ಸಾರಾಂಶ
- ತಂಬಾಕುರಹಿತ ದಿನ- ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಕೀಲ ಮಂಜುನಾಥ್ ಸಲಹೆ- - - ಕನ್ನಡಪ್ರಭ ವಾರ್ತೆ ಹರಿಹರ
ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ತ್ಯಜಿಸಿ ಉತ್ತಮ ಜೀವನ, ಆರೋಗ್ಯವನ್ನು ಹೊಂದಬೇಕು ಎಂದು ವಕೀಲ ಮಂಜುನಾಥ್ ಹೇಳಿದರು.ನಗರದ ಕೆಸಿವಿ ಐಟಿಐ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ತಂಬಾಕುರಹಿತ ದಿನ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕೆಲವರು ನಶೆಯ ಮಾಯಾಜಾಲಕ್ಕೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ -ತಾಯಿ ಕಂಡ ಭವಿಷ್ಯದ ಕನಸುಗಳಿಗೆ ತಣ್ಣೀರೆರಚುತ್ತಿರುವುದು ಬೇಸರ ಸಂಗತಿ. ಇಂದು ಶಾಲಾ- ಕಾಲೇಜುಗಳಲ್ಲಿ ಈ ವಿಷಯ ಕುರಿತು ವಿದ್ಯಾರ್ಥಿಗಳೊಂದಿಗೆ ನಿರಂತರ ಸಮಾಲೋಚನೆ ಮಾಡುವುದು ಅವಶ್ಯಕವಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಮಾದಕ ದ್ರವ್ಯಗಳ ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ಬಹುಬೇಗ ಹತ್ತಿರವಾಗುತ್ತೀರಿ. ಕ್ಯಾನ್ಸರ್ ರೋಗದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕ್ಯಾನ್ಸರ್ ರೋಗ ಬರಲು ಮೂಲ ಕಾರಣವಾದ ತಂಬಾಕು ಸೇವನೆ ತ್ಯಜಿಸಿ, ದೇಶವನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಪ್ರಭಾರ ತಾಲೂಕು ಅರೋಗ್ಯ ಅಧಿಕಾರಿ ಡಾ. ಪ್ರಶಾಂತ್ ಕುಮಾರ್ ಮಾತನಾಡಿ, ಮಾದಕ ದ್ರವ್ಯಗಳ ಸೇವನೆಯಿಂದ ದೇಹದಲ್ಲಿ ವಿಪರೀತ ಕೆಟ್ಟ ಪರಿಣಾಮ ಬೀರುತ್ತದೆ. ಮನೋರೋಗ, ಮನೋದೌರ್ಬಲ್ಯ ಉಂಟಾಗುತ್ತದೆ. ಅನಂತರ ಸಾವು ಸಂಭವಿಸಿದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.ಮಾದಕ ದ್ರವ್ಯಗಳ ಸೇವನೆ ಎನ್ನುವುದು ಆಧುನಿಕ ದೇಶದಲ್ಲಿ ರಾಷ್ಟ್ರೀಯ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದ ಮುಕ್ತರಾಗಲು ಎಲ್ಲ ದೇಶದ ವಿಜ್ಞಾನಿಗಳು, ಚಿಂತಕರು. ಸರ್ಕಾರದವರು ಚಿಂತಿಸುತ್ತಿದ್ದಾರೆ. ಆದರೆ, ಇನ್ನೂ ಪರಿಣಾಮಕಾರಿಯಾದ ಪರಿಹಾರ ಕಂಡುಹಿಡಿಯಲಾಗುತ್ತಿಲ್ಲ ಎಂದರು.
ವೃತ್ತ ನಿರೀಕ್ಷಕ ಶ್ರೀಪಾದ್ ಗಿನ್ನಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ ಕೆಲಸವಾಗಿದೆ. ಶಾಲಾ-ಕಾಲೇಜುಗಳಿಂದ ೧೦೦ ಮೀಟರ್ ಒಳಗೆ ಯಾರು ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ಒಂದುವೇಳೆ ಮಾರಾಟ ಮಾಡಿದರೆ ಶಿಕ್ಷೆಗೆ ಒಳಗಾಗುತ್ತಾರೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಆಸ್ತಿ. ತಂಬಾಕು ಸೇವನೆಯಿಂದ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.ಸಾರ್ವಜನಿಕ ಆಸ್ಪತ್ರೆಯ ಡಾ.ಕಿರಣ್, ಪ್ರಾಂಶುಪಾಲ ರಾಘವೇಂದ್ರ, ಸಂಸ್ಥೆಯ ಕಾರ್ಯದರ್ಶಿ ಪರಶುರಾಮ್ ಕಾಟ್ವೆ, ಸದಸ್ಯರಾದ ಮನೋಹರ್ ಸಾ ಸೋಲಂಕಿ, ಇಲಾಖೆ ಅಧಿಕಾರಿ ಎಂ.ಉಮ್ಮಣ್ಣ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್. ಕಾಲೇಜಿನ ಸಿಬ್ಬಂದಿ, ಪಾಲ್ಗೊಂಡಿದ್ದರು.
- - - -೧ಎಚ್‌ಆರ್‌ಆರ್೨:ತಂಬಾಕು ರಹಿತ ದಿನ ಅಂಗವಾಗಿ ಹರಿಹರ ನಗರದ ಕೆಸಿವಿ ಐಟಿಐ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಮತ್ತು ಕಾನೂನು ಸೇವಾ ಸಮಿತಿಯಿಂದ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.