ಸಾರಾಂಶ
ನಿಯಮ ನಿರ್ಲಕ್ಷಿಸಿದ ಸ್ಥಳೀಯಾಡಳಿತ । ಪೇಟೆ ವ್ಯಾಪಾರ ವಹಿವಾಟಿಗೆ ಧಕ್ಕೆಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಅತೀ ಹೆಚ್ಚು ಆದಾಯ ಹೊಂದಿರುವ ಗ್ರಾಮ ಪಂಚಾಯಿತಿ ಹೆಗ್ಗಳಿಕೆ ಹೊಂದಿರುವ ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಪೇಟೆ ಸಮಸ್ಯೆಗಳ ಆಗರವಾಗಿದ್ದು, ಇದೀಗ ವ್ಯಾಪಾರ ವಹಿವಾಟುಗಳು ನಿರ್ಜೀವ ಹಂತಕ್ಕೆ ತಲುಪಿದ್ದು, ನಿಯಮಾವಳಿಗಳನ್ನು ನಿರ್ಲಕ್ಷಿಸಿದ್ದ ಪರಿಣಾಮಕ್ಕೆ ಇಡೀ ಗ್ರಾಮ ಬೆಲೆ ತೆರಬೇಕಾಗಿ ಬಂದಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ರಸ್ತೆಗಳಿಗೆ ಸಂಬಂಧಿಸಿ ಸರ್ಕಾರ ನಿಯಮಾವಳಿಗಳನ್ನು ತಂದಿದೆ. ಯಾವುದೇ ಕಟ್ಟಡ ನಿರ್ಮಿಸಬೇಕಾದರೂ ರಸ್ತೆ ಅಂಚಿನಿಂದ ನಿಯಮಿತ ಅಂತರ ಕಾಯ್ದುಕೊಂಡು ಕಟ್ಟಡ ನಿರ್ಮಾಣ ಮಾಡಬೇಕಾಗುತ್ತದೆ. ಪರವಾನಗಿ ಪಡೆಯುವ ವರೆಗೆ ದಾಖಲೆಯಲ್ಲಿರುವ ನಿಯಮಗಳು ಪರವಾನಗಿ ಪಡೆದ ನಂತರ ಬದಲಾಗುವ ಪರಿಪಾಠ ಇಲ್ಲಿದೆ. ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ನಿರ್ಮಿಸುವಾಗ ವಾಹನ ಪಾರ್ಕಿಂಗ್ ಸ್ಥಳಾವಕಾಶ ಸಹಿತ ಸುರಕ್ಷತಾ ವ್ಯವಸ್ಥೆ ಪಾಲಿಸಬೇಕಾಗುತ್ತದೆ. ಆದರೆ ಉಪ್ಪಿನಂಗಡಿಯಲ್ಲಿ ಅದ್ಯಾವುದೂ ಪಾಲನೆ ಇಲ್ಲದೆ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ಪ್ರಾಪ್ತಿಯಾದ ಕಾರಣಕ್ಕೆ ಇವತ್ತು ವಾಹನ ದಟ್ಟಣೆ ಎನ್ನುವುದು ಇಲ್ಲಿ ನಿತ್ಯದರ್ಶನ. ಯಾವ ಕಟ್ಟಡವೂ ವ್ಯವಸ್ಥಿತ ಪಾರ್ಕಿಂಗ್ ಸ್ಥಳವಕಾಶ ಹೊಂದಿಲ್ಲದ ಕಾರಣ ವಾಹನ ಚಾಲಕರು ಪಡುವ ಬವಣೆ ಅವರ್ಣನೀಯ.ಸಂಚಾರಿ ಪೊಲೀಸರು ಅಯಕಟ್ಟಿನಲ್ಲಿ ಠಿಕಾಣಿ ಹೂಡುತ್ತಿರುವುದರಿಂದ ಪೊಲೀಸ್ ದಂಡನೆಗೆ ಸಿಲುಕುವ ಭೀತಿಯಿಂದ ಪೇಟೆಗೆ ಆಗಮಿಸುವುದಕ್ಕೆ ಹಿಂದೇಟು ಹಾಕುತ್ತಿರುವ ಸನ್ನಿವೇಶಗಳೇ ಅಧಿಕವಾಗಿದ್ದು, ತತ್ ಪರಿಣಾಮ ಗ್ರಾಹಕರಿಲ್ಲದೆ ಉಪ್ಪಿನಂಗಡಿ ಪೇಟೆಯು ಸೊರಗುವಂತಾಗಿದೆ.ಎಡವಿದ ಪಂಚಾಯಿತಿ: ಸ್ಥಳೀಯವಾಗಿ ನಿಯಮಾವಳಿ ಜಾರಿಗೊಳಿಸುವ ಗ್ರಾಮ ಪಂಚಾಯಿತಿ ಆಡಳಿತ ಇಲ್ಲಿ ಮಾತ್ರ ಗುರುತರ ತಪ್ಪೆಸಗಿ ಸಮಸ್ಯೆಗಳ ವಿಚಾರದಲ್ಲಿ ತನ್ನ ಪಾತ್ರವನ್ನೂ ಒಳಗಾಗಿಸಿದೆ. ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣ ಮತ್ತು ಹಳೆ ನಿಲ್ದಾಣದಲ್ಲಿ ನಿರ್ಮಿಸಲಾದ ವಾಣಿಜ್ಯ ಕಟ್ಟಡಗಳಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಿಲ್ಲ. ಕನಿಷ್ಠ ಚರಂಡಿ ವ್ಯವಸ್ಥೆ ಅಳವಡಿಸದೆ ಮಳೆಯ ನೀರೂ ಕೂಡ ರಸ್ತೆಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲೇ ಇಕ್ಕಟ್ಟಾದ ರಸ್ತೆಯಿಂದ ಬಸವಳಿಯುತ್ತಿರುವ ಉಪ್ಪಿನಂಗಡಿ ಪೇಟೆಯಲ್ಲಿ ಇದೀಗ ಅಲ್ಲಲ್ಲಿ ವಾಹನಗಳ ಮೂಲಕ ಮೀನು , ತರಕಾರಿ , ಹಣ್ಣು ಹಂಪಲು ಸಹಿತ ವಿವಿಧ ಬಗೆಯ ವಸ್ತುಗಳ ಮಾರಾಟಗಾರರು ಕಾಣಿಸತೊಡಗಿದ್ದಾರೆ. ಇವರ ಹಿತಾಸಕ್ತಿಯ ನೆಲೆಯಲ್ಲಿ ಜನ ಸಾಮಾನ್ಯರು ಸಂಕಷ್ಠಕ್ಕೆ ಸಿಲುಕುವಂತಾಗಿದೆ.ಅನಧಿಕೃತ ವ್ಯಾಪಾರಿಗಳಿಂದ ತಮ್ಮ ವ್ಯಾಪಾರಕ್ಕೆ ತೊಡಕುಂಟಾಗುತ್ತಿದೆ ಎಂದು ಅಧಿಕೃತ ವ್ಯಾಪಾರಿಗಳು ಪದೇ ಪದೇ ದೂರು ಸಲ್ಲಿಸುತ್ತಿದ್ದರೂ ಅವರ ದೂರಿಗೆ ಕಿಮ್ಮತ್ತು ದೊರಕಿಲ್ಲ. ಆಕ್ರಮಣಕ್ಕೆ ಇಳಿಯುತ್ತಾರೆ:ಪೇಟೆಯಲ್ಲಿ ಜನ ಸಂಚಾರವೇ ಕುಸಿತಗೊಳ್ಳುತ್ತಿದೆ. ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಸಂಚಾರಕ್ಕೆ ಅಡೆತಡೆಯುಂಟಾದಾಗ ವಾಹನ ಸವಾರರು ಅಸಹ್ಯವಾಗುವಂತೆ ಹಾರ್ನ್ ಹಾಕುತ್ತಿರುತ್ತಾರೆ. ಹಾರ್ನ್ ಹಾಕಬೇಡಿ ಎಂದು ವಿನಂತಿಸಿದರೆ, ‘ಹಾಗಾದರೆ ಮುಂದೆ ಹೋಗಿ ಬ್ಲಾಕ್ ಸರಿಪಡಿಸು’ ಎಂದು ಏಕವಚನದಲ್ಲಿ ಗದರಿಸುತ್ತಾರೆ. ಬದುಕೇ ಬೇಸರ ಎನಿಸುತ್ತಿದೆ ಎಂದು ೭೦ ಹರೆಯದ ವ್ಯಾಪಾರಿಯೋರ್ವರು ಖೇದದಿಂದ ತಿಳಿಸಿದ್ದಾರೆ.................ಉಪ್ಪಿನಂಗಡಿಯ ವಾಹನದಟ್ಟಣೆ, ಅನಧಿಕೃತ ಅಂಗಡಿಗಳ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸಮಸ್ಯೆಯ ಅರಿವಿದೆ. ಪಂಚಾಯಿತಿ ಆಡಳಿತ ಮತ್ತು ಮಾದ್ಯಮವನ್ನು ನಿಂದಿಸಿ ವಿಡಿಯೋ ಹರಿಯಬಿಟ್ಟ ಅನಧಿಕೃತ ಅಂಗಡಿಯವನ ಕೃತ್ಯ ಗಂಭೀರವಾಗಿ ಪರಿಗಣಿಸಲಾಗಿದೆ. ಅನಧಿಕೃತ ಅಂಗಡಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಅದು ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದ್ದಾರೆ.