ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸುಮಾರು 18 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸವಿರುವ, ದಕ್ಷಿಣ ಭಾರತದ ಅಜ್ಮೀರ್ ಎಂಬ ಖ್ಯಾತಿಯ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮವು ಜ.24ರಿಂದ ಫೆಬ್ರವರಿ 2 ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಹೇಳಿದರು. ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್‌ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿವೆ. ಗೌರವಾಧ್ಯಕ್ಷ ಸಯ್ಯದ್ ಕೆ.ಎಸ್. ಆಟಕೋಯ ತಂಬಳ್ ಕುಂಬೋಳ್ ಮತ್ತು ದ.ಕ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಇಂಡಿಯನ್ ಗ್ರಾಂಡ್ ಮುಫ್ಟಿ ಸುಲ್ತಾನುಲ್ ಉಲಮಾ ಉಸ್ತಾದ್ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಕಾಜೂರು ತಂಬಳ್ ವಹಿಸಲಿದ್ದಾರೆ.ಜ.24ರಂದು ಶುಕ್ರವಾರ ಸುನ್ನೀ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಸಯ್ಯದ್ ಸಾದಾತ್ ತಂಬಳ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಯ್ಯದ್ ಕೂರತ್ ತಂಬಳ್ ಪುತ್ರ ಸಯ್ಯದ್ ಮಶ್‌ಹೂದ್ ತಂಬಳ್ ಎಟ್ಟಿಕುಳಂ ಸಹಿತ ವಿವಿಧ ಜಮಾಅತ್ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಉದ್ಘಾಟನೆಯಂದು ಕಿಲ್ಲೂರು ಮಸ್ಟಿದ್‌ನಿಂದ ವಿಶೇಷ ಸಂದಲ್ ಮೆರವಣಿಗೆ ಆಗಮಿಸಿ ಸಂಜೆ 7 ಗಂಟೆಗೆ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹಿಂ ಧ್ವಜಾರೋಹಣ ನಡೆಸಲಿದ್ದಾರೆ.
ಜ.30ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ ಬೃಹತ್ ದ್ರಿಕ್ ಮಜ್ಜಿಸ್‌ಗೆ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ನೇತೃತ್ವ ನೀಡಲಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಮುಸಾಫಿರ್ ಖಾನಾ ಕಟ್ಟಡವನ್ನು ರಾಜ್ಯ ವಸತಿ, ಅಲ್ಪಸಂಖ್ಯಾಕ ಮತ್ತು ವಕ್ಸ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್ ಶಿವರಾಂ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಫೆ.2ರಂದು ಬೆಳಗ್ಗೆ ಉರೂಸ್ ನಡೆಯಲಿದ್ದು, ಸಯ್ಯದ್ ಕುಂಬೋಳ್ ತಂಬಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಯೆನೆಪೋಯ ವಿ.ವಿ. ಕುಲಪತಿ ಅಬ್ದುಲ್ಲ ಕುಂಞ (ವೈಎಂಕೆ) ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪದಲ್ಲಿ ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಕಾಜೂರು, ಇತರ ಪದಾಧಿಕಾರಿಗಳು, ದರ್ಗಾ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ಕಿಲ್ಲೂರು ಮಸ್ಜಿದ್ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ ಹಾಜರಿದ್ದರು.