ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಪ್ರಿಯಕರನ ಜತೆ ಸೇರಿ ತನ್ನ ಪತಿಯನ್ನೇ ಪತ್ನಿ ಹತ್ಯೆಗೈದಿರುವ ಕೃತ್ಯ ನಗರದ ಹೊರವಲಯದಲ್ಲಿ ನಡೆದಿದೆ.

ಇಟ್ಟಗಲಪುರದ ನಿವಾಸಿ ಅಭಿಜಿತ್ ಪಂಡಿತ್ (25) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ಅರ್ಚನಾ ಹಾಗೂ ಆಕೆಯ ಪ್ರಿಯಕರ ಪುಷನ್ ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮುತ್ತಗೂರಿನ ನಿರ್ಜನ ಪ್ರದೇಶದಲ್ಲಿ ಅಭಿಜಿತ್‌ನನ್ನು ಕೊಂದು ಬಳಿಕ ಅದೇ ಊರಿನ ಕೆರೆ ದಂಡೆಯಲ್ಲಿ ಮೃತದೇಹ ಎಸೆದು ಪಾಲ್ ಹಾಗೂ ಆತನ ಸ್ನೇಹಿತರು ಪರಾರಿಯಾಗಿದ್ದರು. ತನ್ನ ಪತಿ ನಾಪತ್ತೆ ಬಗ್ಗೆ ಮೃತಳ ಪತ್ನಿ ಅರ್ಚನಾ ಕೊಟ್ಟಿದ್ದ ದೂರೇ ಆಕೆಗೆ ಮುಳ್ಳಾಗಿ ಚುಚ್ಚಿದೆ. ಈ ದೂರಿನ ತನಿಖೆಗಿಳಿದ ಪೊಲೀಸರು ಶಂಕೆ ಮೇರೆಗೆ ಪಾಲ್‌ನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಕೊಲೆ ಕೃತ್ಯ ಬಯಲಾಗಿದೆ.

ಪ್ರೀತಿ ಕೊಂದ ಕೊಲೆಗಾತಿ:


ಕಳೆದ 5 ವರ್ಷದ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ರಾಜ್ಯದ ಅಭಿಜಿತ್‌ ಹಾಗೂ ತ್ರಿಪುರ ರಾಜ್ಯದ ಪುಷನ್ ಪಾಲ್‌, ರಾಜಾನುಕುಂಟೆ ಹತ್ತಿರ ಖಾಸಗಿ ವಿಲ್ಲಾಕ್ಕೆ ಕಾವಲುಗಾರರಾಗಿ ಸೇರಿದರು. 3 ವರ್ಷಗಳ ಹಿಂದೆ ಅಲ್ಲೇ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಅರ್ಚನಾಳನ್ನು ಪ್ರೀತಿಸಿ ಅಭಿಜಿತ್ ವಿವಾಹವಾಗಿದ್ದ. ಮದುವೆ ಬಳಿಕ ಇಟ್ಟಗಲಪುರದಲ್ಲಿ ದಂಪತಿ ನೆಲೆಸಿದ್ದರು. ವಿಲ್ಲಾದಲ್ಲಿ ಕಾವಲುಗಾರನಾಗಿದ್ದ ಪುಷನ್‌ಗೂ ಅರ್ಚನಾಳ ಪರಿಚಯವಾಗಿತ್ತು. ಇತ್ತೀಚಿಗೆ ಪಾಲ್ ಹಾಗೂ ಅರ್ಚನಾ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಈ ಸ್ನೇಹಕ್ಕೆ ಅಭಿಜಿತ್‌ನಿಂದ ವಿರೋಧ ವ್ಯಕ್ತವಾಯಿತು. ಪಾಲ್ ಜತೆ ಸಂಬಂಧ ಕಡಿದುಕೊಳ್ಳುವಂತೆ ಪತ್ನಿಗೆ ಆತ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಮನೆಯಲ್ಲಿ ಜಗಳವಾಗಿದ್ದವು. ಇದರಿಂದ ಕೆರಳಿದ ಆಕೆ, ಕೊನೆಗೆ ತನ್ನ ಇನಿಯನ ಜತೆ ಸೇರಿ ಪತಿ ಅಭಿಜಿತ್‌ ಕೊಲೆಗೆ ನಿರ್ಧರಿಸಿದ್ದಳು.

ತನ್ನ ಪ್ರಿಯತಮೆ ಸೂಚನೆ ಮೇರೆಗೆ ಆಕೆಯ ಪತಿ ಕೊಲೆಗೆ ಪಾಲ್ ಸಂಚು ರೂಪಿಸಿದ್ದ. ಅಂತೆಯೇ ಮೇ.27 ರಂದು ಮುತ್ತಗನೂರು ಸಮೀಪದ ನಿರ್ಜನ ಪ್ರದೇಶಕ್ಕೆ ಅಭಿಜಿತ್‌ನನ್ನು ಕರೆದೊಯ್ದು ಪಾಲ್ ಹಾಗೂ ಆತನ ಸಹಚರರು ಉಸಿರುಗಟ್ಟಿಸಿ ಕೊಂದಿದ್ದರು. ನಂತರ ಮೃತದೇಹವನ್ನು ಅದೇ ಊರಿನ ಕೆರೆ ದಂಡೆಯಲ್ಲಿ ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು. ಮರು ದಿನ ಮರುದಿನ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ರಾಜಾನುಕುಂಟೆ ಪೊಲೀಸ್ ಠಾಣೆಗೆ ಅರ್ಚನಾ ದೂರು ನೀಡಿದ್ದಳು. ಈ ದೂರಿನ ಬಗ್ಗೆ ತನಿಖೆಗಿಳಿದ ಪೊಲೀಸರು, ಮೃತನ ಸಹೋದ್ಯೋಗಿಗಳನ್ನು ವಿಚಾರಿಸಿದಾಗ ಪಾಲ್‌ ಮೇಲೆ ಶಂಕೆ ಮೂಡಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ತೀವ್ರವಾಗಿ ಪೊಲೀಸರು ಪ್ರಶ್ನಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.