ಮಧುಗಿರಿ ವಿವಿಧೆಡೆ ಉಪಲೋಕಾಯುಕ್ತರ ಭೇಟಿ

| Published : Nov 22 2025, 01:30 AM IST

ಸಾರಾಂಶ

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶುಕ್ರವಾರ ಮಧುಗಿರಿಯ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯ ಸೇರಿದಂತೆ ಹಲವು ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿದರು

ಕನ್ನಡಪ್ರಭ ವಾರ್ತೆ, ತುಮಕೂರು / ಮಧುಗಿರಿಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶುಕ್ರವಾರ ಮಧುಗಿರಿಯ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯ ಸೇರಿದಂತೆ ಹಲವು ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸಾರ್ವಜನಿಕ ಸೇವೆಗಳು ಮತ್ತು ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತುಮಕೂರು-ಮಧುಗಿರಿ ಮಾರ್ಗದಲ್ಲಿ ಬಸ್‌ಗಳ ಕೊರತೆ ಹೆಚ್ಚಾಗಿದ್ದು, ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಎಂಬ ಸಮಸ್ಯೆಗಳನ್ನು ವಿದ್ಯಾರ್ಥಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಗೆ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು, ಬಸ್ ನಿಲ್ದಾಣವನ್ನು ಸ್ವಚ್ಛತೆಯಿಂದ ಕಾಪಾಡಬೇಕು, ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಪ್ರತ್ಯೇಕ ಪುರುಷ-ಮಹಿಳಾ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಸಮಸ್ಯೆಗಳಿದ್ದಲ್ಲಿ ಲೋಕಾಯುಕ್ತ ಸಹಾಯವಾಣಿಗೆ ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಲಹೆ ನೀಡಿದರು.ಇದೇ ಸಮಯದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳನ್ನು ಪರಿಶೀಲಿಸಿದಾಗ, ಅವಧಿ ಮುಗಿದಿರುವ ತಂಪಾದ ಪಾನೀಯಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಆಹಾರ ಸುರಕ್ಷಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಆಸ್ಪತ್ರೆಯ ಆವರಣದಲ್ಲಿ ಕೊಳಚೆ ನೀರು ಹರಿಯುತ್ತಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕೊಳಚೆ ನೀರನ್ನು ತೆರವುಗೊಳಿಸಿ ಆಸ್ಪತ್ರೆಯನ್ನು ಸ್ವಚ್ಛತೆಯಿಂದ ನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ಅಗತ್ಯ ಔಷಧಿಗಳನ್ನು ಕೇಂದ್ರದಲ್ಲೇ ನೀಡಬೇಕು ಎಂದು ಸೂಚಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಹಲವು ನ್ಯೂನತೆಗಳನ್ನು ಗುರುತಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಕುಡಿಯುವ ನೀರಿನ ಆರ್.ಒ. ಪ್ಲಾಂಟ್ ಮತ್ತು ನೀರು ಶೇಖರಣಾ ಟ್ಯಾಂಕ್‌ಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳಿಗೆ ಸಿಗುವಂತಹ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆ ಮತ್ತು ಚಪ್ಪಲಿ ಸ್ಟ್ರಾಂಡ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರಲ್ಲದೆ, ನಿಲಯದ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಆಹಾರ ವಿತರಿಸಬೇಕು ಮತ್ತು ಪ್ರತಿದಿನ ತಾಜಾ ತರಕಾರಿಗಳನ್ನು ಅಡುಗೆಗೆ ಬಳಸಬೇಕು ಎಂದು ಸೂಚನೆ ನೀಡಿದರಲ್ಲದೆ, ಪ್ರತಿಯೊಂದು ವಿದ್ಯಾರ್ಥಿನಿಲಯಗಳಲ್ಲಿ ಲೋಕಾಯುಕ್ತರ ಸಂಪರ್ಕ ಮಾಹಿತಿ ಇರುವ ಬೋರ್ಡ್ ಅನ್ನು ಕಡ್ಡಾಯವಾಗಿ ಹಾಕಬೇಕು ಎಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಉಪಲೋಕಾಯುಕ್ತರು, ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು, ಉನ್ನತ ಹುದ್ದೆಗಳನ್ನು ಪಡೆದು ತಂದೆ-ತಾಯಿಗೆ ಕೀರ್ತಿ ತರಬೇಕು ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹಿತೋಪದೇಶ ನೀಡಿದರು. ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಕಚೇರಿಯ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಎಷ್ಟು ಶಾಲಾ ವಾಹನಗಳಿಗೆ ಎಫ್‌ಸಿ ನೀಡಲಾಗಿದೆ, ಎಷ್ಟು ವಾಹನಗಳ ಮೇಲೆ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿಯನ್ನು ಕೇಳಿದಾಗ ಯಾವುದೇ ವಿವರಗಳನ್ನು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವೀರಣ್ಣ ನೀಡಲು ವಿಫಲರಾದರು. ಇದರಿಂದ ಅಸಮಾಧಾನಗೊಂಡ ಉಪ ಲೋಕಾಯುಕ್ತರು ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಕಾಲದಲ್ಲಿ ಸಂಗ್ರಹಿಸಿ ಇರಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ., ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್‌..

147 ಅರ್ಜಿ ಸ್ವೀಕಾರ

ಮಧುಗಿರಿಯಲ್ಲಿ ಉಪಲೋಕಾಯುಕ್ತರ ಭೇಟಿ ವೇಳೆ ಒಟ್ಟು 147 ಅರ್ಜಿಗಳು ಬಂದಿದ್ದು, ಈ ಪೈಕೆ ಪಾವಗಡ 19, ಶಿರಾ 54, ಮಧುಗಿರಿ 74 ತಾಲೂಕಿಗೆ ಸಂಬಂಧಿಸಿದ್ದಾಗಿದೆ. ಕಂದಾಯ ಇಲಾಖೆ ಅರ್ಜಿಗಳೇ ಜಾಸ್ತಿ ಇದ್ದವು.