ವೈಭವದಿಂದ ಸಂಪನ್ನಗೊಂಡ ಉಡುಪಿ ಶಾರದಾ ಮಹೋತ್ಸವ

| Published : Oct 05 2025, 01:01 AM IST

ವೈಭವದಿಂದ ಸಂಪನ್ನಗೊಂಡ ಉಡುಪಿ ಶಾರದಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಶಾರದಾ ಮೊಹೋತ್ಸವದ ಸಮಿತಿಯ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ 23ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ವೈಭವದಿಂದ ಸಂಪನ್ನಗೊಂಡಿತು. ಶುಕ್ರವಾರ ಸಂಜೆ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಶಾರದಾ ಮೊಹೋತ್ಸವದ ಸಮಿತಿಯ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ 23ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ವೈಭವದಿಂದ ಸಂಪನ್ನಗೊಂಡಿತು. ಶುಕ್ರವಾರ ಸಂಜೆ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.

ಈ ಶೋಭಾಯಾತ್ರೆಗೆ ಮೊದಲು ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಗೈದು, ನಂತರ ಅರ್ಚಕರಾದ ದಯಾಘನ್ ಭಟ್ ಅವರು ಶಾರದಾ ಮಾತೆಗೆ ಆರತಿ ಬೆಳಗಿಸಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೋಭಾಯಾತ್ರೆಯು ದೇವಳದಿಂದ ಹೊರಟು ನಗರದ ಐಡಿಯಲ್ ಸರ್ಕಲ್, ಹಳೇ ಡಯಾನ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ವೃತ್ತ, ಕೊಳದಪೇಟೆಯಾಗಿ ದೇವಳಕ್ಕೆ ಮರಳಿ ಬಂದು ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ಮಾತೆಯ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು , ಶೋಭಾಯಾತ್ರೆಯಲ್ಲಿ ಹತ್ತಾರು ವಿವಿಧ ಬಗೆಯ ಸ್ಥಬ್ಧಚಿತ್ರಗಳು, ಚಂಡೆ ತಂಡ, ನಾಸಿಕ್ ಬ್ಯಾಂಡ್, ಮಂಗಲವಾದ್ಯದೊಂದಿಗೆ ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ವಿಶೇಷವಾಗಿ ಬೆಳ್ಳಿರಥದಲ್ಲಿ ಶ್ರೀ ಕೃಷ್ಣ ಅರ್ಜುನ, ವಿಠೋಬಾ ರುಖುಮಾಯಿ, ಶ್ರೀ ಪುರಂದರದಾಸ, ಶ್ರೀ ಕನಕದಾಸ ಮುಂತಾದ ವೇಷಧಾರಿಗಳು ಮೆರುಗು ಹೆಚ್ಚಿಸಿದರು. ನೂರಾರು ಜನರು ಭಕ್ತಿಭಾವದಿಂದ ಭಜನೆ ಸಂಕೀರ್ತನೆಗಳಿಗೆ ಹೆಜ್ಜೆ ಹಾಕಿ ಕುಣಿದಾಡಿದರು.ಶೋಭಾತ್ರೆ ಸಾಗುವ ನಗರದ ಮುಖ್ಯ ರಸ್ತೆಗಳಲ್ಲಿ ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಆಕಾಶದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನವೂ ನಡೆಯಿತು.

ಶೋಭಾಯಾತ್ರೆಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಪಿ. ವಿ. ಶೆಣೈ, ಮಟ್ಟಾರ್ ವಸಂತ ಕಿಣೆ, ಅಲೆವೂರು ಗಣೇಶ್ ಕಿಣಿ, ಉಮೇಶ್ ಪೈ, ವಿಶ್ವನಾಥ್ ಭಟ್, ಶಾಂತರಾಮ ಪೈ, ಕೈಲಾಸ್ ನಾಥ ಶೆಣೈ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಸುಬ್ರಮಣ್ಯ ಪೈ, ಮಟ್ಟಾರ್ ಸತೀಶ್ ಕಿಣಿ, ನರಹರಿ ಪೈ, ನಾಗೇಶ್ ಪ್ರಭು, ಭಾಸ್ಕರ್ ಶೆಣೈ, ಅರುಣ್ ಕುಡ್ವ, ಶ್ರೀ ಶಾರದಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.