ಪ್ಲಾಸ್ಟಿಕ್ ಚೀಲ ಬದಲಿಗೆ ಬಟ್ಟೆ ಬ್ಯಾಗ್ ಬಳಸಿ

| Published : Jun 06 2024, 12:31 AM IST

ಸಾರಾಂಶ

ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡುವುದು ನಮೆಲ್ಲರ ಆದ್ಯ ಕರ್ತವ್ಯ ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡುವುದು ನಮೆಲ್ಲರ ಆದ್ಯ ಕರ್ತವ್ಯ ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ್ ಹೇಳಿದರು.ತಾಲೂಕಿನ ಅಜ್ಜೀಪುರ ಶಾಲೆಯಲ್ಲಿ ಅರಣ್ಯ ಇಲಾಖೆ ಶಿಕ್ಷಣ ಇಲಾಖೆ ಹಾಗೂ ಹೋಲಿಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿ ನೆಡುವದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪರಿಸರವನ್ನು ಉಳಿಸಲು ನಾವೆಲ್ಲರೂ ಪಣ ತೊಡಬೇಕಿದೆ. ಜೊತೆಗೆ ಪ್ಲಾಸ್ಟಿಕ್ ಮುಕ್ತ ನಾಡನ್ನು ಮಾಡಲು ನಾವು ಮುಂದಾಗೇಬೇಕು. ಮೊದಲು ನಮ್ಮಿಂದಲೇ ನಾವು ಬದಲಾಗಬೇಕು ಬಳಿಕ ಎಲ್ಲರೂ ಬದಲಾಗುತ್ತಾರೆ. ಪ್ಲಾಸ್ಟಿಕ್ ಬದಲಿಗೆ ಬಟ್ಟೆಯ ಬ್ಯಾಗ್ ಗಳನ್ನು ಬಳಸುವಂತಾಗಬೇಕು. ಒಮ್ಮೆಲೆ ಪ್ಲಾಸ್ಟಿಕ್ ಬಳಕೆ ನಿಷೇದ ಮಾಡುವುದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ನಾವು ಬಳಸುವಿಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂದಾಗೇಬೇಕು ಎಂದರು.

ಹನೂರು ಬಫರ್ ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾತನಾಡಿ, ಪ್ರತಿ ಮಕ್ಕಳು ಸಹ ಒಂದೊಂದು ಗಿಡವನ್ನು ಬೆಳೆಸಬೇಕು.ಈ ನಿಟ್ಟಿನಲ್ಲಿ ಇಂದೇ ನಿಮಗಾಗಿ ನಮ್ಮ ನರ್ಸರಿಯಲ್ಲಿ ಗಿಡವನ್ನು ಮೀಸಲಿಡಲಾಗುತ್ತದೆ. ಮಕ್ಕಳು ಗಿಡಮರ ಬೆಳೆಸಿ ಜೊತೆಗೆ ನಿಮ್ಮೂರಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಆದಷ್ಟು ನಿಯಂತ್ರಣ ಮಾಡಿ ಎಂದರು.

ಜಾಥಾ ಕಾರ್ಯಕ್ರಮ: ಅಜ್ಜೀಪುರ ಸರ್ಕಾರಿ ಶಾಲೆ ಹಾಗೂ ಜೆಎಸ್ಎಸ್ ಪ್ರೌಢಶಾಲೆಯ ಮಕ್ಕಳು, ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಮೊಳಗಿಸಿ ಅಜ್ಜೀಪುರ ಬಸ್ ನಿಲ್ದಾಣದಲ್ಲಿ ಜಾಥಾ ನಡೆಸಿದರು.ಈ ಸಂದರ್ಭದಲ್ಲಿ ಅಜ್ಜೀಪುರ ಶಾಲೆಯ ಮುಖ್ಯ ಶಿಕ್ಷಕಿ ಮೇರಿ, ಗ್ರಾಮಸ್ಥ ಲೋಕೇಶ್, ಹಾಗೂ ಹೋಲಿಕ್ರಾಸ್ ಸಂಸ್ಥೆಯ ಬಸವರಾಜು, ಸುರೇಶ್ ಹಾಗೂ ಜೆಎಸ್ಎಸ್ ಪ್ರೌಢ ಶಾಲೆಯ ಶಿಕ್ಷಕ ಸ್ವಾಮಿ, ಶಿಕ್ಷಕರಾದ ವೆಂಕಟರಾಜು, ಕೊಳಂದೈರಾಜು, ದೊರೆಸ್ವಾಮಿ, ಕಲ್ಪನಾ, ಮಹಾದೇವಮ್ಮ, ಮಂಗಳಮ್ಮ, ರಮ್ಯ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.