ಕನ್ನಡಪ್ರಭ ವಾರ್ತೆ, ತುಮಕೂರು

ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಹಲವಾರು ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ವಹಿಸಬೇಕೆಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತರ ಜೊತೆ ಸಮನ್ವಯ ಸಭೆ ನಡೆಸಿದರು.

ತುಮಕೂರು ನಗರದಲ್ಲಿ ವಸತಿ ವಲಯಗಳಲ್ಲಿ ಭಾರಿ ವಾಹನಗಳು ಸಂಚಾರ ಮಾಡುತ್ತಿದ್ದು, ಅಮಾಯಕ ಜನರ ಪ್ರಾಣ ಬಲಿಯಾಗುತ್ತಿದೆ. ಈ ಕಾರಣದಿಂದ ಗಾರ್ಡನ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧ ಮಾಡಬೇಕು ಹಾಗೂ ದಿಬ್ಬೂರು ಜಂಕ್ಷನ್ ,ಕುಣಿಗಲ್ ಸರ್ಕಲ್, ರಾಣಿಚೆನ್ನಮ್ಮ ಸರ್ಕಲ್‌ನಲ್ಲಿ ಸಿಗ್ನಲ್ ಅಳವಡಿಸುವಂತೆ ಶಾಸಕರು ಸಭೆಯಲ್ಲಿ ಸೂಚಿಸಿದರು.

ಅತಿ ವೇಗದಲ್ಲಿ ವಾಹನಗಳು ಸಂಚಾರ ಮಾಡುವುದರಿಂದ ಅಪಘಾತಗಳು ಹೆಚ್ಚಾಗಿ ಹಿಟ್ ಅಂಡ್ ರನ್ ಕೇಸ್‌ಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದ ಯಲ್ಲಾಪುರ, ಅಂತರಸನಹಳ್ಳಿ ರಸ್ತೆಯಲ್ಲಿ ಹಾಗೂ ಇತರ ಅಪಘಾತ ವಲಯದಲ್ಲಿ ವೈಜ್ಞಾನಿಕವಾಗಿ ಹಂಪ್ಸ್, ಸೂಚನಾ ಫಲಕ, ಕ್ಯಾಟ್ ಐಸ್, ಬಿಳಿ ಬಣ್ಣದ ಮಾರ್ಕರ್ ಮಾಡಬೇಕೆಂದು ಸೂಚನೆ ನೀಡಿದರು.

ಎಸ್.ಎಸ್.ಪುರಂನ ಕೆಂಪಣ್ಣನ ಅಂಗಡಿ ಸರ್ಕಲ್‌ನಿಂದ ಶೆಟ್ಟಿಹಳ್ಳಿ ಕಡೆಗೆ ಹಾಗೂ ಎಸ್.ಐ.ಟಿ ಕಡೆಗೆ ಹೋಗುವ, ಅಶೋಕನಗರ, ಎಸ್.ಎಸ್.ಪುರಂ ನಾಗರೀಕರು ಟ್ರಾಫಿಕ್ ಜಾಮ್‌ನಿಂದ ಗಂಟೆ ಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.


ಸಿದ್ಧಿವಿನಾಯಕ ಮಾರುಕಟ್ಟೆಯ (ಜೆ.ಸಿ.ರಸ್ತೆಯ) ಎಡಭಾಗದಲ್ಲಿರುವ ಹೂವು-ಹಣ್ಣು ಮಾರಾಟಗಾರರು ಕಳೆದ 60 ವರ್ಷಗಳಿಂದ ಅಲ್ಲಿಯೇ ವ್ಯಾಪಾರ ಮಾಡುತ್ತಿದ್ದು, ಅವರು ವ್ಯಾಪಾರ ನಡೆಸಲು ಸಹಕಾರ ಹಾಗೂ ಸೌಲಭ್ಯ ನೀಡಲು ಸಭೆಯಲ್ಲಿ ಶಾಸಕರು ಸೂಚನೆ ನೀಡಿದರು. ಬಡ್ಡಿಹಳ್ಳಿ ರೈಲ್ವೆ ಮೇಲುಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಪಾದಾಡುತ್ತಿದ್ದಾರೆ. ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲು ಶಾಸಕರು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದ ಶಾಸಕರು ಅಂತರಸನಹಳ್ಳಿ ಕೆಳ ಸೇತುವೆ ಬಳಿ ಚರಂಡಿ ನೀರು ನಿಂತು ವಾಹನ ಸವಾರರು ಸಂಚಾರ ಮಾಡಲು ಸಮಸ್ಯೆಯಾಗುತ್ತಿದ್ದು, ಸಮಸ್ಯೆಯನ್ನು ಬಗೆಹರಿಸುವಂತೆ ಅದೇ ರೀತಿಯಾಗಿ ಭೀಮಸಂದ್ರ ಶಾಹಿ ಗಾರ್ಮೆಂಟ್ಸ್ ಮುಂಭಾಗ ಮಹಾನಗರಪಾಲಿಕೆ ವಾಟರ್ ಪೈಪ್‌ಲೈನ್ ಒಡೆದು ಹೋಗಿದ್ದು, ರಸ್ತೆ ಬದಿ ಕೆರೆಯಂತಾಗಿದೆ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಮಕೂರು ನಗರದ ಅಮಾನಿಕೆರೆಯ ಮುಂಭಾಗದ ಎಸ್-ಮಾಲ್‌ನ ಹಿಂಭಾಗದ ಕಾಲುವೆ ಶಿರಾಗೇಟ್ ರಿಂಗ್ ರಸ್ತೆ ದಿಬ್ಬೂರು ಬಳಿಯ ಕಾಲುವೆ ಹಾಗೂ ಭೀಮಸಂದ್ರ ಸೇತುವೆ ಹತ್ತಿರ ಇರುವ ಕಾಲುವೆಗಳಿಗೆ ಯಾವುದೋ ಕೆಮಿಕಲ್ ಕಂಪನಿಯವರು ಕೆಮಿಕಲ್ ತ್ಯಾಜ್ಯಗಳನ್ನು ಯಾರು ಸಂಚರಿಸದ ರಾತ್ರಿ ವೇಳೆಯಲ್ಲಿ ತಂದು ಸುರಿಯುತ್ತಿದ್ದು, ಸುತ್ತಮುತ್ತಲಿನ ಮಕ್ಕಳು, ವೃದ್ದರು, ಸಾರ್ವಜನಿಕರು ಉಸಿರಾಡಲು ಸಹ ಕಷ್ಟಕರವಾಗುತ್ತಿದ್ದು, ಕೆಮಿಕಲ್ ತ್ಯಾಜ್ಯ ಸುರಿಯುವ ಕಂಪನಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕ್ರಮಕೈಗೊಳ್ಳಬೇಕೆಂದು ಶಾಸಕರು ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

ಇದಕ್ಕೆ ಉತ್ತರಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಂಬಂಧವಾಗಿ ಪೋಲಿಸ್ ಸರ್ಕಲ್ ಇನ್ಸಪೆಕ್ಟರ್ ರವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಹಾಗೂ ಎಲ್ಲಿ ಎಲ್ಲಿ ಕಾಲುವೆಗೆ ಕೆಮಿಕಲ್ ಎಸೆಯಲು ಅವಕಾಶವಿದೆಯೋ ಆ ಸ್ಥಳದಲ್ಲಿ ಸಿಸಿ ಕ್ಯಾಮಾರಾ ಅಳವಡಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶುಭ, ಮಹಾನಗರಪಾಲಿಕೆ, ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಸಮನ್ವಯ ಸಭೆಯಲ್ಲಿ ಹಾಜರಿದ್ದರು.