ಲಾಲ್‌ಬಾಗ್ ಸಸ್ಯತೋಟದಲ್ಲಿ ರಾಜ್ಯಮಟ್ಟದ ಮಾವು ಮತ್ತು ಹಲಸು ಮೇಳ-2026ಕ್ಕೆ ಗುರುವಾರ ಶಾಸಕ ಉದಯ್ ಬಿ.ಗರುಡಾಚಾರ್ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ, ನಿಗಮದ ಅಧ್ಯಕ್ಷ ಡಾ.ಬಿ.ಸಿ.ಮುದ್ದು ಗಂಗಾಧರ್ ಇದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿ ವರ್ಷದಂತೆ ಈ ವರ್ಷವೂ ಲಾಲ್‌ಬಾಗ್ ಸಸ್ಯತೋಟದಲ್ಲಿ ರಾಜ್ಯಮಟ್ಟದ ಮಾವು ಮತ್ತು ಹಲಸು ಮೇಳ-2026ಕ್ಕೆ ಗುರುವಾರ ಶಾಸಕ ಉದಯ್ ಬಿ.ಗರುಡಾಚಾರ್ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಶಾಸಕರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಈ ಮೇಳ ಜೂ.30ರವರೆಗೆ ನಡೆಯಲಿದೆ ಎಂದು ಹೇಳಿದರು.
ನಿಗಮದ ಅಧ್ಯಕ್ಷ ಡಾ.ಬಿ.ಸಿ.ಮುದ್ದು ಗಂಗಾಧರ್ ಮಾತನಾಡಿ, ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ಸಹಜವಾಗಿ ಮಾಗಿದ ಹಣ್ಣುಗಳನ್ನು ಒದಗಿಸಲು ಮೇಳ ಆಯೋಜಿಸಲಾಗಿದೆ. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತಗೊಂಡಿದೆ. ಹೂ ಬಿಡುವ ಪ್ರಕ್ರಿಯೆ ವಿಳಂಬವಾದ ಕಾರಣ ವಿವಿಧ ಪ್ರದೇಶಗಳಲ್ಲಿ ಮಾವು ವಿವಿಧ ಹಂತಗಳಲ್ಲಿ ಕೊಯ್ಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ಮಾತನಾಡಿ, ಮೇಳದಲ್ಲಿ ಸುಮಾರು 65ಕ್ಕೂ ಹೆಚ್ಚು ಮಾವಿನ ತಳಿಗಳು ಹಾಗೂ 15ಕ್ಕೂ ಹೆಚ್ಚು ಹಲಸಿನ ತಳಿಗಳು ಪ್ರದರ್ಶನಕ್ಕಿಡಲಾಗಿದೆ. ಬಾದಾಮಿ, ರಸಪುರಿ, ಮಲ್ಲಿಕಾ, ಸೆಂದೂರ, ಹಿಮಾಂಪಸಂದ್, ಕೇಸರ್, ದಶೇರಿ, ಬನೇಶಾನ್, ಹಿಮಾಯತ್, ತೋತಾಪುರಿ, ರತ್ನಗಿರಿ ಆಲ್ಫಾನ್ಸೊ, ನೀಲಂ, ಅಮ್ರಪಾಲಿ ಸೇರಿದಂತೆ 18 ರಿಂದ 20 ಪ್ರಮುಖ ಮಾವಿನ ತಳಿಗಳು ಮಾರಾಟಕ್ಕೆ ಲಭ್ಯವಿವೆ. ಜತೆಗೆ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತುಬಗೆರೆ, ಲಾಲ್‌ಬಾಗ್ ಮಧುರ, ಸೂರ್ಯ ಹಾಗೂ ಚಂದ್ರ ಸೇರಿದಂತೆ 7 ಹಲಸಿನ ತಳಿಗಳೂ ದೊರೆಯಲಿವೆ ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಎಂ.ಜಗದೀಶ್ ಸೇರಿದಂತೆ ಇತರರು ಇದ್ದರು.
ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ, ಕೊಪ್ಪಳ, ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಜಿಲ್ಲೆಗಳ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಮಾವು ಮತ್ತು ಹಲಸಿನಿಂದ ತಯಾರಿಸಲಾದ ಜ್ಯೂಸ್, ಜಾಮ್, ಉಪ್ಪಿನಕಾಯಿ, ಕ್ಯಾಂಡಿ, ಚಿಪ್ಸ್, ಪಲ್ಪ್, ಸ್ಕ್ವ್ಯಾಶ್ ಹಾಗೂ ಐಸ್‌ಕ್ರೀಂ ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟಕ್ಕೆ ಲಭ್ಯಯಿವೆ ಎಂದು ಟಿ.ಆರ್. ವೇದಮೂರ್ತಿ ಹೇಳಿದರು.