ಸಾರಾಂಶ
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾಯಿಸಲಾಗಿದೆ ಎನ್ನಲಾದ ಖಾಸಗಿ ಸಂಸ್ಥೆಗೆ ಸೇರಿದ್ದೆನ್ನಲಾದ ಬ್ಯಾಂಕ್ ಖಾತೆಯೇ ನಕಲಿ ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿ. ಸಂಸ್ಥೆಗೆ ಸೇರಿದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಆರ್‌ಬಿಎಲ್ ಬ್ಯಾಂಕ್ ಖಾತೆಗೆ 4.53 ಕೋಟಿ ರು. ನಿಗಮದ ಖಾತೆಯಿಂದ ವರ್ಗಾವಣೆಗೊಂಡಿದೆ ಎಂಬ ಅಂಶ ಪತ್ತೆಯಾಗಿತ್ತು. ಆದರೆ, ಇದೀಗ ಹ್ಯಾಪಿಯೆಸ್ಟ್ ಮೈಂಡ್ಸ್ ಸಂಸ್ಥೆ ತಾನು ಬಂಜಾರ ಹಿಲ್ಸ್‌ನ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಯಾವುದೇ ಖಾತೆಯನ್ನೂ ಹೊಂದಿಲ್ಲ ಎಂಬುದನ್ನು ತಿಳಿಸಿದೆ. ಆ ಮೂಲಕ ಹಣ ವರ್ಗಾವಣೆಗೊಂಡ ಹ್ಯಾಪಿಯೆಸ್ಟ್ ಮೈಂಡ್ಸ್ ಹೆಸರಿನ ಖಾತೆ ಯಾರಿಗೆ ಸೇರಿದ್ದು ಹಾಗೂ ಖಾಸಗಿ ಸಂಸ್ಥೆ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತೆ ಎಂಬ ಪ್ರಶ್ನೆ ಮೂಡುವಂತಾಗಿದೆ.
ನಕಲಿ ಖಾತೆಯನ್ನೇ ಸೃಷ್ಟಿಸಿದರೇ?
ಹಣವನ್ನು ಅಕ್ರಮವಾಗಿ ವರ್ಗಾಯಿಸುವುದಕ್ಕಾಗಿಯೇ ಖಾಸಗಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಲಾಯಿತೇ ಎಂಬ ಚರ್ಚೆಗಳು ಆರಂಭವಾಗಿವೆ. ಅಲ್ಲದೆ, ವಾಲ್ಮೀಕಿ ನಿಗಮದ ಲೆಟರ್‌ಹೆಡ್ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಲೆಕ್ಕಾಧಿಕಾರಿಗಳ ಸಹಿಯನ್ನು ಫೋರ್ಜರಿ ಮಾಡಿದಂತೆ ಖಾಸಗಿ ಸಂಸ್ಥೆಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆಯನ್ನು ತೆರೆಯಲಾಯಿತೇ ಎಂಬ ಅನುಮಾನವೂ ಹುಟ್ಟಿಕೊಂಡಿದೆ.
ಬೆಂಗಳೂರು ಮೂಲದ ಸಂಸ್ಥೆ:
ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಸಂಸ್ಥೆಯ ಹೆಸರು ಕೇಳಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ವೆಂಕಟರಮಣ, ಆರ್‌ಬಿಎಲ್ ಬ್ಯಾಂಕ್‌ಗೆ ಪತ್ರ ಬರೆದು ನಿಗಮದ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಖಾತೆ ಸಂಖ್ಯೆ: 00015010055200010 ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಸಂಸ್ಥೆಯದ್ದೇ ಎಂಬುದರ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿರುವ ಆರ್‌ಬಿಎಲ್ ಬ್ಯಾಂಕ್, ನಮೂದಿತ ಖಾತೆ ಸಂಖ್ಯೆಗೂ, ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿರುವ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಸಂಸ್ಥೆ, ತಮಗೂ, ನಿಗಮದ ಹಣ ಅಕ್ರಮ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಸಂಸ್ಥೆಯು ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಖಾತೆಯನ್ನೇ ಹೊಂದಿಲ್ಲ ಎಂದು ತಿಳಿಸಿದೆ.