ಕೊಡಗಿನಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನ ಆಚರಣೆ

| Published : Oct 05 2025, 01:01 AM IST

ಸಾರಾಂಶ

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಲಘು ಉಪಾಹಾರ, ಕಾಫಿ ಕೇಕ್‌ ಮತ್ತು ಉತ್ತಮವಾದ ಬಿಸಿ ಬಿಸಿ ಕಾಫಿಯನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನವನ್ನು (ಅಕ್ಟೋಬರ್ 1) ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭ ಕಾಫಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹಾಗೂ ಆರೋಗ್ಯದ ದೃಷ್ಟಿಯಿಂದ ಕಾಫಿ ಸೇವನೆಯ ಮಹತ್ವದ ಬಗ್ಗೆ ಗಣ್ಯರು ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಎನ್.ಎ. ಅಪ್ಪಯ್ಯ ಅವರು, ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡಿಸುವಲ್ಲಿ ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್ ಅವರ ಕೊಡುಗೆಯನ್ನು ಸ್ಮರಿಸಿದರು. ಭಾರತಕ್ಕೆ ಕಾಫಿ ಪರಿಚಯವಾಗಿ 400 ವರ್ಷಗಳು ಸಂದಿವೆ ಎಂಬ ಅಂಶವನ್ನು ಉಲ್ಲೇಖಿಸಿದರು.

ಅವರು ಮಾತನಾಡಿ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವೃಂದರವರು "2047ರ ವೇಳೆಗೆ ಭಾರತವು 7 ಲಕ್ಷ ಟನ್‌ಗಳಷ್ಟು ಕಾಫಿಯನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಮಡಿಕೇರಿಯಲ್ಲಿ ಸೆಪ್ಟಂಬರ್‌ 24ರಂದು ನಡೆದ ಕಾಫಿ ದಸರಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಕಾಫಿ ಬೆಳೆಗಾರರು ಶ್ರಮಿಸಬೇಕು. ಹಾಗೆಯೇ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ FPO (ರೈತ ಉತ್ಪಾದಕ ಸಂಸ್ಥೆ) ಗಳನ್ನು ಸ್ಥಾಪಿಸಿ ಗುಣಮಟ್ಟದ ಕಾಫಿ ಉತ್ಪಾದನೆ ಮತ್ತು ನೇರ ಮಾರುಕಟ್ಟೆ ಮಾಡಿದಲ್ಲಿ ಉತ್ತಮ ಮತ್ತು ಸ್ಥಿರ ಬೆಲೆ ನಿರೀಕ್ಷಿಸಬಹುದು " ಎಂದು ಸಲಹೆ ನೀಡಿದರು. ಅಲ್ಲದೆ, ಕೊಡಗಿನ ಕಾಫಿಯನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸುತ್ತಿರುವ CWCAB (ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ)ಯ ಕಾರ್ಯವನ್ನು ಶ್ಲಾಘಿಸಿದರು.ಆರೋಗ್ಯಕ್ಕೆ ಉತ್ತಮ ಪೇಯ ಕಾಫಿಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (KPA)‌ನ ಉಪಾಧ್ಯಕ್ಷ ಎಂ.ಸಿ. ಕಾರ್ಯಪ್ಪ ಅವರು, ಆರೋಗ್ಯ ದೃಷ್ಟಿಯಿಂದ ಕಾಫಿ ಸೇವನೆಯ ಉಪಯುಕ್ತತೆಗಳನ್ನು ವಿವರಿಸಿದರು. "ವಿದ್ಯಾರ್ಥಿಗಳು ಮತ್ತು ಯುವಜನತೆ ಉತ್ತಮ ಪಾನೀಯವಾಗಿ ಡಾರ್ಕ್ ರೋಸ್ಟೆಡ್ ಕಾಫಿಯನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಇದರ ಕುರಿತು ಆಳವಾದ ಅಧ್ಯಯನ ನಡೆಸಬೇಕು " ಎಂದು ಕಿವಿಮಾತು ಹೇಳಿದರು.ಆಸ್ಪತ್ರೆಯ ಮುಖ್ಯಸ್ಥರು ಮತ್ತು ವೈದ್ಯರಿಂದ ಬೆಂಬಲ:ಕೊಐಎಂಎಸ್‌ನ ಡೀನ್ ಮತ್ತು ನಿರ್ದೇಶಕರಾದ ಡಾ. ಲೋಕೇಶ್ ಅವರು, ಉತ್ತಮ ಗುಣಮಟ್ಟದ ಕಾಫಿ ಸೇವನೆಯು ಆರೋಗ್ಯಕ್ಕೆ ಮತ್ತು ಜನರೊಂದಿಗೆ ಸಂವಹನಕ್ಕೆ ಉತ್ತೇಜಕವಾಗಿದೆ ಎಂದು ಅಭಿಪ್ರಾಯಪಟ್ಟರು. ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮೋಹನ್ ಅಪ್ಪಾಜಿ ಅವರು, "ಕಾಫಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಗುಣಮುಖವಾಗಿರುವುದನ್ನು ಕಂಡಿದ್ದೇವೆ. ನಮ್ಮ ಕಾಫಿಯನ್ನು ಉತ್ತಮ ಗುಣಮಟ್ಟದೊಂದಿಗೆ ಉತ್ಪಾದಿಸಿ ಪ್ರಚಾರ ಮಾಡಬೇಕು " ಎಂದರು. ಬಾಲ್ಯದಲ್ಲಿ ತಮ್ಮ ತಾಯಿ ಬೆಲ್ಲದೊಂದಿಗೆ ನೀಡುತ್ತಿದ್ದ ಬ್ಲಾಕ್ ಕಾಫಿಯ ಆಹ್ಲಾದಕರ ಅನುಭವವನ್ನು ಸ್ಮರಿಸಿದ ಅವರು, ಕೊಡಗು ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಕಾರಣ, ಅಂತರರಾಷ್ಟ್ರೀಯ ಕಾಫಿ ದಿನದ ಮಾದರಿಯಲ್ಲೇ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುವಂತಾಗಬೇಕು ಎಂದು ಕರೆ ನೀಡಿದರು. ಪಿಡಿಯಾಟ್ರಿಕ್ ವಿಭಾಗದ HOD ಆದ ಡಾ. ಪುರುಷೋತ್ತಮ್‌ ಮಾತನಾಡಿ ಕಾಫಿ ಸೇವನೆ ಆರೋಗ್ಯ ದೃಷ್ಠಿಯಿಂದ ಉತ್ತಮವಾಗಿದೆ ಎಂದು ತಿಳಿಸಿದರು.ಜಾಗತಿಕ ಮತ್ತು ಕೊಡಗಿನ ಸ್ಥಾನಮಾನಕಾಫಿ ಮಂಡಳಿಯ ಉಪ ನಿರ್ದೇಶಕರಾದ ಡಾ. ವಿ. ಚಂದ್ರಶೇಖರ್ ಅವರು, "ಭಾರತವು ವಿಶ್ವದಲ್ಲಿ 7ನೇ ಅತಿ ದೊಡ್ಡ ಕಾಫಿ ಉತ್ಪಾದಕ ದೇಶವಾಗಿದ್ದು, 5ನೇ ಅತಿ ದೊಡ್ಡ ಕಾಫಿ ರಫ್ತು ದೇಶವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯು ಯಾವಾಗಲೂ ಬೆಳೆಗಾರರಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.ಕೂಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA)‌ನ ಅಧ್ಯಕ್ಷರಾದ ನಂದಾ ಬೇಳ್ಯಪ್ಪ ಅವರು, ಕಾಫಿಯ ಬಗ್ಗೆ ಒಲವು ಮೂಡಿಸಿ, ಅದನ್ನು ದಿನನಿತ್ಯದ ಅಭ್ಯಾಸಗಳಲ್ಲಿ ಒಂದಾಗಿಸಲು ಸ್ವಯಂ ಪ್ರತಿಜ್ಞೆ ಸ್ವೀಕರಿಸುವಂತೆ ಜನರನ್ನು ಒತ್ತಾಯಿಸಿದರು. ಅವರು, "ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕೊಡಗು ಶೇ. 40ರಷ್ಟು ಕೊಡುಗೆ ನೀಡುತ್ತದೆ. ಕಾಫಿ ಕೊಡಗಿನ ಕೇವಲ ಪಾನೀಯವಲ್ಲ, ಅದೊಂದು ಸಂಸ್ಕೃತಿಯಾಗಿದೆ " ಎಂದು ಪ್ರತಿಪಾದಿಸಿದರು. ಕಾಫಿ ಮಂಡಳಿ ನಿರ್ದೇಶಕರಾದ ತಲೂರು ಕಿಶೋರ್ ಕುಮಾರ್ ಅವರು ಕೇಂದ್ರ ಸರ್ಕಾರದ ಉತ್ತೇಜಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

CWCAB: ಜಾಗೃತಿ ಮತ್ತು ಸಬಲೀಕರಣದ ಕೇಂದ್ರಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆಯ (CWCAB) ಖಜಾಂಚಿಗಳಾದ ಕುಟ್ಟೇಟಿರ ಕುಮಾರಿ ಕುಂಞಪ್ಪ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯು 450 ರಿಂದ 500 ಸದಸ್ಯರನ್ನು ಹೊಂದಿದ್ದು, ಕಾಫಿ ಕುರಿತು ಜಾಗೃತಿ ಕಾರ್ಯಕ್ರಮಗಳ ಜೊತೆಗೆ, ರೈತರಿಗೆ ಜೇನು ಸಾಕಾಣಿಕೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಮುಂತಾದ ಕೃಷಿ ಸಂಬಂಧಿತ ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಭವ್ಯ ದಿನೇಶ್ ಪ್ರಾರ್ಥನೆ ಸಲ್ಲಿಸಿದರೆ, CWCABಯ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ ಅವರು ಸ್ವಾಗತ ಭಾಷಣ ಮಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಶಾ ಮೋಹನ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ CWCAB,CPA, KPA ಪದಾಧಿಕಾರಿಗಳು, ಸದಸ್ಯರು, ಕೆಐಎಂಎಸ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ, ಎಲ್ಲರಿಗೂ ಲಘು ಉಪಹಾರ, ಕಾಫಿ ಕೇಕ್ ಮತ್ತು ಉತ್ತಮವಾದ ಬಿಸಿ ಬಿಸಿ ಕಾಫಿಯನ್ನು ವಿತರಿಸಲಾಯಿತು.