ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಆರ್‌ಎಸ್ ಜಲಾಶಯದ ನಿರ್ಮಾಣ ಉದ್ದೇಶ ಕೃಷಿಗೆ ಮಾತ್ರವಾಗಿತ್ತು. ಆದರೆ, ಇಂದು ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಕೃಷಿಯನ್ನೇ ನಾಶ ಮಾಡಲು ಹೊರಟಿವೆ ಎಂದು ಎಸ್.ಬಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಿವಲಿಂಗಯ್ಯ ವಿಷಾದಿಸಿದರು.ಪಟ್ಟಣದ ಕನಕಪುರ ರಸ್ತೆಯ ಕೆ.ಎನ್.ನಾಗೇಗೌಡ ಬಡಾವಣೆಯ ಶ್ರೀರಾಮ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಂಗಳೂರಿನ 6ನೇ ಹಂತದ ಕುಡಿಯುವ ನೀರಿನ ಯೋಜನೆ ಕೈಬಿಡುವಂತೆ ಆಗ್ರಹಿಸಿ ಹೋರಾಟ ರೂಪಿಸಲು ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಶುದ್ಧೀಕರಿಸಿ ಕುಡಿಯಲು ಬಳಸುವ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಬೆಂಗಳೂರಿಗರ ಸಮಸ್ಯೆಗೆ ಅವರಲ್ಲಿಯೇ ಪರಿಹಾರ ಇದೆ. ಅದನ್ನು ಬಿಟ್ಟು ಜಿಲ್ಲೆಯ ಜನರ ಜೀವವಾಗಿರುವ ಕೆಆರ್ ಎಸ್ ಜಲಾಶಯದಿಂದ ನೀರು ತೆಗೆದುಕೊಂಡು ಹೋಗಿ ರೈತರ ಬದುಕನ್ನು ಬೀದಿ ಪಾಲು ಮಾಡಲು ಸರ್ಕಾರ ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬೆಂಗಳೂರಿನ 6ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ಆಗುವ ಅನಾಹುತಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸಬೇಕು. 6 ಟಿಎಂಸಿ ನೀರನ್ನು ಕೆಆರ್ ಎಸ್ ಜಲಾಶಯದ ಹತ್ತಿರದಿಂದ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ಯೋಜನೆಯಲ್ಲಿ ಡೆಡ್ ಸ್ಟೋರೆಜ್ ನಿಂದಲೂ ನೀರು ಪಡೆಯುವ ಉದ್ದೇಶ ಇರುಬಹುದಾ ಎನ್ನುವ ಅನುಮಾನ ಕಾಡುತ್ತಿದೆ ಎಂದು ಪ್ರಶ್ನಿಸಿದರು.
ನೀರಾವರಿ ತಜ್ಞ ಕೆ.ಆರ್.ನಗರದ ಅರ್ಜುನಹಳ್ಳಿ ಪ್ರಸನ್ನ ಮಾತನಾಡಿ, ಈಗಾಗಲೇ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಸಿಗುತ್ತಿಲ್ಲ. ಈ ಯೋಜನೆಯಾದರೂ ಜಾರಿಯಾದರೆ ಜಿಲ್ಲೆಯ ಜನರಿಗೆ ಮರಣ ಶಾಸನವಾಗಲಿದೆ. ಜಿಲ್ಲೆಯ ರೈತರಿಗೆ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಸಿದರು.
ಸಂಪೂರ್ಣ ಸಾವಯವ ಕೃಷಿಕ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ಕೆಆರ್‌ಎಸ್ ನೀರನ್ನು ಕೃಷಿಗೆ ಒತ್ತು ನೀಡುವ ಬದಲು ಬೆಂಗಳೂರಿಗೆ ಕುಡಿಯಲು ನೀಡುತ್ತಿರುವುದು ರೈತರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರೈತರು ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗದಿದ್ದರೇ ಸರ್ಕಾರ ಇಷ್ಟ ಬಂದ ರೀತಿಯಲ್ಲಿ ಕ್ರಮ ಕೈಗೊಂಡು ರೈತರಿಗೆ ಅನ್ಯಾಯ ಮಾಡಲು ಮುಂದಾಗುತ್ತಾರೆ ಎಂದರು.
ಸಭೆಯಲ್ಲಿ ರೈತ ಸಂಘದ ಮುಖಂಡರಾದ ಬೋರಯ್ಯ, ಇಂಡವಾಳು ಚಂದ್ರಶೇಖರ್, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರಗತಿಪರ ರೈತರು ಪಾಲ್ಗೊಂಡಿದ್ದರು.