ಕೆಜಿಎಫ್:ಟ್ರ್ಯಾಕ್ಟರ್‌ನ್ನು ಚಲಾಯಿಸಿಕೊಂಡು ಬರುತ್ತಿರುವಾಗ ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣಕ್ಕೆ ಸಿಗದೇ ಹಳ್ಳದಲ್ಲಿ ಮಗುಚಿ ಬಿದ್ದಿದ್ದರಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಟ್ರಾಲಿಯಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬೀರನಕುಪ್ಪ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಕ್ಯಾಸಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೀರನಕುಪ್ಪ ಗ್ರಾಮದ ಲಕ್ಷ್ಮೀನಾರಾಯಣ(೧೮), ದರ್ಶನ್ ರೆಡ್ಡಿ (೧೯) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರಿಬ್ಬರು ಬೀರನಕುಪ್ಪ ಗ್ರಾಮದಿಂದ ಕಾವೇರಹಳ್ಳಿ ರಸ್ತೆಯಲ್ಲಿ ಚಿನ್ನಪ್ಪಯ್ಯ ಎಂಬುವವರ ಜಮೀನಿನ ಬಳಿ ಟ್ರ್ಯಾಕ್ಟರ್‌ನ್ನು ಚಲಾಯಿಸಿಕೊಂಡು ಬರುತ್ತಿರುವಾಗ ರಸ್ತೆ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೇ ಇದ್ದುದರಿಂದ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಗಮಿಸಿದ್ದರು. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕ್ಯಾಸಂಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.