ಮನೋರಂಜನೆಯಿಂದ ಪ್ರತಿಭೆ ಅನಾವರಣ ಸಾಧ್ಯ: ಡಾ. ಸಿ.ಟಿ. ಜಯದೇವ್‌

| Published : Nov 22 2025, 01:30 AM IST

ಸಾರಾಂಶ

ಚಿಕ್ಕಮಗಳೂರುನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಾಂಸ್ಕೃತಿಕ ಹಬ್ಬ ಚುಂಚನ- 2025ರ ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು.

- ಎಐಟಿ ಕಾಲೇಜಿನಲ್ಲಿ ಚುಂಚನ - 2025 ರ ಉತ್ಸವಕ್ಕೆ ಅದ್ದೂರಿ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಾಂಸ್ಕೃತಿಕ ಹಬ್ಬ ಚುಂಚನ- 2025ರ ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಕಾಲೇಜಿನ ದಿನಗಳಲ್ಲಿ ಪ್ರತಿ ದಿನ ಯೂನಿಫಾರಂ ಧರಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರು, ಬಣ್ಣ ಬಣ್ಣದ ಸೀರೆಯಲ್ಲಿ ಶೃಂಗಾರಗೊಂಡು ಕಾಲೇಜಿಗೆ ಬಂದಿದ್ದರೆ, ಡ್ರಸ್‌ ಮಾಡಿಕೊಂಡು ಬರುವುದರಲ್ಲಿ ನಾವೇನೂ ಕಮ್ಮಿನಾ ಎಂದು ಹೊಸ ಹೊಸ ಶೂಟ್‌ ಆ್ಯಂಡ್‌ ಶೂ ಧರಿಸಿ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‌ ಒಳಗೆ ಎಂಟ್ರಿ ಕೊಟ್ಟಿದ್ದರು.

ತಾವೇ ಶೃಂಗಾರಗೊಂಡರೆ ಉತ್ಸವಕ್ಕೆ ಅಷ್ಟೂ ಕಳೆ ಬರೋದಿಲ್ಲಾವೆಂದು ಕೆಲವು ವಿದ್ಯಾರ್ಥಿನಿಯರು ಕಾಲೇಜಿನ ಒಳ ಆವರಣದಲ್ಲಿ ಹಾದು ಹೋಗಿರುವ ರಸ್ತೆಯ ಉದ್ದಕ್ಕೂ ರಂಗೋಲಿ ಚಿತ್ತಾರ ಬಿಡಿಸುವ ಮೂಲಕ ಕಾಲೇಜಿನ ಅಂದ ಹೆಚ್ಚು ಮಾಡಿದ್ದರು. ಗುರುವಾರ ಕನ್ನಡ ರಾಜ್ಯೋತ್ಸವ ಆಚರಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಕ್ರವಾರ ಇನ್ನಷ್ಟು ಡಿಫರೆಂಟ್‌ ಆಗಿ ಕಾಲೇಜಿಗೆ ಬಂದಿದ್ದರು.

ಮೊದಲ ದಿನವೇ ವಿದ್ಯಾರ್ಥಿಗಳಿಗೆ ರಂಗೋಲಿ, ಕ್ಲಾಸಿಕಲ್ ಸೋಲಾ ಡ್ಯಾನ್ಸ್, ಭರತನಾಟ್ಯ, ವೆಸ್ಟ್ರನ್ ಸೋಲೋ ಸಿಂಗಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಖ್ಯಾತ ಹಿನ್ನೆಲೆ ಗಾಯಕರಾದ ಅನಿರುದ್ಧ ಶಾಸ್ತ್ರಿ, ವ್ಯಾಸರಾಜ ಸೋಸಲೆ, ದಿವ್ಯಾ ರಾಮಚಂದ್ರ ಮತ್ತು ಸುಮುಖ್ ರವಿಶಂಕರ್ ಗಾಯನಕ್ಕೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.

ಬೆಳಿಗ್ಗೆ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬಹಳಷ್ಟು ಉತ್ಸಾಹ ಮತ್ತು ಸಂಭ್ರಮದಿಂದ ಚುಂಚನ ಹಬ್ಬ ಆಚರಿಸುತ್ತಿದ್ದಾರೆ. ಒಂದಿಷ್ಟು ಕ್ರಿಯಾತ್ಮಕತೆ ಮತ್ತು ರಚನಾ ತ್ಮಕವಾಗಿ ಯೋಚಿಸುವಂತಹ ಮನೋಭಾವ ಮನೋರಂಜನೆಯಿಂದ ಮಾತ್ರ ಪ್ರತಿಭೆ ಅನಾವರಣ ಸಾಧ್ಯ ಎಂದರು.

ಎರಡು ದಿನ ನಡೆಯುವ ಚುಂಚನ ಹಬ್ಬದ ಸಿಹಿ ಕ್ಷಣಗಳನ್ನು ವಿದ್ಯಾರ್ಥಿಗಳು ಸಂತೋಷದಿಂದ ಆಚರಿಸಬೇಕು. ಶಿಸ್ತು, ಸಂಯಮದಿಂದ ರಾಜ್ಯಮಟ್ಟದ ವಿದ್ಯಾರ್ಥಿ ಸಾಂಸ್ಕೃತಿಕ ಉತ್ಸವಕ್ಕೆ ತೆರೆ ಎಳೆಯುವ ಮೂಲಕ ಮುಂದಿನ ವಿದ್ಯಾಭ್ಯಾಸದ ಕಡೆ ಹೆಚ್ಚು ಕಾಳಜಿ ವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮುನ್ನ ಭಗವಾನ್ ಶ್ರೀಕೃಷ್ಣ ನಾಮಾಂಕಿತದಿಂದ ಪ್ರಾರಂಭಿಸಿದ್ದೇವೆ. ಶ್ರೀಕೃಷ್ಣ ಮೊದಲ ಆರಾಧನೆ ಸಮಸ್ತರಿಗೆ ಅದೃಷ್ಟವಿದ್ಧಂತೆ. ಕೃಷ್ಣನ ಪರಮಾಪ್ತ ಗೆಳೆಯ ಕುಚೇಲನಿಗೆ ಅವಲಕ್ಕಿ ನೀಡಿ ಲಕ್ಕಿಯಾ ದಂತೆ. ಎಲ್ಲಾ ವಿದ್ಯಾರ್ಥಿಗಳು ಚುಂಚನ- 2025ರ ಸಂಭ್ರಮ ಅದೃಷ್ಟ ಉಂಟು ಮಾಡಲಿ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಸತ್ಯನಾರಾಯಣ್, ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಡಾ. ಸಂಪತ್, ರಾಸಾಯನ ಶಾಸ್ತ್ರ ವಿಭಾಗದ ಡಾ. ಎನ್.ಡಿ.ದಿನೇಶ್, ಎಲೆಕ್ಟ್ರಿಕಲ್‌ ವಿಭಾಗದ ಡಾ. ಜಿ.ಆರ್.ವೀರೇಂದ್ರ, ವಿದ್ಯುನ್ಮಾನ ವಿಭಾಗದ ಡಾ. ಗೌತಮ್, ಗಣಕಯಂತ್ರ ವಿಭಾಗದ ಡಾ. ಪುಷ್ಪ, ಸಿವಿಲ್ ವಿಭಾಗದ ಡಾ. ಕಿರಣ್, ಭೌತಶಾಸ್ತ್ರ ವಿಭಾಗದ ಡಾ. ಮಲ್ಲಿಕಾರ್ಜುನ್, ಗಣಿತಶಾಸ್ತ್ರ ವಿಭಾಗದ ಡಾ. ಶ್ರೀಕಾಂತ್‌, ಎ.ಐ.ಎಂ.ಎಲ್ ವಿಭಾಗದ ಡಾ. ಸುನೀತ್, ಡೇಟಾ ಸೈನ್ಸ್ ವಿಭಾಗದ ಡಾ. ಆದರ್ಶ್ ಇದ್ದರು.

21 ಕೆಸಿಕೆಎಂ 5ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಚುಂಚನ - 2025ರ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್‌ ಅವರು ಉದ್ಘಾಟಿಸಿ ಮಾತನಾಡಿದರು.