ಇತಿಹಾಸ ತಿಳಿಸುವ ಮಾವಳ್ಳಿ, ಚಿಕ್ಕಮಾವಳ್ಳಿಯ ಕುರುಹುಗಳು

| Published : Nov 13 2025, 01:15 AM IST

ಇತಿಹಾಸ ತಿಳಿಸುವ ಮಾವಳ್ಳಿ, ಚಿಕ್ಕಮಾವಳ್ಳಿಯ ಕುರುಹುಗಳು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮಾವಳ್ಳಿ, ಚಿಕ್ಕಮಾವಳ್ಳಿ ಪ್ರದೇಶದಲ್ಲಿರುವ ಇತಿಹಾಸದ ದಾಖಲೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಹಿನ್ನೆಲೆಯ ಕುರಿತು ಸಂಶೋಧನೆಗೆ ಹಲವರು ಮುಂದಾಗಿದ್ದಾರೆ.

ಪ್ರಾಚೀನ ಕಾಲದಲ್ಲಿ ಯಶಪುರ, ಯಶಸ್ವೀಪುರ, ಈಗ ಯಲ್ಲಾಪುರಶಂಕರ ಭಟ್ಟ ತಾರೀಮಕ್ಕಿ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಿನ ಮಾವಳ್ಳಿ, ಚಿಕ್ಕಮಾವಳ್ಳಿ ಪ್ರದೇಶದಲ್ಲಿರುವ ಇತಿಹಾಸದ ದಾಖಲೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಹಿನ್ನೆಲೆಯ ಕುರಿತು ಸಂಶೋಧನೆಗೆ ಹಲವರು ಮುಂದಾಗಿದ್ದಾರೆ. ಇದರಿಂದ ಕದಂಬರ ಕಾಲಕ್ಕಿಂತಲೂ ಹಿಂದಿನ ಹಲವಾರು ಐತಿಹ್ಯಗಳ ಕುರುಹುಗಳು ಜಿಲ್ಲೆಯ ಮಾಹಿತಿಯನ್ನು ಆಧರಿಸಿ ಸಂಶೋಧನೆ ನಡೆಸಿದಾಗ ಅನೇಕ ವಿಷಯಗಳು ಬೆಳಕಿಗೆ ಬಂದಿವೆ. ಆ ದೃಷ್ಟಿಯಿಂದ ಪ್ರಾಚೀನ ಕಾಲದಲ್ಲಿ ಯಶಪುರ, ಯಶಸ್ವೀಪುರ, ಈಗ ಯಲ್ಲಾಪುರ ಎಂಬುದನ್ನು ನಾವು ಗಮನಿಸಬಹುದು. ಇದು ಆ ಕಾಲದಲ್ಲಿ ರಾಜಧಾನಿಯಾಗಿತ್ತು. ಜೈನ, ವೀರಶೈವ, ಮರಾಠ ಪರಂಪರೆಗಳ ನೇತೃತ್ವದಲ್ಲಿ ಇತ್ತೆಂಬುದು ಕೂಡ ಕೆಲವು ತಾಳೆಪತ್ರದ ದಾಖಲೆಗಳಿಂದ ತಿಳಿಯಬಹುದಾಗಿದೆ. ನಂತರ ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶದ ಅನೇಕ ದೇವಾಲಯಗಳು ನಾಶಗೊಂಡಿವೆ ಎಂಬ ಜಿಜ್ಞಾಸೆ ಇದೆ.

ಕೆಲವು ತಾಳೆ ಓಲೆಯಲ್ಲಿ ಉಲ್ಲೇಖಿಸಲ್ಪಟ್ಟಂತೆ ಅಗಸ್ತ್ಯ ಮುನಿಗಳು, ಕೌಟಿಲ್ಯ ಮುನಿಗಳು, ವಾಲಿಖಿಲ್ಯ ಮುನಿಗಳು ಅಘನಾಶಿನಿ ಪ್ರದೇಶದಿಂದ ಹಿಡಿದು ಕರಾವಳಿ ಸೇರಿ ಈ ಸಹ್ಯಾದ್ರಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ನಿಂತು ತಪಸ್ಸನ್ನು ಗೈದಿರುವುದು ವೇದ್ಯವಾಗಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸ್ಪಟ್ಟಂತೆ ವಿಷ್ಣುವಿನ ನಾಭಿಯಿಂದ ಬ್ರಹ್ಮನ ಜನನವಾಗಿದ್ದು, ಆ ಕಮಲದ ನೀರು ಬಿದ್ದು ಅಘನಾಶಿನಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಈ ಜಾಗ ಅಗಸ್ತ್ಯ ಮುನಿಗಳ ಜನ್ಮಸ್ಥಳ. ಈಗ ಈ ಪ್ರದೇಶಕ್ಕೆ ಹೊನ್ನಾವರ ಎಂಬ ನಾಮಧೇಯವಿದೆ. ಇದು ಪದ್ಮಪುರಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ. ಅಲ್ಲದೇ, ಸ್ಕಂದಪುರಾಣ, ಸಹ್ಯಾದ್ರಿ ಖಂಡದಲ್ಲಿ ಮಹಾಭಾರತದ ವನಪರ್ವದಲ್ಲಿಯೂ ಈ ಎಲ್ಲ ಋಷಿಮುನಿಗಳ ಉಲ್ಲೇಖವಿದೆ. ನೀರಿನಿಂದ ಜನ್ಮ ಪ್ರಾಪ್ತಿಯಾದ ಅಗಸ್ತ್ಯರು ದೇವಿಯ ಕುರಿತು ತಪಸ್ಸು ಮಾಡಿ, ಅಗ್ನಿಯಿಂದ ಭುವನೇಶ್ವರಿ ದೇವಿಯನ್ನು ಪಡೆಯುತ್ತಾರೆ. ಅದಿಂದು ಸಿದ್ದಾಪುರದ ಭುವನಗಿರಿಯಲ್ಲಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸಿದರು ಎಂಬ ಇತಿಹಾಸ ಲಭ್ಯವಿದೆ.

ಕಾಲಕ್ರಮೇಣ ಅಗಸ್ತ್ಯರು ತಮ್ಮ ಶಿಷ್ಯರಿಗೆ ದೇವಿಯ ಆರಾಧನೆಯ ಕಾರ್ಯ ನಿರ್ವಹಿಸಲು ಸೂಚಿಸಿ, ಯಲ್ಲಾಪುರದ ಮಾವಳ್ಳಿಗೆ ಬಂದು ತಪಸ್ಸು ಮಾಡಿ ಅಲ್ಲೊಂದು ಶ್ರೀದೇವಿಯ ಗುಡಿಯನ್ನು ಸ್ಥಾಪಿಸಿದರು ಎನ್ನುವುದು ಕೂಡ ಮಾವಳ್ಳಿಯ ಕಾಡಿನಲ್ಲಿ ದೊರೆತ ಕರ್ಣಮುಚ್ಚಳ, ಪುಷ್ಕರಣಿ ಸೇರಿದಂತೆ ಹಲವು ಸನ್ನಿವೇಶಗಳು ನಮಗೆ ದೃಢೀಕರಿಸುತ್ತವೆ. ಇದು ಕೂಡ ವಾಲಿಖಿಲ್ಯರ ಕಾಲ ೬ ನೇ ಶತಮಾನದಲ್ಲಿ ಇರಬಹುದೆಂದು ಸಂಶೋಧಕರ ಅಭಿಪ್ರಾಯ. ಆಗ ಜೈನ ಮತ್ತು ಬೌದ್ಧ ಧರ್ಮಗಳ ಉಚ್ಛ್ರಾಯ ಕಾಲ. ಆ ಸಂದರ್ಭದಲ್ಲಿ ಈ ಮುನಿಗಳು ರಾಜರನ್ನು ಭೇಟಿಯಾಗಿ ಹಿಂದೂ ಧರ್ಮದ ಬಗ್ಗೆ ಜಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇದರಿಂದ ಈ ಪ್ರದೇಶ ಅಗಸ್ತ್ಯ, ಕೌಟಿಲ್ಯ, ವಾಲಿಖಿಲ್ಯ ಈ ಮೂರು ಮುನಿಗಳ ತಪೋಭೂಮಿ ಎನ್ನುವುದು ವೇದ್ಯವಾಗುತ್ತಿದೆ.

ಜೋಯಿಡಾ ತಾಲೂಕಿನ ಶ್ರವಣಗುಡ್ಡೆ, ಅಗಸ್ತ್ಯಮಠ, ಹಳ್ಳಿಘಟ್ಟ ಇಲ್ಲಿಯೂ ಕೂಡ ಸಾಕ್ಷ್ಯಗಳು ಲಭಿಸುತ್ತವೆ. ನಂತರ ಕೌಟಿಲ್ಯ ಮುನಿಗಳು ಉತ್ತರ ಕನ್ನಡದಿಂದ ಮೈಸೂರು ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಅಲ್ಲದೇ ವಾಲಿಖಿಲ್ಯ ಮುನಿಗಳು ಸೂರ್ಯೋಪಾಸನೆ ಮಾಡಿ ಅಪಾರ ತಪಸ್ಸಿನ ಬಲದಿಂದ ಅನೇಕ ಕ್ಷೇತ್ರಗಳನ್ನು ನಿರ್ಮಿಸಿದರು ಎಂಬುದು ಋಗ್ವೇದ ಮತ್ತು ಸ್ಕಂದ ಪುರಾಣದಿಂದ ತಿಳಿಯುತ್ತದೆ. ವಾಲಿಖಿಲ್ಯ ತಪಸ್ಸು ಮಾಡಿದ ಸ್ಥಳಕ್ಕೆ ಇಂದು ಗೋವಾದ ವಾಲಿಖಿಲ್ಯ ತೀರ್ಥ ಇರುವುದು ರುಜುವಾತು ಆಗುತ್ತದೆ. ಈ ಮುನಿಗಳು ಯಲ್ಲಾಪುರ, ಶಿರಸಿ, ಜೋಯಿಡಾ, ಗೋಕರ್ಣ, ಹೊನ್ನಾವರ ಇಡಗುಂಜಿ, ಶರಾವತಿ ದಂಡೆ (ಎಡಕುಂಜ) ಅಲ್ಲದೇ ಮಹಾರಾಷ್ಟ್ರ, ಗೋದಾವರಿ ದಡ, ತ್ರಯಂಬಕೇಶ್ವರ, ನಾಸಿಕ ಸೇರಿದಂತೆ ಹಲವು ಸ್ಥಳಗಳಲ್ಲಿ ಸಂಚರಿಸಿ ತಪಸ್ಸನ್ನು ಗೈದಿದ್ದಲ್ಲದೇ ವಾಲಿಖಿಲ್ಯ ಮುನಿಗಳು ಸಹ್ಯಾದ್ರಿ ತಪ್ಪಲಲ್ಲಿ ಹೆಚ್ಚಿನ ಜೀವಿತಾವಧಿಯನ್ನು ಕಳೆದಿರುವುದು ಕಂಡುಬರುತ್ತದೆ.

ಈ ಎಲ್ಲ ಮಾಹಿತಿಗಳು ಕ್ರಿಪೂ ೫೦೦-೧೦೦೦ರವರೆಗೆ ಅಲ್ಲದೇ ೩ನೇ ಶತಮಾನದ ಸಂದರ್ಭದಲ್ಲಿ ಶಾತವಾಹನರ ಕಾಲದಲ್ಲಿ ಇದ್ದವೆಂಬುದಕ್ಕೆ ಗೋಕರ್ಣ ಪುರಾಣದಿಂದ ಮಾಹಿತಿ ಲಭಿಸಿದೆ. ಅಗಸ್ತ್ಯರು ಜೋಯಿಡಾ ತಾಲೂಕಿನಲ್ಲಿರುವ ಕವಳೇಶ್ವರ ಗುಹೆಯ (ಶಿವರಾತ್ರಿಯಂದು ವಿಶೇಷ ಜಾತ್ರೆಯ ತಾಣವಾಗಿದೆ) ಇಲ್ಲಿ ಈಶ್ವರ ಮತ್ತು ಮಹಾಕಾಳಿಯ ಆರಾಧನಾ ಕ್ಷೇತ್ರವನ್ನಾಗಿಸಿಕೊಂಡಿದ್ದರು ಎಂಬುದು ಉಲ್ಲೇಖನೀಯ. ನಂತರ ೫ನೇ ವಿಕ್ರಮಾದಿತ್ಯ ಈ ಪ್ರದೇಶವನ್ನಾಳಿದ್ದ ಎಂಬುದು ಇಲ್ಲಿರುವ ಶಿಲಾಶಾಸನದಿಂದ ತಿಳಿಯಬಹುದಾಗಿದೆ.