17ರಂದು ಸಿಂಗಟಾಲೂರು ವೀರಭದ್ರೇಶ್ವರ ಕಾರ್ತಿಕೋತ್ಸವ

| Published : Nov 13 2025, 01:15 AM IST

17ರಂದು ಸಿಂಗಟಾಲೂರು ವೀರಭದ್ರೇಶ್ವರ ಕಾರ್ತಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ಸ್ಥಳದಲ್ಲಿಯೇ ಎಲ್ಲರೂ ಎಣ್ಣೆ ಹಾಕಿ ದೀಪಗಳನ್ನು ಹಚ್ಚುವ ಮೂಲಕ ಕಾರ್ತಿಕೋತ್ಸವದ ಮಂಗಲೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

ಮುಂಡರಗಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ದೇವಸ್ಥಾನವಾಗಿರುವ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಮಂಗಲೋತ್ಸವ ನ. 17ರಂದು ಸಂಜೆ 7 ಗಂಟೆಗೆ ನೆರವೇರಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ತಿಕೋತ್ಸವಕ್ಕೆ ಬರುವ ಭಕ್ತರು ಮೇಲೆ ದೇವಸ್ಥಾನದ ಹತ್ತಿರ ದೀಪವನ್ನು ಬೆಳಗಿಸಲು ಎಣ್ಣೆ ತೆಗೆದುಕೊಂಡು ಹೋಗಬಾರದು. ದೀಪ ಹಚ್ಚುವುದಕ್ಕಾಗಿ ಕಮಿಟಿ ವತಿಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ನಿಗದಿತ ಸ್ಥಳದಲ್ಲಿಯೇ ಎಲ್ಲರೂ ಎಣ್ಣೆ ಹಾಕಿ ದೀಪಗಳನ್ನು ಹಚ್ಚುವ ಮೂಲಕ ಕಾರ್ತಿಕೋತ್ಸವದ ಮಂಗಲೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ದೇವಸ್ಥಾನಕ್ಕೆ ವರ್ಷದಿಂದ ವರ್ಷಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ತರಿಗೆ ದೇವಸ್ಥಾನದ ವತಿಯಿಂದ ನಿತ್ಯವೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ವತಿಯಿಂದ ದೇವಸ್ಥಾನದ ಎದುರಿನಲ್ಲಿ ರಾಕ್ ಗಾರ್ಡನ್ ಮಾದರಿಯಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗಿದ್ದು, ನೋಡುಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದರು.

ದೇವಸ್ಥಾನದ ಆವರಣವನ್ನು ವಿದ್ಯುತ್ ದೀಪಗಳಿಂದ ಹಾಗೂ ಸುತ್ತಲೂ ಉದ್ಯಾನ ವನದಿಂದ ಸುಂದರಗೊಳಿಸಲಾಗಿದೆ. ಸಿಂಗಟಾಲೂರು ಗ್ರಾಪಂ ವತಿಯಿಂದ ಜಾತ್ರಾ ಮಹೋತ್ಸವದ ಮರುದಿನ ಜರುಗುವ ಅಗ್ನಿ ಮಹೋತ್ಸವ ಕಾರ್ಯಕ್ರಮವನ್ನು ಕುಳಿತು ವೀಕ್ಷಿಸಲು ಸ್ಟೇಡಿಯಂ ಮಾದರಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.

ಸುಕ್ಷೇತ್ರದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಬೃಹತ್ ಹಾಗೂ ಸುಸಜ್ಜಿತ ಕಲ್ಯಾಣಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಕೊಟ್ರೇಶ ಬಳ್ಳೊಳ್ಳಿ, ಶೇಖಣ್ಣ ಬಾಲೇಹೊಸೂರು, ಸುಭಾಸಪ್ಪ ಬಾಗೇವಾಡಿ, ಕರ್ಣಂ ಸಣ್ಣತಮ್ಮಪ್ಪ, ಕಾಶಯ್ಯ ಬೆಂತೂರಮಠ, ರಜನಿಕಾಂತ ದೇಸಾಯಿ, ಬಸವೇಶ್ವರ ಕುಮಾರ ಸದಾಶಿವಪ್ಪನವರ ಉಪಸ್ಥಿತರಿದ್ದರು.