ಕುಂದಾಪುರ: ಕೃತಕ ಬುದ್ಧಿಮತ್ತೆ (ಎಐ) ಕಾನೂನು ವೃತ್ತಿಗೆ ಸವಾಲಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ವಕೀಲರ ಕಾರ್ಯಕ್ಷಮತೆ ಹೆಚ್ಚಲಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತ ನ್ಯಾಯಾಧೀಶ ಎಂ.ಐ. ಅರುಣ್ ಹೇಳಿದರು.

ಕುಂದಾಪುರ ನ್ಯಾಯಾಲಯಗಳ ಸಂಕೀರ್ಣದ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಸದಸ್ಯೆಯಾಗಿ ಆಯ್ಕೆಯಾದ ಹಿರಿಯ ವಕೀಲೆ ಶ್ಯಾಮಲಾ ಭಂಡಾರಿ ಅವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾಲಕ್ಕೆ ತಕ್ಕಂತೆ ಬದಲಾಗದ ಯಾವುದೇ ವೃತ್ತಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಕಾನೂನು ವೃತ್ತಿ ಕೇವಲ ಉದ್ಯೋಗವಲ್ಲ. ಅದು ಸಮಾಜದಲ್ಲಿ ಪರಿವರ್ತನೆ ತರುವ ಮಹತ್ವದ ಸಾಧನವಾಗಿದೆ. ಆದ್ದರಿಂದ ವಕೀಲರು ಹಾಗೂ ಕಾನೂನು ಶಿಕ್ಷಣ ವ್ಯವಸ್ಥೆ ಹೊಸ ತಂತ್ರಜ್ಞಾನ ಮತ್ತು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೊಸ ವಕೀಲರಿಗೆ ನ್ಯಾಯಾಲಯದ ಜೊತೆಗೆ ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಪ್ರಾಯೋಗಿಕ ತರಬೇತಿ ನೀಡುವ ವ್ಯವಸ್ಥೆ ರೂಪಿಸಬೇಕು. ಮಧ್ಯಸ್ಥಿಕೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ದೀರ್ಘ ಕಾಲ ಬಾಕಿ ಉಳಿದಿರುವ ಅನೇಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ ಎಂದರು.ವಕೀಲರು ಮತ್ತು ನ್ಯಾಯಾಧೀಶರು ಜೀವನಪೂರ್ತಿ ವಿದ್ಯಾರ್ಥಿಗಳಾಗಿಯೇ ಇರಬೇಕು. ಹೊಸ ಕಾನೂನುಗಳು, ನ್ಯಾಯಾಲಯಗಳ ಮಹತ್ವದ ತೀರ್ಪುಗಳು ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಆನ್‌ಲೈನ್ ಮತ್ತು ಆಫ್‌ಲೈನ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿರಂತರ ಕಾನೂನು ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನ್ಯಾಯಾಂಗದ ಮೇಲೆ ಸಮಾಜದ ವಿಶ್ವಾಸ ಉಳಿಯಬೇಕಾದರೆ ಬದ್ಧತೆ ಮತ್ತು ಪಾರದರ್ಶಕತೆ ಅತ್ಯಗತ್ಯ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾದರೆ ಅಪರಾಧಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಅವರು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿರುವ ಸಮರ್ಥ ನಾಯಕರನ್ನು ಗುರುತಿಸುವ ಮನೋಭಾವ ಬೆಳೆಯಬೇಕು ಎಂದು ಹೇಳಿದರು.ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಾಲ್ಕು ದಶಕಗಳ ಕಾಲ ವೃತ್ತಿ ಬದ್ಧತೆಯಿಂದ ಸೇವೆ ಸಲ್ಲಿಸಿರುವ ಶ್ಯಾಮಲಾ ಭಂಡಾರಿ ಅವರು ರಾಜ್ಯ ವಕೀಲರ ಪರಿಷತ್ತಿಗೆ ಆಯ್ಕೆಯಾಗಿರುವುದು ಕುಂದಾಪುರಕ್ಕೆ ಹೆಮ್ಮೆಯ ಸಂಗತಿ ಎಂದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಮಾತನಾಡಿ, ಮಾನವೀಯ ಮೌಲ್ಯಗಳು ಹಾಗೂ ವೃತ್ತಿ ನಿಷ್ಠೆಯ ಮೂಲಕ ಶ್ಯಾಮಲಾ ಭಂಡಾರಿ ಅವರು ವಕೀಲ ವೃತ್ತಿಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.ಸನ್ಮಾನ ಸ್ವೀಕರಿಸಿದ ಶ್ಯಾಮಲಾ ಭಂಡಾರಿ ಮಾತನಾಡಿ, ವಕೀಲರ ಕಲ್ಯಾಣಕ್ಕೆ ಆದ್ಯತೆ ನೀಡಲಾಗುವುದು. ಮೃತಪಟ್ಟ ವಕೀಲರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ಹಾಗೂ ಆರೋಗ್ಯ ಸಮಸ್ಯೆ ಎದುರಿಸುವ ವಕೀಲರಿಗೆ ತುರ್ತು ಆರ್ಥಿಕ ನೆರವು ದೊರಕಿಸುವ ನಿಟ್ಟಿನಲ್ಲಿ ರಾಜ್ಯ ವಕೀಲರ ಪರಿಷತ್ತಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಶ್ಯಾಮಲಾ ಭಂಡಾರಿ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರನ್ನು ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ಕುಮಾರ್ ಜಿ., ನಿತಿನ್ ಎಸ್. ರಾವ್, ಮಂಜುಳಾ, ಶ್ರೀನಿವಾಸ ಕೆ.ಎಲ್., ಮಣಿಕಂಠ ಎಂ.ಎಸ್., ಸರ್ಕಾರಿ ಅಭಿಯೋಜಕಿ ಇಂದಿರಾ ನಾಯ್ಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಉದಯ್ ಕುಮಾರ್ ಮತ್ತು ಉಮಾ ನಾಯ್ಕ್, ಹಿರಿಯ ವಕೀಲರಾದ ಎ.ಬಿ. ಶೆಟ್ಟಿ, ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಸುಮನ್ ಕೆ. ಸುವರ್ಣ, ಜಂಟಿ ಕಾರ್ಯದರ್ಶಿ ಚರಣ್‌ರಾಜ್ ಸೇರಿದಂತೆ ಪದಾಧಿಕಾರಿಗಳು ಹಾಗೂ ವಕೀಲರು ಉಪಸ್ಥಿತರಿದ್ದರು.


ಹಿರಿಯ ವಕೀಲ ಟಿ.ಬಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಕೆ. ವಿಕಾಸ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಜೆ. ಶ್ರೀನಾಥ ರಾವ್ ಸ್ವಾಗತಿಸಿದರು. ಪ್ರಾಪ್ತಿ ಹೆಗ್ಡೆ ಪ್ರಾರ್ಥಿಸಿದರು. ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪಿ. ಜಯಚಂದ್ರ ವಂದಿಸಿದರು.