ಗಜೇಂದ್ರಗಡ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳ ನಿರ್ಮಾಣ ಕಾಮಗಾರಿಗೆ ವಿಳಂಬ ಧೋರಣೆಯನ್ನು ಖಂಡಿಸಿ ಬುಧವಾರ ತಾಲೂಕು ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ೨೦೨೨- ೨೩ರಲ್ಲಿ ೩೦೦ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಮನೆ ನಿರ್ಮಾಣ ಕಾಮಗಾರಿ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಗುತ್ತಿಗೆದಾರರ ಬಳಿ ಕಾರ್ಮಿಕರ ಕೊರತೆ ಇದ್ದ ಕಾರಣ ಮನೆಗಳ ನಿರ್ಮಾಣ ಕಾಮಗಾರಿ ಮೊದಲ ಹಂತದಲ್ಲಿ ಸಂಪೂರ್ಣ ಸ್ಥಗಿತಗೊಂಡಿತ್ತು.

ಅಭಿವೃದ್ಧಿ ಮಂಡಳಿಯ ಸಹಾಯಕ ಅಭಿಯಂತರ ಹಾಗೂ ಗುತ್ತಿಗೆದಾರರು ಫಲಾನುಭವಿಗಳನ್ನು ಭೇಟಿಯಾಗಿ ನಮ್ಮಲ್ಲಿ ಕಾರ್ಮಿಕರ ಅಭಾವವಿದ್ದು, ನೀವೆ ಮನೆಗಳನ್ನು ನಿರ್ಮಿಸಿಕೊಳ್ಳಿ. ಹಂತ- ಹಂತವಾಗಿ ಅನುದಾನದ ಹಣವನ್ನು ನಿಮ್ಮ ಖಾತೆಗೆ ತಲುಪಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಹೀಗಾಗಿ ಫಲಾನುಭವಿಗಳು ಸಾಲ ಮಾಡಿ ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿದ್ದು, ಇನ್ನು ಅನೇಕ ಫಲಾನುಭವಿಗಳಿಗೆ ಮನೆಗಳ ಅನುದಾನ ಸಿಗದೆ ಅರ್ಧಕ್ಕೆ ನಿಂತು ಪರದಾಡುವಂತಾಗಿದೆ ಎಂದು ದೂರಿದ ಅವರು, ಸಂಪೂರ್ಣವಾಗಿ ಬಗೆಹರಿದು ಮನೆ ಕಟ್ಟಿಕೊಂಡು ಫಲಾನುಭವಿಗಳಿಗೆ ವೆಚ್ಚವಾದ ಹಣವನ್ನು ತಲುಪುವ ವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು. ಇದಕ್ಕೆ ಸಹಕರಿಸದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನನೆಗುದಿಗೆ ಬಿದ್ದಿರುವ ಮನೆಗಳನ್ನು ನಿರ್ಮಿಸುವ ಯೋಜನೆಯ ಕಾಮಗಾರಿಯ ಸಮಸ್ಯೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಈ ವೇಳೆ ಸಂಘಟನೆಯ ಕಳಕಪ್ಪ ಪೂತಾ, ಕಳಕಪ್ಪ ಹಾಲಕೇರಿ, ಎಸ್.ಎನ್. ಬಂಡಾರಿ, ಎಂ.ಜಿ. ರಾಜೋಳಿ, ಕೆ.ಐ. ಕೆಂಚಿ, ಸುಭಾಸ ಜಾಧವ, ನವೀನ ಪತ್ತಿ ಮಹ್ಮದರಫಿ ಮುದಗಲ್ ಇದ್ದರು.

ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ


ಗಜೇಂದ್ರಗಡ: ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನ ೨೦೨೬- ೨೭ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಗ.ವಿ.ವಿ. ಸಂಘದ ಸಭಾಭವನದಲ್ಲಿ ನಡೆಯಿತು.ಈ ವೇಳೆ ಸಂಘದ ಉಪಾಧ್ಯಕ್ಷ ಡಾ. ಬಿ.ವಿ. ಕಂಬಳ್ಯಾಳ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಗುರುತಿಸಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮಾಡಬೇಕು ಎಂದರು.ನಿಪ್ಪಾಣಿ ಕೆಎಲ್ಇ ಸಂಸ್ಥೆಯ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಬಿ. ಪೊಲೀಸಪಾಟೀಲ ಮಾತನಾಡಿ, ಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ತಮ್ಮ ತಂದೆ- ತಾಯಿಯ ಕಷ್ಟ- ತ್ಯಾಗಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ, ಉತ್ತಮ ಭವಿಷ್ಯ ರೂಪಿಸಿಕೊಂಡು ಅವರ ಕನಸುಗಳನ್ನು ನನಸು ಮಾಡಬೇಕು ಎಂದರು.

ಪ್ರಾಚಾರ್ಯ ಜಿ.ಬಿ. ಗುಡಿಮನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎನ್. ಶಿವರಡ್ಡಿ, ಉಪನ್ಯಾಸಕರಾದ ಬಿ.ವಿ. ಮುನವಳ್ಳಿ, ಎ.ಎಸ್. ವಡ್ಡರ, ವಿ.ಎಂ. ಜೂಚನಿ, ಎಂ.ಎಲ್. ಕ್ವಾಟಿ, ಪ್ರೇಮಾ ಚುಂಚಾ, ಎಸ್.ಎಸ್. ವಾಲಿಕಾರ ಹಾಗೂ ಬಸಮ್ಮ ಮಲ್ಲಾಡದ, ಬಸವರಾಜ ಮಲ್ಲಾಡದ ಇದ್ದರು.