರ್‌ ಸಿಗದ ಕಾರಣ ಊಟ ನೀಡುವುದೇ ಸಮಸ್ಯೆಯಾಗಿದೆ. ಇನ್ನು ಸೌದೆ ಒಲೆ ಉಪಯೋಗಿಸಿ ಅಡುಗೆ ಮಾಡಿ ಅತಿಥಿಗಳಿಗೆ ಪೂರೈಸುವುದು ಕಷ್ಟದ ಮಾತು. ಅದಕ್ಕಾಗಿ ಈಗಿರುವ ಅಡುಗೆ ಮನೆಯ ವ್ಯವಸ್ಥೆ ಬದಲಾಗಬೇಕು ಅಲ್ಲದೆ ಹೊಗೆ ಉಂಟಾಗಿ ಹೋಂ-ಸ್ಟೇ ರೆಸಾರ್ಟ್ಸ್‌ಗಳ ಪರಿಸರಕ್ಕೆ ತೊಂದರೆ ಉಂಟಾಗಲಿದೆ. ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಆದರೆ ವಾಣಿಜ್ಯ ಅಡುಗೆ ಅನಿಲ ಪೂರೈಕೆ ಸ್ಥಗಿತ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಮತ್ತು ರೈಲ್ವೆ ಇಲಾಖೆಗೆ ಮಾತ್ರ ಪೂರೈಸಲು ಕಂಪನಿಗಳು ತಿಳಿಸಿವೆ ಎನ್ನುತ್ತಾರೆ ಭಾರತ್ ಗ್ಯಾಸ್ ಏಜೆನ್ಸಿಯ ಮಾಲೀಕ ಮಧು ಅಂಕೋಲೆಕರ. ನಗರದ ಪ್ರಮುಖ ಹೋಟೆಲ್‌ಗಳಾದ ಕಾಮತ್, ಅಂಬಿಕಾ, ಕಾವ್ಯ ಕೃಷ್ಣಾ, ಶ್ವೇತ ಸೇರಿ ಬಿರಿಯಾನಿ ಹೋಟೆಲ್ ಹಾಗೂ ಬೀದಿ ಬೀದಿಗಳಲ್ಲಿ ಚಾಟ್ ಅಂಗಡಿಗಳಲ್ಲಿ ಒಂದೆರಡು ದಿನಗಳಿಗೆ ಸಿಲಿಂಡರ್ ಸರಿ ಹೋಗುವ ಸ್ಥಿತಿ ಇದ್ದು, ಆ ನಂತರ ವಾಣಿಜ್ಯ ಅನಿಲ ಸಿಗದೆ ಹೋದರೆ ಹೋಟೆಲ್ ಉದ್ಯಮ ಬಂದ ಮಾಡಬೇಕಾಗುತ್ತದೆ ಎನ್ನುತ್ತಾರೆ ಮಾಲೀಕರು.ಎಣ್ಣಿಯಲ್ಲಿ ಕರಿಯುವ, ಕಚೋರಿ, ವಡಾ, ಬಜ್ಜಿ ಮುಂತಾದ ತಿಂಡಿಗಳನ್ನು ಕೈಬಿಟ್ಟು ಮಂಡಕ್ಕಿ, ಗಿರಮಿಟ್‌ ತಿನಿಸುಗಳನ್ನು ಮಾತ್ರ ಮಾಡಿ ಮಾರಾಟ ಮಾಡಬೇಕಿದೆ ಎನ್ನುತ್ತಾರೆ ಸೋಮಾನಿ ವೃತ್ತದಲ್ಲಿನ ಚಾಟ್ ಮಸಾಲ ಹೋಟೆಲ್ ಅಂಗಡಿ ಮಾಲೀಕರು.