ಪುತ್ತೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸವಾಲಾಗಿರುವ ಅನೇಕ ರಕ್ಷಣಾ ಕಾರ್ಯಗಳನ್ನು ಉಮೇಶ್ ನಾಯಕ್ ಅವರು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿರುವುದು ಶ್ಲಾಘನೀಯ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಉಮೇಶ್ ನಾಯಕರು ನೀಡಿದ ಸೇವೆ ಅನನ್ಯವಾಗಿದೆ ಎಂದು ವಿಕಲಚೇತನರ ನೋಡೆಲ್ ಅಧಿಕಾರಿಯಾಗಿರುವ ಶಿಶು ಅಭಿವೃದ್ಧಿ ಇಲಾಖೆಯ ಸಹಾಯಕ ಯೋಜನಾ ನಿರ್ದೇಶಕಿ ಮಂಗಳಾ ಕಾಳೆ ಹೇಳಿದರು. ಅವರು ಪುತ್ತೂರು ಹಾಗೂ ಕಡಬ ತಾಪಂ ವ್ಯಾಪ್ತಿಯ ವಿಕಲಚೇತನರ ವಿವಿಧೋದ್ದೇಶ / ಗ್ರಾಮೀಣ / ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ವತಿಯಿಂದ ತಾಪಂ ಸಾಮರ್ಥ್ಯ ಸೌಧದ ಮಿನಿ ಸಭಾಂಗಣದಲ್ಲಿ ನಡೆದ ‘ಸುವರ್ಣ ಕನ್ನಡಿಗ’ ಪ್ರಶಸ್ತಿ ಪುರಸ್ಕೃತ ಪುತ್ತೂರು ಉಮೇಶ್ ನಾಯಕ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಐದು ವರ್ಷದ ಹಿಂದೆ ಎಚ್‌ಐವಿ ಪೀಡಿತ ಮಹಿಳೆ ಹಾಗೂ ಇಬ್ಬರು ಎಚ್‌ಐವಿ ಪೀಡಿತ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಕಾರ್‍ಯಾಚರಣೆಯಲ್ಲಿ ಅವರು ನಡೆಸಿರುವ ಸೇವೆಯು ಅನನ್ಯವಾಗಿದೆ ಎಂದು ಹೇಳಿದರು. ಅಭಿನಂದನಾ ನುಡಿಗಳನ್ನಾಡಿದ ಬನ್ನೂರು ಗ್ರಾಪಂ ಗ್ರಾಮೀಣ ಪುನರ್ವಸತಿ ಕಾರ್‍ಯಕರ್ತೆ ಭವ್ಯ ಬನ್ನೂರು ಅವರು ಉಮೇಶ್ ನಾಯಕ್ ಅವರು ಕಡಬ ತಾಲೂಕಿನ ಮಾನಸಿಕ ವಿಕಲಚೇತನ ಯುವಕನಾದ ಆನಂದ ಎಂಬಾತನನ್ನು ಅಸಹಾಯಕ ಸ್ಥಿತಿಯಿಂದ ರಕ್ಷಿಸಿ ಪ್ರಜ್ಞಾ ಆಶ್ರಮಕ್ಕೆ ಸೇರಿಸಿ ನವ ಜೀವನ ನೀಡಿರುವುದು ಗಮನಾರ್ಹ. ಅಲ್ಲದೆ ಪುನರ್ವಸತಿ ಕಾರ್ಯಕರ್ತ ಭರತ್ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದಿರುವುದು, ಆತನಿಗೆ ರೋಟರಿ ಕ್ಲಬ್ ಪುತ್ತೂರು ಯುವ ಇದರ ಗೌರವ ಸದಸ್ಯತ್ವ ನೀಡಿರುವುದು, ಚತುಷ್ಚಕ್ರ ವಾಹನ ಚಾಲನಾ ಪರವಾನಗಿ ಪಡೆಯಲು ನೆರವಾಗಿರುವುದು ಒಂದು ಐತಿಹಾಸಿಕ ದಾಖಲೆಯಾಗಿದೆ. ವಿಕಲಚೇತನರ ಕಲ್ಯಾಣಕ್ಕಾಗಿ ಕಂಪ್ಯೂಟರ್‌ಗಳ ವಿತರಣೆ, ವಿದ್ಯಾರ್ಥಿವೇತನ ಮತ್ತು ಲ್ಯಾಪ್‌ಟಾಪ್ ಸೌಲಭ್ಯ, ಗಾಲಿಕುರ್ಚಿ ಸೇರಿದಂತೆ ಅಗತ್ಯ ಸಹಾಯಕ ಸಾಧನಗಳನ್ನು ಜ್ಞಾನಿಗಳ ಮೂಲಕ ಒದಗಿಸಿ ಅನೇಕ ದಿವ್ಯಾಂಗರ ಬದುಕಿನಲ್ಲಿ ಆಶಾ ಕಿರಣವಾಗಿದ್ದಾರೆ. ತಮ್ಮ ಬುದ್ಧಿಮಾಂದ್ಯ ಸಹೋದರನೊಂದಿಗೆ ದೇಶಾದ್ಯಂತ ೫೦೦ಕ್ಕೂ ಹೆಚ್ಚು ಜಾದೂ ಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಉಡುಪಿಯ ಡೌನ್ ಸಿಂಡ್ರೋಮ್ ಈಜುಗಾರ್ತಿ ಅರ್ಚನಾ ಜೈ ವಿಠ್ಠಲ್, ಮೈಸೂರಿನ ದಿವ್ಯಾಂಗ ಕಲಾವಿದ ಗಣೇಶ್ ಭಟ್ ಹಾಗೂ ಸುರೇಶ್ ನಾಯಕ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕುವಲ್ಲಿ, ಉಜಿರೆಯ ಸಮಾಜ ಸೇವಕಿ ಅಂಜನಾದೇವಿ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸುವಲ್ಲಿ ಉಮೇಶ್ ನಾಯಕರ ಪಾತ್ರ ಮಹತ್ತರವಾಗಿದೆ ಎಂದರು. ೩೪ ನೆಕ್ಕಿಲಾಡಿ ಗ್ರಾಪಂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸೇಸಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ತಾಪಂ ವಿಶೇಷ ಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನ ಅನೇಕ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯ ಕರ್ತರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಉಮೇಶ್ ನಾಯಕ್ ಸೇವೆ ಅನನ್ಯ: ಮಂಗಳಾ ಕಾಳೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸವಾಲಾಗಿರುವ ಅನೇಕ ರಕ್ಷಣಾ ಕಾರ್ಯಗಳನ್ನು ಉಮೇಶ್ ನಾಯಕ್ ಅವರು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿರುವುದು ಶ್ಲಾಘನೀಯ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಉಮೇಶ್ ನಾಯಕರು ನೀಡಿದ ಸೇವೆ ಅನನ್ಯವಾಗಿದೆ ಎಂದು ವಿಕಲಚೇತನರ ನೋಡೆಲ್ ಅಧಿಕಾರಿಯಾಗಿರುವ ಶಿಶು ಅಭಿವೃದ್ಧಿ ಇಲಾಖೆಯ ಸಹಾಯಕ ಯೋಜನಾ ನಿರ್ದೇಶಕಿ ಮಂಗಳಾ ಕಾಳೆ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.