ಸಾರಾಂಶ
ಜಿಲ್ಲಾ ನಾಯಕ ಸಮುದಾಯದಿಂದ ವಾಲ್ಮೀಕಿ ನಿರ್ಮಾಣಕ್ಕೆ ಗುದ್ದಲಿಪೂಜೆಗೆ ಆಗ್ರಹಿಸಿ ನುಗ್ಗಲು ಯತ್ನಿಸಿದವರನ್ನು ಪೊಲೀಸರು ಬಂಧಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ ಭವನದ ಆವರಣದಲ್ಲಿ ಶ್ರೀ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಜಿಲ್ಲಾ ನಾಯಕ ಸಮುದಾಯದಿಂದ ಶ್ರೀ ವಾಲ್ಮೀಕಿ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡಸುವುದರ ಜತೆಗೆ ಶಕ್ತಿ ಪ್ರದರ್ಶನ ಮಾಡಿದರು.ನಗರದ ಪ್ರವಾಸಿ ಮಂದಿರದ ಬಳಿಯಿಂದ ಬೆಳ್ಳಿರಥದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಜತೆಗೆ ವಿವಿಧ ಗ್ರಾಮಗಳಿಂದ ಅಲಂಕೃತ ವಾಹನದಲ್ಲಿ ವಾಲ್ಮೀಕಿ ಭಾವಚಿತ್ರಗಳು, ವಿವಿಧ ಜಾನಪದ ಕಲಾತಂಡಗಳೊಂದಿಗೆ ಕಾರ್ಯಕ್ರಮದ ಸ್ಥಳದವರೆಗೆ ಅದ್ಧೂರಿಯಾಗಿ ನಡೆಯಿತು.
ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆ ಸತ್ತಿರಸ್ತೆ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಜೋಡಿರಸ್ತೆಯ ಮೂಲಕ ತಾಲೂಕು ನಾಯಕರ ವಿದ್ಯಾರ್ಥಿನಿಲಯದ ಆವರಣದಲ್ಲಿ ನಿರ್ಮಿಸಿರುವ ವೇದಿಕೆ ಬಳಿ ಮುಕ್ತವಾಯಿತು.ಮೆರವಣಿಗೆಗೆ ನಾನಾ ಕಲಾತಂಡಗಳು ಮೆರಗು:
ವಾಲ್ಮೀಕಿ ವೇಷಧಾರಿ ಮೆರವಣಿಗೆಗೆ ಮೆರಗು ತಂದವು. ಜಿಲ್ಲೆಯ ಐದು ತಾಲೂಕುಗಳಿಂದ ಬಂದಿದ್ದ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಿ ಶಕ್ತಿ ಪ್ರದರ್ಶನದ ಜತೆಗೆ ಮೆರವಣಿಗೆ ಉದ್ದಕ್ಕೂ ಶ್ರೀ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಇಂದೇ ಗುದ್ದಲಿಪೂಜೆ ನೆರವೇರಿಸುವಂತೆ ಘೋಷಣೆ ಕೂಗಿದರು.ಗುದ್ದಲಿಪೂಜೆಗೆ ಯತ್ನ-ಬಂಧನ
ಸಮಾರಂಭದ ನಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುದ್ದಲಿಪೂಜೆ ನೆರವೇರಿಸಲು ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನಿಸಿದ ನೂರಾರು ಮಂದಿ ನಾಯಕ ಸಮುದಾಯದವರನ್ನು ಪೊಲೀಸರು ವಶಕ್ಕೆ ಪಡೆದರು. ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ವಾಲ್ಮೀಕಿ ಜಯಂತಿ ಸರ್ಕಾರದ ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಮುದಾಯದವರೇ ವಿಜೃಂಭಣೆಯಿಂದ ಪರ್ಯಾಯ ಜಯಂತಿ ಆಚರಿಸಿದರು. ಆಚರಣೆ ಬಳಿಕ, ಸ್ವತಃ ಪುತ್ಥಳಿ ನಿರ್ಮಾಣದ ಭೂಮಿ ಪೂಜೆಗೆ ನೂರಾರು ಮಂದಿ ಜಿಲ್ಲಾಡಳಿತ ಭವನಕ್ಕೆ ನುಗ್ಗುವ ಯತ್ನ ಮಾಡಿದರು.ಪೊಲೀಸರು ತಡೆದಿದ್ದಕ್ಕೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮೈಸೂರಿನ ಜಿಲ್ಲಾಡಳಿತ ಭವನ ಆವರಣದಲ್ಲಿ ಭೂಮಿಪೂಜೆ ಆದಂತೆ ಚಾಮರಾಜನಗರದಲ್ಲಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಮುಖಂಡರಾದ ಪು.ಶ್ರೀನಿವಾಸನಾಯಕ, ಎಂ.ರಾಮಚಂದ್ರ, ಕೆಲ್ಲಂಬಳ್ಳಿ ಸೋಮನಾಯಕ, ಸುರೇಶನಾಯಕ, ಆರ್, ಸುಂದರ್, ಜಯಸುಂದರ, ವಿರಾಟ್ ಶಿವು, ಚಂದ್ರಶೇಖರ್, ಮಲ್ಲೇಶನಾಯಕ, ಚಂಗುಮಣಿ, ಕಂಡಕ್ಟರ್ ಸೋಮು, ಶಿವರಾಜ್, ಚಂದ್ರಶೇಖರ್ ಸೇರಿ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.