ಸಾರಾಂಶ
ನಿಸರ್ಗದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವರ ವಿರುದ್ಧ ಜನಾಂದೋಲನ ನಡೆಯದೇ ಹೋದರೆ ಈ ಭೂಮಿ, ನೀರು, ಆರಣ್ಯ ಸಂಪತ್ತೆಲ್ಲ ಬರಿದಾಗಿ ಪರಿಸರ ಜೀವಿಸುವುದಕ್ಕೆ ಅಸಾಧ್ಯವಾಗುವ ಸಾಧ್ಯತೆಯಿದೆ
ಗದಗ: ಮನುಷ್ಯನ ಮನೆ ನಿರ್ಮಾಣದ ದುರಾಸೆಯಿಂದಾಗಿ ಜನರ ಜೀವನಾಡಿಯಾದ ಕೆರೆಗಳು ಬಲಿಯಾಗುತ್ತಿದ್ದು, ಅವುಗಳಿಂದ ದೊರೆಯುತ್ತಿದ್ದ ಅಮೃತಕ್ಕೆ ಸಮನಾದ ಕುಡಿಯುವ ನೀರು ದೊರಕದಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಸ್ವದೇಶಿ ವಸ್ತು ಪ್ರಚಾರಕ ರುದ್ರಣ್ಣ ಗುಳಗುಳಿ ಹೇಳಿದರು.
ಅವರು ಗದಗ ನಗರದ ಭೀಷ್ಮಕೆರೆ ತೀರದಲ್ಲಿ ಕಬ್ಬಿಗರ ಕೂಟ ಏರ್ಪಡಿಸಿದ್ದ ಕೆರೆ ಹಬ್ಬ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಜನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿಸರ್ಗದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವರ ವಿರುದ್ಧ ಜನಾಂದೋಲನ ನಡೆಯದೇ ಹೋದರೆ ಈ ಭೂಮಿ, ನೀರು, ಆರಣ್ಯ ಸಂಪತ್ತೆಲ್ಲ ಬರಿದಾಗಿ ಪರಿಸರ ಜೀವಿಸುವುದಕ್ಕೆ ಅಸಾಧ್ಯವಾಗುವ ಸಾಧ್ಯತೆಯಿದೆ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಜನಜಾಗೃತಿ ಮೂಡಿಸಬೇಕಾಗಿದೆ. ಅಪಾರ ಜಲಸಂಪತ್ತಿಗೆ ಕಾರಣವಾದ ಕೆರೆಗಳು ನಮ್ಮ ಇತಿಹಾಸ ಕಾಲದಿಂದ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಬೆಳೆಯುತ್ತಿದೆ ಎಂದು ಅವರು ವಿಷಾದಿಸಿದರು.ಹಿರಿಯ ಸಾಹಿತಿ ಡಿ.ವಿ. ಬಡಿಗೇರ, ನಿವೃತ್ತ ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ, ಅಧ್ಯಕ್ಷತೆ ವಹಿಸಿದ್ದ ವಕೀಲ ಮನೋಹರ ಮೇರವಾಡೆ ಮುಂತಾದವರು ಮಾತನಾಡಿದರು. ನಾಗಭೂಷಣ ಹಿರೇಮಠ, ಸಾಹಿತಿ ಬಸವರಾಜ ಗಣಪ್ಪನವರ, ಬಿ.ಎಸ್. ಹಿಂಡಿ, ಸುಭದ್ರಾ ಬಡಿಗೇರ, ಜಯಶ್ರೀ ಮೇರೆವಾಡೆ, ಮಂಜುಳಾ ಇಟಗಿ ಮುಂತಾದವರು ಉಪಸ್ಥಿತರಿದ್ದರು.