ವಿಶ್ವದ ಏಳಿಗೆಗೆ ವಿಶ್ವಮಾನವತೆ ಸಂದೇಶ ಪರಿಹಾರ

| Published : Dec 30 2024, 01:01 AM IST

ವಿಶ್ವದ ಏಳಿಗೆಗೆ ವಿಶ್ವಮಾನವತೆ ಸಂದೇಶ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ರಾಷ್ಟ್ರಕವಿ ಕುವೆಂಪು ಜಗತ್ತಿನ ಮಾನವರೆಲ್ಲ ಒಂದೇ ಎನ್ನುವ ಸಂದೇಶ ಸಾರಿದರು.

ಲಕ್ಷ್ಮೇಶ್ವರ: ವಿಶ್ವದ ಏಳಿಗೆಗೆ ವಿಶ್ವಮಾನವತೆಯ ಸಂದೇಶವೊಂದೆ ಪರಿಹಾರವಾಗಿದೆ. ಜಗತ್ತಿಗೆ ವಿಶ್ವಮಾನವತೆ ಸಂದೇಶ ಸಾರಿದ ಕುವೆಂಪು ನಮ್ಮ ಕನ್ನಡದ ಅಸ್ಮಿತೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ಹೇಳಿದರು.

ಪಟ್ಟಣದ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪುರವರ ೧೨೧ನೇ ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ರಾಷ್ಟ್ರಕವಿ ಕುವೆಂಪು ಜಗತ್ತಿನ ಮಾನವರೆಲ್ಲ ಒಂದೇ ಎನ್ನುವ ಸಂದೇಶ ಸಾರಿದರು. ಜಗತ್ತಿನ ಮನುಕುಲದ ಒಳಿತಿಗಾಗಿ ತಮ್ಮ ಕಾವ್ಯಗಳಲ್ಲಿ ವಿಶ್ವ ಮಾನವತೆಯ ಸಂದೇಶ ಸಾರುವ ನುಡಿ ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಮೇಲು ಕೀಳು ತೊಡೆದು ಹಾಕಿ ನಾವೆಲ್ಲರೂ ಒಂದೇ ಎಂದು ವಿಶ್ವ ಮಾನವತೆಯ ಸಂದೇಶ ಬಿತ್ತುವ ಕಾರ್ಯ ಮಾಡಿದರು.

ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ಕುವೆಂಪು ಕನ್ನಡದ ಶ್ರೇಷ್ಠ ಚಿಂತನೆಗಳಿಗೆ ಜಾಗತಿಕ ಸ್ಥಾನಮಾನ ಒದಗಿಸಿದವರು. ಕನ್ನಡತನ ಆಗಸದೆತ್ತರಕ್ಕೆ ಏರಿಸಿದವರು. ವಿಶೇಷವಾಗಿ ಸಮ ಸಮಾನ ಸಮಾಜದ ಇಂದಿನ ಅವಶ್ಯಕತೆ ಸಾರಿ ಹೇಳಿದವರು. ಅವರ ಜಯಂತಿ ನಮ್ಮೆಲ್ಲರ ಜಾಗೃತಿ ಎಂದು ಹೇಳಿದರು.

ಯಲ್ಲಾಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎಚ್. ದಿಂಡವಾಡ ಮಾತನಾಡಿ, ಕುವೆಂಪುರವರಿಲ್ಲದ ಕನ್ನಡ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಎಚ್.ಎಂ. ಅರಳಿಹಳ್ಳಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿಯ ಸದಸ್ಯ ಎಸ್.ಐ. ಆಲೂರ ಅಧ್ಯಕ್ಷೀಯ ಮಾತುಗಳ ಮೂಲಕ ಕುವೆಂಪು ವಿಶ್ವಮಾನವತೆಗೆ ನೀಡಿದ ಕೊಡುಗೆ ಕುರಿತು ಮಾತನಾಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯ ಎಚ್.ಎಂ. ಗುತ್ತಲ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿಯ ಹಿರಿಯ ಸದಸ್ಯ ಎಸ್.ಬಿ. ಅಣ್ಣಿಗೇರಿ ವಂದಿಸಿದರು. ಆರಂಭದಲ್ಲಿ ಅಗಲಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅತಿಥಿಗಳು ಗಣ್ಯರು ಹಾಗೂ ವಿದ್ಯಾರ್ಥಿಗಳು ಸೇರಿ ನಾಡಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಿದ್ದಣ್ಣ ಕಳಸಣ್ಣವರ ಹಾಗೂ ಪದವಿಪೂರ್ವ, ಪದವಿ ಕಾಲೇಜ ವಿದ್ಯಾರ್ಥಿಗಳು ಇದ್ದರು.